ADVERTISEMENT

ರಂಜಿಸಿದ ಹೋರಿ ಹಬ್ಬ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 11:20 IST
Last Updated 4 ಜನವರಿ 2011, 11:20 IST

ಹಿರೇಕೆರೂರ: ತಾಲ್ಲೂಕಿನ ಕಚವಿ ಗ್ರಾಮದಲ್ಲಿ ಸೋಮವಾರ ಹೋರಿ ಬೆದರಿಸುವ ಹಬ್ಬ ಅದ್ದೂರಿಯಾಗಿ ನಡೆಯಿತು. ಅಕ್ಕಪಕ್ಕದ ತಾಲ್ಲೂಕುಗಳಿಂದ ಆಗಮಿಸಿದ್ದ ಹತ್ತಾರು ಹೋರಿಗಳು ನೆರೆದಿದ್ದ ಜನತೆಗೆ ರಂಜನೆ ಒದಗಿಸಿದವು. ಮೈಮೇಲೆ ಜೂಲ, ಕೊಂಬುಗಳಿಗೆ ಬಗೆಬಗೆಯ ಬಣ್ಣದ ಬಲೂನುಗಳು ಹಾಗೂ ಬಣ್ಣಗಳಿಂದ ಸಿಂಗಾರ ಮಾಡಿದ್ದ ಹೋರಿಗಳ ಓಟ ರೋಚಕವಾಗಿತ್ತು. ಅವುಗಳ ಕೊರಳಿಗೆ ಕಟ್ಟಿದ್ದ ಕೊಬ್ಬರಿಯನ್ನು ಹರಿಯಲು ಪೈಲ್ವಾನರು ಪ್ರಯತ್ನಿಸುತ್ತಿರುವ ದೃಶ್ಯ, ಅವರಿಂದ ತಪ್ಪಿಸಿಕೊಂಡು ಓಡುವ ಹೋರಿಗಳ ಹಿಂದೆ ಅವುಗಳ ಮಾಲೀಕರು ಕೇಕೆ ಹಾಕುತ್ತಾ ಓಡುವುದು ಸಾಮಾನ್ಯವಾಗಿತ್ತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಸಿ.ಪಾಟೀಲ ಹೋರಿ ಬೆದರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ಮಡಿವಾಳರ, ಸಿದ್ದಪ್ಪ ಹಂಪಣ್ಣನವರ, ಗ್ರಾ.ಪಂ. ಸದಸ್ಯರಾದ ಹುಚ್ಚಪ್ಪ ಬಿಷ್ಟಪ್ಪಳವರ, ಈಶಣ್ಣ ಹಂಪಣ್ಣನವರ, ಜಾಕೀರ್, ಚಂದ್ರಗೌಡ, ಬಸವರಾಜ ಮಡಿವಾಳರ, ನಾಗಪ್ಪ ಹರಿಜನ ಹಾಜರಿದ್ದರು.

ಪರಿಸರ ಜಾಗೃತಿ ಆಂದೋಲನ: ‘ಪರಿಸರ ಸಂರಕ್ಷಣೆ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಪರಿಸರ ನಾಶವು ಇದೇ ರೀತಿಯಲ್ಲಿ ಮುಂದುವರಿದರೆ ಬರುವ 20-25 ವರ್ಷಗಳಲ್ಲಿ ಬದುಕು ದುಸ್ತರವಾಗಲಿದೆ. ಭೂಮಿಯನ್ನು ರಕ್ಷಣೆ ಮಾಡುವ ಕುರಿತು ಪ್ರತಿಯೊಬ್ಬರೂ ಜ್ಞಾನ ಪಡೆದುಕೊಳ್ಳಬೇಕಿದೆ’ ಎಂದು ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಕೆ.ಎಲ್.ನಾಯಕ ತಿಳಿಸಿದರು.

ತಾಲ್ಲೂಕಿನ ಕಚವಿ ಗ್ರಾಮದಲ್ಲಿ ನಬಾರ್ಡ್, ವನಸಿರಿ ಸಂಸ್ಥೆ, ಸ್ಥಳೀಯ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಪರಿಸರ ಜಾಗೃತಿ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಎಸ್.ಡಿ.ಬಳಿಗಾರ ಮಾತನಾಡಿ, ನಾವೆಲ್ಲ ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಭೂಮಿಯನ್ನು ನರಕವನ್ನಾಗಿ ಮಾಡುತ್ತಿದ್ದೇವೆ ಎಂದರು.

ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ಮಡಿವಾಳರ ಅಧ್ಯಕ್ಷತೆ ವಹಿಸಿದ್ದರು. ಮೂಕಪ್ಪ ಬ್ಯಾಗವಾದಿ, ಬಸಲಿಂಗಪ್ಪಗೌಡ ಮುಲ್ಕಿಪಾಟೀಲ, ಮಲ್ಲೇಶಪ್ಪ ಬಾಸೂರ, ಕೊಟ್ರಗೌಡ ಹಳ್ಳೂರ, ಮಲ್ಲಿಕಾರ್ಜುನ ದೊಡ್ಡಬಸಣ್ಣನವರ, ಬಸವರಾಜ ಹಂಪಣ್ಣನವರ, ಇಬ್ರಾಹಿಂಸಾಬ್ ತತ್ತೂರ, ಕೆಂಚಮ್ಮ, ಪರಮೇಶಪ್ಪ ಹಲಗೇರಿ ಹಾಜರಿದ್ದರು. ನಾಗರಾಜ ಧಾರೇಶ್ವರ ನಿರೂಪಿಸಿದರು. ರಾಮಣ್ಣ ಅಂತರವಳ್ಳಿ ಸ್ವಾಗತಿಸಿದರು. ಆರ್.ಆರ್. ರೇವಡೇಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.