ADVERTISEMENT

ಮಹಿಕೊ ಕಂಪೆನಿ ವಿರುದ್ಧ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 10:20 IST
Last Updated 18 ಜುಲೈ 2012, 10:20 IST
ಮಹಿಕೊ ಕಂಪೆನಿ ವಿರುದ್ಧ ರೈತರ ಪ್ರತಿಭಟನೆ
ಮಹಿಕೊ ಕಂಪೆನಿ ವಿರುದ್ಧ ರೈತರ ಪ್ರತಿಭಟನೆ   

ರಾಣೆಬೆನ್ನೂರ: ಬೀಜೋತ್ಪಾದನೆ ಒಪ್ಪಂದದ ಪ್ರಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಕಮದೋಡ ಬಳಿ ಇರುವ ಮಹಿಕೊ ಕಂಪೆನಿ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ರೈತ ಸಂಘದ ಮುಖಂಡ ಶಿವಾನಂದ ಗುರುಮಠ ಮಾತನಾಡಿ, ರಾಜ್ಯದಲ್ಲಿ ಬಿಟಿ ಹತ್ತಿ ಬೀಜ ಉತ್ಪಾದನೆ ಮಾಡಲು ಪರವಾನಿಗೆ ಇಲ್ಲ. ಮಹಿಕೋ ಕಂಪೆನಿಯವರು ಅಕ್ರಮವಾಗಿ ಬೀಜೋತ್ಪಾದನೆ ಮಾಡುತ್ತಿದ್ದಾರೆ ಎಂದು ದೂರಿದರು.

ಚಳ್ಳಕೇರಿ ತಾಲ್ಲೂಕಿನ ಮೂವರು ರೈತರಿಗೆ ಬೀಜ ಉತ್ಪಾದನೆ ಮಾಡಲು ಅನುಮತಿ ನೀಡಲಾಗಿದೆ. ಪ್ರತಿ ಕ್ವಿಂಟಲ್ ಬೀಜಕ್ಕೆ ರೂ 43 ಸಾವಿರ ನೀಡುವ ಒಪ್ಪಂದವಾಗಿತ್ತು. ಆ ಪ್ರಕಾರ ರೈತರು ಬೀಜ ಉತ್ಪಾದನೆ ಮಾಡಿ ಮಹಿಕೊ ಕಂಪೆನಿಗೆ 12 ಕ್ವಿಂಟಲ್ ಬೀಜ ನೀಡಿದ್ದರು. ಈಗ ಕಂಪೆನಿಯು ಕೇವಲ 9 ಕ್ವಿಂಟಲ್ ಬೀಜವಿದೆ.

ಬೀಜದಲ್ಲಿ ಸರಿಯಾಗಿ ಜರ್ಮಿನೇಶನ್ ಆಗಿಲ್ಲ. ಉತ್ಪಾದನೆ ಸರಿಯಾಗಿಲ್ಲ, ಬೀಜ ವಾಪಸ್ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.

ತಾವು ಉತ್ಪಾದನೆ ಮಾಡದ ಬೀಜವನ್ನು ವಾಪಸ್ ನೀಡುತ್ತಿದ್ದಾರೆ. ತಾವು ಕೊಟ್ಟ ಬೀಜವನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಸುಳ್ಳು ಆಪಾದನೆ ಮಾಡಿ ವ್ಯವಸ್ಥಿತವಾಗಿ ರೈತರನ್ನು ವಂಚಿಸುತ್ತಿದೆ ಎಂದು ರೈತರು ದೂರಿದರು.

ಬೀಜ ವ್ಯವಹಾರದ ಲಾಭದ ದುರಾಸೆಗಾಗಿ ಬೀಜೋತ್ಪಾದನೆಯ ಮಹಿಕೊ ಕಂಪೆನಿ ಅಧಿಕಾರಿಗಳು ರೈತರ ಉತ್ಪಾದನೆಯ ಗುಣಮಟ್ಟ ಸರಿಯಿಲ್ಲವೆಂದು ಹೇಳುತ್ತಿದ್ದಾರೆ. ಕಂಪೆನಿಯ ನಿರ್ಧಾರದಿಂದ ರೈತರಿಗೆ ಅನ್ಯಾಯವಾಗಿದ್ದು, ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಚಳ್ಳಕೇರಿ ರೈತರು, ರೈತ ಮುಖಂಡರಾದ ಬಿ.ಎಂ ಜಯದೇವ, ಸಿದ್ಧನಗೌಡ ಪಾಟೀಲ, ರಾಜಶೇಖರ ದೂದಿಹಳ್ಳಿ, ಶಾಮಸುಂದರ ಕೀರ್ತಿ ಭಾಗವಹಿಸಿದ್ದರು.

ರೈತರಿಗೆ ಆಗಿರುವ ಅನ್ಯಾಯ ಕುರಿತು ತಹಶೀಲ್ದಾರ ಮಹ್ಮದ್ ಜುಬೈರ್ ಮಹಿಕೊ ಕಂಪೆನಿ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.