ADVERTISEMENT

ಮಣ್ಣು ಕುಸಿದು ತುಂಗಾ ಮೇಲ್ದಂಡೆ ಕಾಲುವೆ ಜಖಂ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 3:50 IST
Last Updated 7 ಜುಲೈ 2012, 3:50 IST

ಹಿರೇಕೆರೂರ: ತಾಲ್ಲೂಕಿನ ಕಡೂರ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಲ್ಲಿ ಮಣ್ಣು ಕುಸಿದು ಸುರಂಗ ಮಾದರಿ ಕಾಲುವೆಯ ಗೋಡೆ ಜಖಂಗೊಂಡ ಘಟನೆ ಗುರುವಾರ ನಡೆದಿದೆ.

ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ 112ನೇ ಕಿ.ಮಿ.ಬಳಿ ಸುರಂಗ ಮಾದರಿ ಕಾಲುವೆಯ ಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಗುರುವಾರ ಏಕಾಏಕಿ ಮಣ್ಣು ಹಾಗೂ ದೊಡ್ಡ ಪ್ರಮಾಣದ ಬಂಡೆಗಲ್ಲುಗಳು ಕುಸಿದು ಕಾಲುವೆ ಪಕ್ಕದ ಗೋಡೆ ಜಖಂಗೊಂಡಿದೆ.

ಮುಂಜಾಗೃತ ಕ್ರಮವಾಗಿ ನೀರಾವರಿ ನಿಗಮದ ಅಧಿಕಾರಿಗಳು ಕಾಲುವೆಯ ಎರಡೂ ಕಡೆ ಮಣ್ಣನ್ನು ತೆರವುಗೊಳಿಸಿ ಕಾಮಗಾರಿ ಕೈಗೊಳ್ಳದಿರುವುದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಕಡೂರ ಗ್ರಾಮದ ರೈತರು ಕಾಮಗಾರಿ ಸ್ಥಗಿತ ಗೊಳಿಸಿದ್ದಾರಲ್ಲದೇ, ಹಿರಿಯ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿ ಪರಿಶೀಲಿಸುವವರೆಗೆರ ಕಾಮಗಾರಿ ನಡೆಸದಂತೆ ಅವರು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಸರಿಯಾಗಿ ಕಾಲುವೆಗಳ ಎರಡು ರಾಶಿಯಾಗಿ ಹಾಕಲಾಗಿದ್ದ ಮಣ್ಣಿನ ದಿಣ್ಣೆಯನ್ನು ಸರಿಯಾಗಿ ತೆರವು ಮಾಡುವ ಕಾರ್ಯವನ್ನು ಕಾಲ ಕಾಲಕ್ಕೆ ಮಾಡುತ್ತಾ ಬಂದಿದ್ದರೆ ಘನೆ ಸಂಭವಿಸುತ್ತಿರಲಿಲ್ಲ ಎಂದಿದ್ದಾರೆ.
ರೈತರ ಪ್ರತಿಭಟನೆ: ಕಾಲುವೆ ಜಖಂಗೊಳ್ಳಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಗ್ರಾಮದ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಈ ಘಟನೆಯಿಂದ ಕಾಲುವೆ ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ ಎಂದ ರೈತರು, ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರವಾಗಿದೆ. ಈಗಾಗಲೆ ತೋಡಿರುವ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ ಸೇರಿದಂತೆ ಹೊಲ ಗಾಲುವೆ ಹಾಗೂ ದಾಟು ಸೇತುವೆಗಳು, ಕಾಲುವೆಗೆ ಹೊಂದಿಸುತ್ತಿರುವ ಪ್ಲೇಟ್‌ಗಳು ಕಳಪೆಯಿಂದ ಕೂಡಿವೆ. ಯೋಜನೆಯಲ್ಲಿ ಆಗಿರುವ ಅವ್ಯವಹಾರದ ತನಿಖೆಗಾಗಿ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು. ಈ ಅವ್ಯವಹಾರದ ತನಿಖೆಯಾಗಿ ತಪ್ಪಿತಸ್ಥರ ವಿರದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ರೈತ ಮುಖಂಡರಾದ ಚಂದ್ರಶೇಖರಪ್ಪ ತುಮ್ಮಿನಕಟ್ಟಿ, ಭೀಮನಗೌಡ ಸಾಹುಕಾರ, ರಾಮನಗೌಡ ಮೂಲಿಮನಿ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಶೇಖಪ್ಪ ಶೇತ್‌ಸನದಿ, ಹನುಮಂತಗೌಡ ಪಾಟೀಲ, ರುದ್ರಪ್ಪ ಆನ್ವೇರಿ, ಅನಂತಪ್ಪ ದೂಳಪ್ಪನವರ, ಸೋಮು ಸಾಹುಕಾರ, ರಾಮಕ್ಕಜ್ಜಿ ಸುಣಗಾರ, ಸೋಮಪ್ಪ ಹೊಸರಾಯಪ್ಪನವರ, ಭೀಮಣ್ಣ ಮೇದೂರ, ಶಿದ್ಲಿಂಗಪ್ಪ ಇಂಗಳಗೊಂದಿ ಹಾಗೂ ಅನೇಕರು ಪ್ರತಿಭಟನೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.