ಹಾವೇರಿ: ವೃತ್ತಿ ಶಿಕ್ಷಣ ಕೋರ್ಸ್ ಶುಲ್ಕ ಕಡಿಮೆಗೊಳಿಸುವುದು ಹಾಗೂ ಸಿಇಟಿ ಬಿಕ್ಕಟ್ಟಿಗೆ ಕೇಂದ್ರಿಯ ಶಾಸನ ಜಾರಿಗೊಳಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಘಟಕ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ನಂತರ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಹೊತ್ತು ರಸ್ತೆ ತಡೆ ನಡೆಸಿದರು.
ವೃತ್ತಿ ಶಿಕ್ಷಣ ಕೋರ್ಸ್ ಶುಲ್ಕ ಕಡಿಮೆಗೊಳಿಸಬೇಕು. ಯಾವುದೇ ಕಾರಣಕ್ಕೂ ಶುಲ್ಕ ಹೆಚ್ಚಿಸಬಾರದು, ಪ್ರಸ್ತುತ ಸೀಟು ಹಂಚಿಕೆ ಕ್ರಮ ಅವೈಜ್ಞಾನಿಕವಾಗಿದ್ದು, 40-60 ಬದಲಾಗಿ 75-25 ಅನುಪಾತದಲ್ಲಿ ಸೀಟು ಹಂಚಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕಳೆದ ವರ್ಷದ ಶುಲ್ಕ ರಿಯಾಯತಿ ಸಹ ಬಿಡುಗಡೆಯಾಗಿಲ್ಲ. ತಕ್ಷಣ ಶುಲ್ಕ ರಿಯಾಯತಿ ಹಣ ಬಿಡುಗಡೆ ಮಾಡಬೇಕು. ಮಾನ್ಯತೆ ಇಲ್ಲದ ಖಾಸಗಿ ಕಾಲೇಜುಗಳ ಪರವಾನಗಿ ರದ್ದುಗೊಳಿಸಬೇಕು. ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ಹೊಸ ಸರ್ಕಾರಿ ಕಾಲೇಜುಗಳನ್ನು ಪ್ರಾರಂಭಿಸಬೇಕು. ವೃತ್ತಿ ಶಿಕ್ಷಣ ಪ್ರವೇಶ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಕೇಂದ್ರಿಯ ಶಾಸನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಯನ್ನು ಕೈಬಿಟ್ಟು ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಶಿವಲಿಂಗು ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಎಸ್‌ಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ, ವಕೀಲ ಜಿ.ಎ. ಹಿರೇಮಠ, ತಾಲ್ಲೂಕು ಅಧ್ಯಕ್ಷೆ ರೇಣುಕಾ ಕಹಾರ, ಅರುಣ ದೊಡ್ಡಮನಿ, ನೀಲಮ್ಮ ಶಂಕ್ರಪ್ಪನವರ, ಮಾರುತಿ ಅಂಬಿಗೇರ, ನಾಗರಾಜ ಡಿ.ಎಚ್. ಪೂರ್ಣಿಮಾ ಎಸ್.ಬಿ. ವಂದನಾ ಬಳ್ಳಿಹಳ್ಳಿ, ಅಮೃತಾ ಗಡ್ಡದವರ, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.