ADVERTISEMENT

ಮೃತ್ಯುಂಜಯ ಅಪ್ಪಗಳ ಜೀವನ ಮೇಲ್ಪಂಕ್ತಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 6:00 IST
Last Updated 16 ಫೆಬ್ರುವರಿ 2012, 6:00 IST

ಹಿರೇಕೆರೂರ: `ಒಡಲ ಕಳವಳದ ರುಚಿಗೆ ಮೈದೋರದೇ ವೈರಾಗ್ಯಶೀಲರಾಗಿ ತಮ್ಮ ಚರಿತ್ರೆಯು ದೇದಿಪ್ಯಮಾನ ಆಗುವಂತೆ ಜೀವನ ನಡೆಸಿದವರಲ್ಲಿ ಮೃತ್ಯುಂಜಯ ಅಪ್ಪಗಳು ಮೇಲ್ಪಂಕ್ತಿ ಹೊಂದಿದವರು~ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಹಂಸಭಾವಿ ಗ್ರಾಮದಲ್ಲಿ ಮಂಗಳವಾರ ಸಂಜೆ ಮೃತ್ಯುಂಜಯ ಅಪ್ಪಗಳ ಜಾತ್ರಾ ಮಹೋತ್ಸವ ಮತ್ತು ಮೃತ್ಯುಂಜಯ ವಿದ್ಯಾಪೀಠದ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

`ಹಂಸಭಾವಿಯಲ್ಲಿ ಮೃತ್ಯುಂಜಯ ಅಪ್ಪಗಳು ಹೊತ್ತಿಸಿದ ಜ್ಞಾನಜ್ಯೋತಿಯಾಗಿರುವ ಮೃತ್ಯುಂಜಯ ವಿದ್ಯಾಪೀಠ ಹೆಮ್ಮರವಾಗಿ ಬೆಳೆದು ಕಡಲಾಚೆಗೂ ತನ್ನ ಬಾಹುಗಳನ್ನು ಪಸರಿಸಿದೆ. ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ~ ಎಂದರು.

ದಾವಣಗೆರೆಯ ವೈದ್ಯ ಡಾ. ಎಚ್.ಬಿ. ಶಿವಕುಮಾರ ಸನ್ಮಾನ ಸ್ವೀಕರಿಸಿ, `ಗ್ರಾಮೀಣ ಭಾಗದಲ್ಲಿ ಮೃತ್ಯುಂಜಯ ವಿದ್ಯಾಪೀಠ ಅಚ್ಚುಕಟ್ಟಾಗಿ ಬೆಳೆದು ಮೃತ್ಯುಂಜಯ ಅಪ್ಪಗಳ ಭವ್ಯ ಪರಂಪರೆಯನ್ನು ಉಳಿಸಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಅಭಿಮಾನ ಹೆಚ್ಚಿಸಿದೆ~ ಎಂದರು. 

 `ಅಪ್ಪಗಳ ಸಾಮಾಜಿಕ ಕಳಕಳಿಗೆ ತಲೆಬಾಗಿ ಅಳಿಲು ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ವಿದ್ಯಾಪೀಠದ ಬೆಳವಣಿಗೆಗೆ ಒಂದು ಲಕ್ಷ ರೂಪಾಯಿ ದಾನವನ್ನು ನೀಡುತ್ತಿರುವುದಾಗಿ~ ತಿಳಿಸಿದರು.

ಕಡೇನಂದಿಹಳ್ಳಿ ವೀರಭದ್ರ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೃತ್ಯುಂಜಯ ವಿದ್ಯಾಪೀಠದ ಅಧ್ಯಕ್ಷ ಡಾ.ಎಸ್.ಎಂ.ಎಲಿ ವಹಿಸಿದ್ದರು. ಮೃತ್ಯುಂಜಯ ವಿದ್ಯಾಪೀಠದ ಕಾರ್ಯಾಧ್ಯಕ್ಷ ಪಿ.ವಿ. ಕೆರೂಡಿ ಮಾತನಾಡಿದರು.

ಜಾತ್ರೋತ್ಸವದ ದಾನಿಗಳಾದ ಪ್ರಭುಲಿಂಗಪ್ಪ ಎಲಿ, ಗಂಗಾಧರಯ್ಯ ತಗಣಿಮಠ, ಮೃತ್ಯುಂಜಯ ವಾಲಿ ಮತ್ತು ಯುವ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಆಡಳಿತ ಮಂಡಳಿ ಸದಸ್ಯ ಎನ್.ಸಿ. ಅಕ್ಕಿ ಸ್ವಾಗತಿಸಿದರು. ಎಸ್.ವಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ವಲಯ ಘಟಕ ಅಧ್ಯಕ್ಷ ಜಿ.ಆರ್.ಕೆಂಚಕ್ಕನವರ ಹಾಗೂ ಶಿಕ್ಷಕ ಕಮ್ಮಾರ ನಿರೂಪಿಸಿದರು. ಎಸ್.ಎಚ್. ಗಿಡ್ಡಪ್ಪನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.