ಹಾವೇರಿ: ಶಂಕಿತ ಡೆಂಗೆ ಜ್ವರದಿಂದ ಬಳಲುತ್ತಿದ್ದ ಬ್ಯಾಡಗಿ ತಾಲ್ಲೂಕಿನ ಇಬ್ಬರು ಹಾಗೂ ಹಿರೇಕೆರೂರಿನ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.
ಬ್ಯಾಡಗಿ ವರದಿ: ಬ್ಯಾಡಗಿ ಪಟ್ಟಣದ ಶಿವಪುರ ಬಡಾವಣೆಯ ಶ್ರೇಯಾ ಕಣ್ಣೇಶ ಗಂಗಮ್ಮನವರ (4) ಹಾಗೂ ಕಳಗೊಂಡ ಗ್ರಾಮದ ಮರಿಯಮ್ಮ ಸುಭಾಷ ಹರಿಜನ (7) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯರಿಗೆ ಪಟ್ಟಣದ ಖಾಸಗಿ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಜ್ವರ ತೀವ್ರಗೊಂಡ ಬಳಿಕ ವೈದ್ಯರ ಸಲಹೆ ಮೇರೆಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಬಾಲಕಿಯರು ಮೃತರಾಗಿದ್ದಾರೆಂದು ಆರೋಗ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್.ಲಮಾಣಿ, ಹಿರಿಯ ಆರೋಗ್ಯ ಸಹಾಯಕ ವೈ.ಎಂ.ಹಿರಿಯಕ್ಕನವರ ಹಾಗೂ ಸಿಬ್ಬಂದಿಗಳು ಪಟ್ಟಣದ ಮೃತ ಬಾಲಕಿಯ ಮನೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರಿಂದ ತಾಲ್ಲೂಕಿನಲ್ಲಿ ಇದೈವರೆಗೆ 6 ಮಕ್ಕಳು ಶಂಕಿತ ಡೆಂಗೆ ಜ್ವರದಿಂದ ಮೃತರಾಗಿದ್ದಾರೆ ಎನ್ನಲಾಗಿದೆ.
ಹಿರೇಕೆರೂರ ವದರಿ: ಡೆಂಗೆ ಜ್ವರಕ್ಕೆ ಕಳಗೊಂಡ ಹಾಗೂ ಮಾಸೂರು ಗ್ರಾಮದಲ್ಲಿ ಮಂಗಳವಾರ ಇಬ್ಬರು ಬಾಲಕಿಯರು ಬಲಿಯಾಗಿದ್ದಾರೆ
ಕಳಗೊಂಡ ಗ್ರಾಮದ ಮುತ್ತವ್ವ ಹುಚ್ಚಪ್ಪ ದೊಡ್ಡಮನಿ (11) ಮಂಗಳವಾರ ಬೆಳಿಗ್ಗೆ ದಾವಣಗೆರೆ ಎಸ್ಸೆಸ್ಸೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜೂ. 30ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾಸೂರು ಗ್ರಾಮದ ಸುಜಯಾ ದಶರಥ ಮಾವರಿ (8) ಸೋಮವಾರ ಶಂಕಿತ ಡೆಂಗೆ ಜ್ವರದಿಂದ ಸಾವನ್ನಪ್ಪಿ ದ್ದಾರೆ. ಜೂನ್ 19ರಿಂದ ಜ್ವರದ ಬಾಧೆ ಯಿಂದ ಬಳಲುತ್ತಿದ್ದ ಬಾಲಕಿಯನ್ನು ಜೂ.21ರಂದು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಶಾಸಕರ ಭೇಟಿ: ಡೆಂಗೆ ಜ್ವರದಿಂದ ಬಾಲಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಾಸಕ ಯು.ಬಿ.ಬಣಕಾರ ಅವರು ಮಾಸೂರ ಗ್ರಾಮಕ್ಕೆ ಭೇಟಿ ನೀಡಿ ಮೃತ ಬಾಲಕಿಯ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, `ಬಾಲಕಿಯ ಪಾಲಕರು ಚಿಕಿತ್ಸೆಗೆ 60 ರಿಂದ 70 ಸಾವಿರ ರೂಪಾಯಿ ಖರ್ಚು ಮಾಡಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ದೊರಕಿಸಿ ಕೊಡಲು ಯತ್ನಿಸುತ್ತೇನೆ' ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಝಡ್.ಎಂ. ಮಕಾನದಾರ, ಗ್ರಾ.ಪಂ ಅಧ್ಯಕ್ಷ ಚನ್ನಬಸಪ್ಪ ರಾಮಜ್ಜನವರ, ರಮೇಶ ನ್ಯಾಮತಿ, ರವಿ ಶಿದ್ದಪ್ಪಗೌಡ್ರ, ರಾಮಚಂದ್ರಪ್ಪ ಬೋಗೇರ, ರವಿ ಚಿಂದಿ, ಗುರಣ್ಣ ಗಿಡಗೂರ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.