ADVERTISEMENT

ಸ್ವಯಂಕೃತ ಅಪರಾಧದಿಂದ ಪ್ರಳಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 7:30 IST
Last Updated 7 ಫೆಬ್ರುವರಿ 2012, 7:30 IST

ಹಾವೇರಿ: `ನಿಸರ್ಗದ ಮೇಲೆ ಹತೋಟಿ ಸಾಧಿಸಲು ಹೊರಟಿರುವ ಮನುಷ್ಯ ತನ್ನ ದುರಾಸೆಯಿಂದ ಪ್ರಕೃತಿಯನ್ನು ಹಾಳು ಮಾಡುತ್ತಿದ್ದಾನೆ. ಮನುಷ್ಯನ ಸ್ವಯಂಕೃತ ಅಪರಾಧದಿಂದ ಪ್ರಳಯ ಸಂಭವಿಸಬಹುದೇ ಹೊರತು ದೇವರಿಂದ ಅಲ್ಲ~ ಎಂದು ಅಣು ವಿಜ್ಞಾನಿ ಡಾ. ಡೇವಿಡ್ ಠಾಕೂರ್ ಹೇಳಿದರು.

ನಗರದ ಹೊಸಮಠ ಕಾಲೇಜು ಆವರಣದಲ್ಲಿ ಜರುಗಿದ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಸಮಾರಂಭದಲ್ಲಿ 2012 ರಲ್ಲಿ ಪ್ರಳಯ ಸಂಭವಿಸಬಹುದೇ ಎಂಬ ವಿಷಯ ಕುರಿತು ಅವರು ಮಾತನಾಡಿದರು.
2012 ರಲ್ಲಿ ಪ್ರಳಯ ಸಂಭವಿಸಲಿದೆ ಎಂಬುದು ಶುದ್ಧ ಸುಳ್ಳಾಗಿದ್ದು, ಯಾವುದೇ ಉಹಾಪೋಹಕ್ಕೆ ಮಾನ್ಯತೆ ನೀಡ ಬಾರದು ಎಂದು ಸಲಹೆ ಮಾಡಿದ ಅವರು, ಒಂದು ವೇಳೆ ಪ್ರಳಯ ಸಂಭವಿಸುವುದೇ ಆದರೆ ಅದು ನ್ಯೂಕಿಯ್ಲರ್ ಕಾಳಗ ದಿಂದಲೇ ಹೊರತು ಬೇರೆ ಯಾವುದರಿಂದ ಸಾಧ್ಯವಿಲ್ಲ ಎಂದರು. ಪ್ರಳಯ ಸಂಭವಿಸುವುದೆಂಬ ಅಜ್ಞಾನ ಮರೆತು ಸುಜ್ಞಾನದ ಅರಿವನ್ನು ಪಡೆಯುವ ಮೂಲಕ ಜೀವನ ನಡೆಸಬೇಕು. ಪ್ರಳಯದ ಕುರಿತು ಜನರಲ್ಲಿರುವ ಆತಂಕವನ್ನು ದೂರ ಮಾಡುವಂತಹ ಕೆಲಸಗಳು ಹೆಚ್ಚು ನಡೆಯಬೇಕಿದೆ ಎಂದು ಹೇಳಿದರು.

ಚಿತ್ರದುರ್ಗದ ಮುರುಘಾ ಶರಣರು ಮಾತನಾಡಿ, ಪ್ರಳಯ ಸಂಭವಿಸಲಿದೆ ಎಂದು ಕೆಲ ಮಾಧ್ಯಮಗಳು ದಿನವೀಡಿ ಚರ್ಚೆ ಮಾಡುತ್ತಾ ಜನರನ್ನು ಆತಂಕದ ಕೂಪಕ್ಕೆ ತಳ್ಳುತ್ತಿವೆ. ಆದರೆ, ಪ್ರಳಯ ಸಂಭವಿಸಲಿದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಕಳೆದ 10 ವರ್ಷದ ಹಿಂದೆಯೂ ಇದೇ ರೀತಿಯ ಪ್ರಳಯದ ಕುರಿತು ದಟ್ಟವಾದ ಸುದ್ದಿಗಳು ಹಬ್ಬಿದ್ದವಲ್ಲದೇ, ಕೆಲ ಪುಸ್ತಕಗಳು ಸಹ ಪ್ರಕಟಗೊಂಡಿದ್ದವು.ಅವುಗಳಲ್ಲಿ ಜಗತ್ತು ಸರ್ವನಾಶ ವಾಗುತ್ತದೆ ಎಂದು ಸಾರಿದ್ದರು. ಆದರೆ ಪ್ರಳಯ ಸಂಭವಿಸಲೇ ಇಲ್ಲ. ಅದರಂತೆ ಈ ವರ್ಷವು ಸಹಿತ ಯಾವುದೇ ರೀತಿ ಪ್ರಳಯ ಸಂಭವಿಸುವುದಿಲ್ಲ. ಯಾರು ಭೀತಿಗೆ ಒಳಗಾಗದೇ ದಿನನಿತ್ಯದ ಕಾರ್ಯಗಳಲ್ಲಿ ಮಗ್ನರಾಗಬೇಕೆಂದು ಸಲಹೆ ಮಾಡಿದರು.

ಇಡೀ ಭೂಮಂಡಲ ನೂಚ್ಚು ನೂರಾಗುತ್ತದೆ. ಜಗತ್ತು ಸರ್ವನಾಶವಾಗುತ್ತದೆ ಎಂಬುದು ಶುದ್ಧ ಸುಳ್ಳು. ಆದರೆ ಭೂಮಿಯ ಕೆಲವು ಭಾಗಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಬಹುದು. ಇತ್ತೀಚಿನ ದಿನಗಳಲ್ಲಿ ಮಾನವನು ಹೆಚ್ಚು ದುರ್ಬುದ್ಧಿಯನ್ನು ಪ್ರದರ್ಶಿಸುತ್ತಾ ಬರುತ್ತಿದ್ದಾನೆ. ಜೊತೆಗೆ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪ್ರಳಯದ ಅಂಶಗಳಿವೆ ಕೋಪ ತಾಪ ಆಕ್ರೋಶದಿಂದ ಮಾನವನು ಭಯ ಪಟ್ಟು ಪ್ರಳಯದ ಭೀತಿ ಎದುರಿಸುತ್ತಿದ್ದಾನೆ ಎಂದು ಅಭಿಪ್ರಾಯಪಟ್ಟರು.

ಶಾಸಕ ನೆಹರೂ ಓಲೇಕಾರ, ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಶ್ರೀನಿವಾಸ ಮಾನೆ,  ಶ್ರೀಶೈಲ ಹುದ್ದಾರ, ಜಗದ್ಗುರು ಫಕ್ಕೀರಸಿದ್ಧರಾಮ ಶ್ರೀಗಳು, ಬಸವಶಾಂತಲಿಂಗ ಶ್ರೀಗಳು,  ಮಾಜಿ ಶಾಸಕ ರುದ್ರಪ್ಪ ಲಮಾಣಿ ಸೇರಿದಂತೆ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.