ADVERTISEMENT

‘ಸಮಾನತೆಗಾಗಿ ದಲಿತರ ಜಾಗೃತಿ ಮುಖ್ಯ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 7:09 IST
Last Updated 20 ಅಕ್ಟೋಬರ್ 2017, 7:09 IST
ದಲಿತ ಪರಿವರ್ತನಾ ವೇದಿಕೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈಚೆಗೆ ಹಾವೇರಿಯ ಕಮಲ ಕಲ್ಯಾಣ ಮಂಟಪದಲ್ಲಿ ‘ಭಾರತದ ಸಂವಿಧಾನದಲ್ಲಿ ಡಾ. ಬಿ. ಆರ್. ಅಂಬೇಡ್ಕರ್, ನಾಗರಿಕ ಹಕ್ಕು, ಸಮಾನತೆ’ ಕುರಿತು ವಿಚಾರ ಸಂಕಿರಣ ನಡೆಯಿತು
ದಲಿತ ಪರಿವರ್ತನಾ ವೇದಿಕೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈಚೆಗೆ ಹಾವೇರಿಯ ಕಮಲ ಕಲ್ಯಾಣ ಮಂಟಪದಲ್ಲಿ ‘ಭಾರತದ ಸಂವಿಧಾನದಲ್ಲಿ ಡಾ. ಬಿ. ಆರ್. ಅಂಬೇಡ್ಕರ್, ನಾಗರಿಕ ಹಕ್ಕು, ಸಮಾನತೆ’ ಕುರಿತು ವಿಚಾರ ಸಂಕಿರಣ ನಡೆಯಿತು   

ಹಾವೇರಿ: ‘ಸರ್ವ ಜನಾಂಗದ ಸಮಾನತೆಗಾಗಿ ಸಂವಿಧಾನದಲ್ಲಿ ಸ್ಪಷ್ಟವಾದ ಕಾನೂನು ರೂಪಿಸಿದ್ದರೂ, ಜಾತಿ ಪದ್ಧತಿಯನ್ನು ಹೋಗಲಾಡಿಸಲು ಹರ ಸಾಹಸ ಪಡಬೇಕಾದ ಪರಿಸ್ಥಿತಿ ಇಂದಿಗೂ ಜೀವಂತವಾಗಿ ಇರುವುದೇ ನಮ್ಮ ವ್ಯವಸ್ಥೆಯ ದುರಂತ’ ಎಂದು ವೈದ್ಯ ಡಾ. ವಿ.ಎಸ್. ವೈದ್ಯ ಹೇಳಿದರು.

ದಲಿತ ಪರಿವರ್ತನಾ ವೇದಿಕೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈಚೆಗೆ ನಗರದ ಕಮಲ ಕಲ್ಯಾಣ ಮಂಟಪದಲ್ಲಿ ನಡೆದ ‘ಭಾರತದ ಸಂವಿಧಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ನಾಗರಿಕ ಹಕ್ಕು, ಸಮಾನತೆ’ ಕುರಿತ ವಿಚಾರ ಸಂಕಿರಣ ಮತ್ತು ಕಲಾ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾನತೆ ಹಾಗೂ ನಾಗರಿಕ ಹಕ್ಕಿಗಾಗಿ ಸ್ವಾತಂತ್ರ್ಯ ಬಂದ 70 ವರ್ಷಗಳ ಬಳಿಕವೂ ಹೋರಾಟ ನಡೆಸಬೇಕಾಗಿರುವುದು ಬೇಸರದ ವಿಚಾರ’ ಎಂದರು. ವಕೀಲ ವಿ.ಎಸ್ ಕಟ್ಟೇಗೌಡ್ರ ಮಾತನಾಡಿ, ‘ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸಿದ ಸಂವಿಧಾನವನ್ನು ಗೌರವಿಸುವುದು ನಮ್ಮ ಕರ್ತವ್ಯ, ನೆಮ್ಮದಿಯ ಬದುಕಿಗೆ ಕಾನೂನು ಪಾಲನೆ ಬಹು ಮುಖ್ಯ. ಮೂಲಭೂತ ಹಕ್ಕುಗಳನ್ನು ತಿಳಿಯುವುದು ಅವಶ್ಯ’ ಎಂದರು.

ADVERTISEMENT

ಹಿರಿಯ ವ್ಯೆದ್ಯ ಡಾ.ರಾಜಣ್ಣ ವೈದ್ಯ ಮಾತನಾಡಿ, ‘ಭಾರತದ ಸಂವಿಧಾನವು ವಿಶ್ವಶ್ರೇಷ್ಠವಾಗಿದೆ. ಸರ್ವರಿಗೂ ಸಮಪಾಲು– ಸಮಬಾಳು ಸಂವಿಧಾನದ ಧ್ಯೇಯವಾಗಿದೆ. ಅಂಬೇಡ್ಕರ್ ಜನ್ಮ ದಿನವನ್ನು ವಿಶ್ವಮಟ್ಟದಲ್ಲಿ ಆಚರಿಸಲಾಗುತ್ತಿದೆ’ ಎಂದರು. ‘ ಸಾಂವಿಧಾನಿಕ ಹಕ್ಕುಗಳು ಮತ್ತು ಆಶಯಗಳನ್ನು ತಿಳಿದಾಗ ಸಮಾನತೆ ಅರಿವಾಗುತ್ತದೆ’ ಎಂದರು.

ಜಿಲ್ಲಾ ದಲಿತ ಪರಿವರ್ತನಾ ವೇದಿಕೆ ಅಧ್ಯಕ್ಷ ನಿಂಗಪ್ಪ ಗಾಳೆಮ್ಮನವರ ಮಾತನಾಡಿ, ‘ಅನೇಕ ವರ್ಷಗಳ ಹೋರಾಟದಿಂದ ದಲಿತರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ. ಹೋರಾಟಗಳ ಜೊತೆಗೆ ನಾಗರಿಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ’ ಎಂದರು.

ಪತ್ರಕರ್ತ ಮಾಲತೇಶ ಅಂಗೂರ, ನಗರ ಆಶ್ರಯ ಸಮಿತಿಯ ಅಧ್ಯಕ್ಷ ಪರಶುರಾಮ ಅಡಕಿ, ಮಲ್ಲೇಶಪ್ಪ ಕಡಕೋಳ, ಕಲಾವಿದ ಬೀರಪ್ಪ ಡೊಳ್ಳಿನ, ಮೌಲಾ ಜಿಗರಿ, ವೆಂಕಟೇಶ ಬಿಜಾಪುರ, ನಾಗರಾಜ ಮಳಗಾವಿ, ರಾಮಣ್ಣ ಬಾದಗಿ, ಚಂದ್ರು ಅರೇಪಲ್ಲಿ, ಲಲಿತವ್ವ ಹುಗ್ಗಿ, ಮಲ್ಲೇಶಪ್ಪ ಮಾದರ, ರೇಣುಕಾ ಕೆಂಚಲ್ಲನವರ, ಹನುಮಂತಗೌಡ್ರ ಗಾಜಿಗೌಡ್ರ, ಸಂತೋಷ ಕನ್ನಮ್ಮನವರ, ಪರಶುರಾಮ ಡೂಗನವರ, ಅನಿತಾ ಅಗಡಿ ಇದ್ದರು.

ಬಳಿಕ ದಲಿತ ಕಲಾ ಮಂಡಳಿ, ಶಾರದಾ ನಾಟ್ಯ ಕಲಾ ನಿಕೇತನ ಕಲಾತಂಡಗಳಿಂದ ಸಮೂಹ ಕ್ರಾಂತಿಗೀತೆ, ಹಾಡುಗಳು, ನೃತ್ಯಗಳು, ದೊಡ್ಡಾಟ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.