ADVERTISEMENT

ಬಿಎಸ್‌ವೈ ಜೈಲಿಗೆ: ರಾಜ್ಯಕ್ಕೆ ಕಪ್ಪುಚುಕ್ಕೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 9:50 IST
Last Updated 17 ಅಕ್ಟೋಬರ್ 2011, 9:50 IST

ಹಾವೇರಿ: `ಭ್ರಷ್ಟಾಚಾರ, ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗಿರುವುದು ರಾಜ್ಯದ ಗೌರವಕ್ಕೆ ಕಪ್ಪು ಚುಕ್ಕೆಯಾಗಿದೆ~ ಎಂದು ಹಿರಿಯ ಸಾಹಿತಿ ಡಾ.ದೇ.ಜವರೇಗೌಡ ಅಭಿಪ್ರಾಯಪಟ್ಟರು.

ಭಾನುವಾರ ನಗರದಲ್ಲಿ ಸಾಹಿತ್ಯ ಬಳಗ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂತಹದೊಂದು ಘಟನೆ ನಡೆದಿದೆ ಎಂಬುದು ಬೇಸರದ ಸಂಗತಿಯಾಗಿದ್ದು, ರಾಜಕಾರಣಿಗಳಿಗೆ ಇದೊಂದು ಪ್ರಕರಣ ಎಚ್ಚರಿಕೆ ಗಂಟೆಯಾಗಬೇಕು ಎಂದರು.

ರಾಜಕಾರಣ ಎನ್ನುವುದು ಹದಗೆಟ್ಟು ಹೋಗಿರುವ ಕ್ಷೇತ್ರವಾಗಿದೆ. ಅದರ ಸುಧಾರಣೆಗೆ ಇರುವ ಮಾರ್ಗ ಎಂದರೆ, ರಾಜಕಾರಣಿಗಳಲ್ಲಿ ಓದುವ ಪ್ರವೃತ್ತಿ ಯನ್ನು ಹುಟ್ಟುಹಾಕಬೇಕಿದೆ. ಇಂತಹ ಪ್ರವೃತ್ತಿಯನ್ನು ರಾಜಕಾರಣಿಗಳೇ ಬೆಳೆಸಿಕೊಳ್ಳಬೇಕಿದೆ. ರಾಜಕಾರಣಿಗಳು ಬಸವಣ್ಣನವರ ವಚನಗಳು, ಮಹಾ ಭಾರತ, ರಾಮಾಯಣಗಳನ್ನು ತಪ್ಪದೆ ಓದಬೇಕು ಎಂದು ಸಲಹೆ ಮಾಡಿದರು.

ಓದುವ ಪ್ರವೃತ್ತಿ ಕಡಿಮೆಯಾಗುತ್ತಿ ರುವುದೇ ಇಂತಹ ಎಲ್ಲ ಅವಘಡಗಳಿಗೆ ಕಾರಣ ಇರಬಹುದು ಎಂಬ ಶಂಕೆ ಕಾಡುತ್ತಿದ್ದು, ಓದುವ ಪ್ರವೃತ್ತಿಯಿಂದ ಸಾಹಿತ್ಯ ಶ್ರೀಮಂತವಾಗುತ್ತದೆ. ಜತೆಗೆ ಮನುಷ್ಯ ಕೂಡ ಸಾಕಷ್ಟು ಚಿಂತನಾ ಶೀಲನಾಗುತ್ತಾನೆ. ಕನಕ ದಾಸರು, ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಓದು ವುದರಿಂದ ಮನಸ್ಸಿನಲ್ಲಿಯ ಕೆಟ್ಟ ವಿಚಾರಗಳನ್ನು ಹೊರಗೆ ಹಾಕ ಬಹುದಾಗಿದೆ ಎಂದು ಅವರು ತಿಳಿಸಿದರು.

ದೇಶದ ಅಭಿವೃದ್ಧಿ, ಶ್ರೀಮಂತಿಕೆ ದುಡ್ಡಿನಿಂದ ಎಂಬುದು ತಪ್ಪು ಕಲ್ಪನೆ. ಸಾಹಿತ್ಯ ಶ್ರೀಮಂತವಾದರೆ ದೇಶದ ತಾನಾಗಿಯೇ ಅಭಿವೃದ್ಧಿಯಾಗುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿತು ಕೊಳ್ಳಬೇಕಿದೆ ಎಂದರು.

ಕನ್ನಡ ಶಿಕ್ಷಣ ಬೇಕು: ಮಕ್ಕಳಿಗೆ ಕನ್ನಡ್ಲಲೇ ಶಿಕ್ಷಣ ನೀಡಬೇಕು. ಇಂಗ್ಲಿಷ್‌ಗಿಂತಲೂ ಹಳೆಯದಾದ ಭಾಷೆ ಕನ್ನಡ. ಆದರೆ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡಕ್ಕೆ ಧಕ್ಕೆ ಯುಂಟಾಗುತ್ತದೆ. ಹಾಗಂತ ಇಂಗ್ಲಿಷ್ ಭಾಷಾ ವಿರೋಧಯಾಗಬಾರದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಅತ್ಯಗತ್ಯ ಆದರೆ, ಪ್ರಾಥಮಿಕ ಹಂತದಲ್ಲಿ ಮಾತ್ರ ಕನ್ನಡದಲ್ಲಿಯೇ ಶಿಕ್ಷಣ ನೀಡಬೇಕು. ಇಂಗ್ಲಿಷ್‌ನ್ನು ಕೇವಲ ಒಂದು ಭಾಷೆಯನ್ನಾಗಿ ಕಲಿಸ ಬೇಕು ಎಂದು ಸಲಹೆ ಮಾಡಿದರು.

ಕನ್ನಡವನ್ನು ಇನ್ನಷ್ಟು ಶ್ರೀಮಂತ ಗೊಳಿಸಲು ಕಡ್ಡಾಯವಾಗಿ ಕನ್ನಡ ದಲ್ಲಿಯೇ ಶಿಕ್ಷಣ ದೊರೆಯುವಂತಾ ಗಬೇಕು. ಜತೆಗೆ ಕನ್ನಡಕ್ಕೆ ಹೊಸ ಹೊಸ ಪದಗಳನ್ನು ಪರಿಚಯಿಸುವ ಕೆಲಸವಾಗ ಬೇಕು. ಬೇರೆ ಬೇರೆ ಭಾಷೆಗಳ ಪದ ಗಳನ್ನು ಎರುವಲಾಗಿ ಪಡೆಯುವ ಮೂಲಕ ಇದನ್ನು ಶ್ರೀಮಂತ ಭಾಷೆ ಯನ್ನಾಗಿ ಮಾಡುವ ಅಗತ್ಯವಿದೆ ಎಂದರು.
ಜಾನಪದ ವಿಶ್ವ ವಿದ್ಯಾಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಗುರುತರ ಜವಾಬ್ದಾರಿ ಕುಲಪತಿಗಳ ಮೇಲಿದ್ದು, ಅವರು ಹೆಚ್ಚೆಚ್ಚು ಕ್ರೀಯಾ ಶೀಲರಾಗಿ ಕೆಲಸ ಮಾಡುವತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಹಾವೇರಿ ಸಾಹಿತ್ಯದ ಬಳಗದ ಪರವಾಗಿ ದೇ. ಜವರೇಗೌಡರನ್ನು  ಅವರನ್ನು ಫಲ ಪುಷ್ಪ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪುರ, ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ವಿ.ಎಂ. ಪತ್ರಿ, ಆರ್.ಕೆ. ಬೆಳ್ಳಿಗಟ್ಟಿ, ಪರಿಮಳಾ ಜೈನ್, ಗಂಗಾಧರ ನಂದಿ, ಸಿ.ಎಸ್. ಮರಳಿಹಳ್ಳಿ, ರೇಣುಕಾ ಗುಡಿಮನಿ, ಸಂಕಮ್ಮ ಸಂಕಣ್ಣನವರ, ಬಸಮ್ಮ ಹಳಕೊಪ್ಪ ಸೇರಿದಂತೆ ಅನೇಕರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.