ADVERTISEMENT

`ವಿಧಾನಸೌಧದ ಗದ್ದುಗೆ ಏರುವವರೆಗೆ ನಿಲ್ಲದಿರಿ'

ರೈತ ಹುತಾತ್ಮ ದಿನ: ಶಾಸಕ ಪುಟ್ಟಣ್ಣಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 8:17 IST
Last Updated 11 ಜೂನ್ 2013, 8:17 IST
ಹಾವೇರಿ ಗೋಲಿಬಾರ್‌ನಲ್ಲಿ ಮೃತಪಟ್ಟ ರೈತರ ಸ್ಮರಣೆಗಾಗಿ ನಡೆದ ಹುತಾತ್ಮ ದಿನದ ಸಂದರ್ಭದಲ್ಲಿ ರೈತರು ಹುತಾತ್ಮ ರೈತರ ಭಾವಚಿತ್ರ ಮೆರವಣಿಗೆ ಮಾಡಿದರು.
ಹಾವೇರಿ ಗೋಲಿಬಾರ್‌ನಲ್ಲಿ ಮೃತಪಟ್ಟ ರೈತರ ಸ್ಮರಣೆಗಾಗಿ ನಡೆದ ಹುತಾತ್ಮ ದಿನದ ಸಂದರ್ಭದಲ್ಲಿ ರೈತರು ಹುತಾತ್ಮ ರೈತರ ಭಾವಚಿತ್ರ ಮೆರವಣಿಗೆ ಮಾಡಿದರು.   

ಹಾವೇರಿ: ದೇಶಕ್ಕೆ ಅನ್ನ ನೀಡುವ ರೈತರು ಇನ್ನೂ ಎಷ್ಟು ದಿನ ಬೇರೆಯವರ (ರಾಜಕಾರಣಿಗಳ) ಎದುರು ಕೈಯೊಡ್ಡುತ್ತಾ ನಿಲ್ಲಬೇಕು. ಸಮಸ್ಯೆ ಪರಿಹಾರಕ್ಕೆ ಕೇವಲ ಚಳವಳಿ ಮಾಡಿದರೆ ಸಾಲದು, ರಾಜಕೀಯ ಜ್ಞಾನ ಪಡೆದು ಅಧಿಕಾರದ ಗದ್ದುಗೆ ಏರುವಂತಾಗಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ, ಶಾಸಕ ಕೆ.ಎಸ್. ಪುಟ್ಟಣಯ್ಯ ತಿಳಿಸಿದರು.

ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಸೋಮವಾರ ನಗರದ ಬಸ್ ನಿಲ್ದಾಣ ಬಳಿಯ ಐದು ವರ್ಷದ ಹಿಂದೆ ಗೋಲಿಬಾರ್‌ನಲ್ಲಿ ಮೃತಪಟ್ಟ ರೈತರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ದೇಶದಲ್ಲಿ ಶೇ 70ರಷ್ಟು ಜನ ರೈತರೇ ಇದ್ದಾರೆ. ಆದರೂ ಅವರು ಈವರೆಗೆ ಸಂಘಟಿತರಾಗಿಲ್ಲ. ಜತೆಗೆ ರಾಜಕೀಯ ಜ್ಞಾನ ಪಡೆದಿಲ್ಲ. ಇವೆಲ್ಲ ಕಾರಣಗಳಿಂದ ದೇಶದ ಬೆನ್ನೆಲಬು ಎನ್ನುವ ರೈತರಿಗೆ ಸೂಕ್ತ ಭದ್ರತೆ ಇಲ್ಲದಾಗಿದೆ ಎಂದರು.

ರೈತರು ದುಡಿಮೆಯಲ್ಲಿಯೇ ದೇವರನ್ನು ಕಾಣುತ್ತ, ಉಳಿದಿದ್ದನ್ನು ಮರೆತಿದ್ದರಿಂದ ಜಾತಿ, ಹಣ ಬಲದ ವ್ಯಕ್ತಿಗಳನ್ನು ವಿಧಾನಸೌಧಕ್ಕೆ ಆಯ್ಕೆಯಾಗುತ್ತಿದ್ದಾರೆ. ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ ಇವೆಲ್ಲವುಗಳಿಗೆ ಅಂತ್ಯ ಹಾಡಬೇಕಾದರೆ, ರೈತ ಸಂಘದ ಪ್ರತಿನಿಧಿಯನ್ನು ಆಯ್ಕೆಗೊಳಿಸಿ ವಿಧಾನಸೌಧಕ್ಕೆ ಕಳುಹಿಸಬೇಕು ಎಂದರು.

ದೇಶದಲ್ಲಿ ಈವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳು ರೈತರ ಅವಶ್ಯಕತೆಗಳನ್ನೇ ಅರಿತುಕೊಂಡಿಲ್ಲ. ಆ ಅವಶ್ಯಕತೆಗಳನ್ನು ಪೂರೈಸುವಂತೆ ಒತ್ತಾಯ ಮಾಡುತ್ತಾ ಬಂದರೂ ಪ್ರಯೋಜನವಾಗುತ್ತಿಲ್ಲ ಎಂದ ಅವರು, ರೈತರಿಗೆ ಅವಶ್ಯಕವಾದ ವಿದ್ಯುತ್, ಅಂತರ್ಜಲ ಹೆಚ್ಚಳ, ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಎಪಿಎಂಸಿಗಳಲ್ಲಿ ದಲಾಲಿ ನಿಯಂತ್ರಣ ಮಾಡಲು ಮುಂದಾದರೆ, ಸಮಸ್ಯೆ ನಿವಾರಣೆಯಾದಂತೆ ಎಂದು ತಿಳಿಸಿದರು.

ಸರ್ಕಾರಗಳು ಒಂದೋ ಎರಡೋ ಲಕ್ಷ ರೂಪಾಯಿ ಸಾಲ ನೀಡುತ್ತಿದ್ದು, ಇದು ನಿಜ ಅರ್ಥದಲ್ಲಿ ಸಾಲವಲ್ಲ. ರೈತರಿಗೆ ನೀಡುತ್ತಿರುವ ಪ್ರೋತ್ಸಾಹಧನವಾಗಿದೆ. ಪ್ರತಿ ರೈತ ಕುಟುಂಬಕ್ಕೂ 10ಲಕ್ಷ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದಾಗ ಮಾತ್ರ ಅದನ್ನು ಸಾಲವೆನ್ನಬೇಕು ಎಂದು ಅಭಿಪ್ರಾಯಪಟ್ಟರು.

ನಗರ ಪ್ರದೇಶದಲ್ಲಿನ ಶೇ 70ರಷ್ಟು ಉದ್ಯೋಗಗಳು ರೈತರ ಬೆಳೆ ಅವಲಂಬಿತವಾಗಿವೆ. ವಿಶೇಷ ಕೃಷಿ ನೀತಿ, ಬೆಲೆ ನೀತಿ, ರೂಪಿಸುವ ಮೂಲಕ ಗ್ರಾಮೀಣ ಅಭಿವೃದ್ಧಿ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಗೋಲಿಬಾರ್‌ನಲ್ಲಿ ಮೃತಪಟ್ಟ ರೈತರಾದ ಪುಟ್ಟಪ್ಪ ಹೊನ್ನತ್ತಿ ಹಾಗೂ ಸಿದ್ಧಲಿಂಗಪ್ಪ ಚೂರಿ ಸಮಾಧಿ ಸ್ಥಳಕ್ಕೆ ತೆರಳಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮುಖಂಡರಾದ ಎಸ್.ವಿ. ಚಪ್ಪರದಹಳ್ಳಿ, ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಚಿಕ್ಕಪ್ಪ ಛತ್ರದ, ಕೆ.ವಿ. ದೊಡ್ಡಗೌಡ್ರ ಪಾಲ್ಗೊಂಡಿದ್ದರು.

`ಗೋಲಿಬಾರ್ ವರದಿ ಬಹಿರಂಗಪಡಿಸಿ'
ಹಾವೇರಿ: 2008ರಲ್ಲಿ ನಡೆದ ಗೋಲಿಬಾರ್ ಕುರಿತ ನ್ಯಾಯಮೂರ್ತಿ ಕೆ. ಜಗನ್ನಾಥ ಶೆಟ್ಟಿ ಆಯೋಗ ನೀಡುರುವ ತನಿಖಾ ವರದಿಯನ್ನು ಕೂಡಲೇ ಬಹಿರಂಗ ಪಡಿಸಬೇಕು ಎಂದು ಶಾಸಕ ಪುಟ್ಟಣ್ಣಯ್ಯ ಸರ್ಕಾರವನ್ನು ಒತ್ತಾಯಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ವರದಿ ಬಹಿರಂಗಕ್ಕೆ ಒತ್ತಾಯಿಸಿದ್ದ ಕಾಂಗ್ರೆಸ್, ಈಗ ಅಧಿಕಾರದಲ್ಲಿರುವುದರಿಂದ ಬಹಿರಂಗ ಪಡಿಸಲು ಅವಕಾಶ ದೊರೆತಿದೆ.ಅದಕ್ಕಾಗಿ ಕೂಡಲೇ ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ, ವಿಧಾನಸೌಧದಲ್ಲಿ ಹೋರಾಟ ಹಾಗೂ ಚರ್ಚೆ ಮಾಡುವುದಾಗಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ನೀಡಿದಂತೆ ಗಾಯಾಳುಗಳಿಗೆ 5ಲಕ್ಷ ರೂಪಾಯಿ ಪರಿಹಾರ ನೀಡಬೇಕು ಪುಟ್ಟಣಯ್ಯ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.