ADVERTISEMENT

ಹಬ್ಬ–ಆಯುರ್ವೇದ ಕೂಡಿದರೆ ಬದುಕು ಹಸನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 7:16 IST
Last Updated 1 ಅಕ್ಟೋಬರ್ 2017, 7:16 IST

ಹಾನಗಲ್‌: ‘ವಿಜಯದಶಮಿ ಕೇವಲ ಹಬ್ಬವಲ್ಲ. ಅದರಲ್ಲಿ ಮನುಷ್ಯನ ಸದಾಚಾರವಿದೆ. ಬನ್ನಿ ವಿತರಣೆ ಮೂಲಕ ನಮ್ಮೊಳಗಿನ ದ್ವೇಷ, ಅಸೂಹೆಗಳನ್ನು ದೂರಮಾಡಿ ಒಂದಾಗಿ ಬದುಕುವ ಸಂದೇಶಗಳು ಒಳಗೊಂಡಿದೆ’ ಎಂದು ರಾಣೆಬೆನ್ನೂರು ಶನೇಶ್ವರ ಮಠದ ಶಿವಯೋಗೀಶ್ವರ ಸ್ವಾಮೀಜಿ ನುಡಿದರು.

ವಿಜಯ ದಶಮಿ ಪ್ರಯುಕ್ತ ಶನಿವಾರ ಹಾನಗಲ್‌ ಹೊರಭಾಗದ ಮಲ್ಲಿಗಾರ ಬೆಟ್ಟದ ಅಡಿಯಲ್ಲಿನ ಸಿದ್ಧರಾಮೇಶ್ವರ ದೇವಸ್ಥಾನ ಆವರಣದಲ್ಲಿ ಬನ್ನಿ ಮಹಾಂಕಾಳಿ ದೇವಿ ಪ್ರತಿಷ್ಠಾಪನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬನ್ನಿ ಒಂದು ಅತ್ಯುತ್ತಮವಾದ ಔಷಧಿಯ ಮರ. ಆದರೆ ಆಯುರ್ವೇದ ನಮ್ಮಿಂದ ದೂರವಾಗಿ ಪ್ರಕೃತಿ–ಮನುಷ್ಯನ ವೈಜ್ಞಾನಿಕ ಸಂಬಂಧಗಳು ವಿಮುಖವಾಗಿವೆ. ನಮ್ಮ ಹಬ್ಬ–ಆಯುರ್ವೇದ ಒಂದಾದರೆ ಬದುಕು ಹಸನವಾಗುವಲ್ಲಿ ಸಂಶಯವಿಲ್ಲ. ಶಾಂತಿ ನೆಮ್ಮದಿಗೆ ಧರ್ಮದ ನಡೆ ಅತ್ಯಗತ್ಯವಾಗಿದ್ದು, ಹಬ್ಬ ಹರಿದಿನಗಳು ನಮ್ಮೊಳಗೆ ಸದ್ವಿಚಾರಗಳನ್ನು ಜಾಗೃತಗೊಳಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಬಿಜೆಪಿ ಮುಖಂಡ ಸಿ.ಎಂ.ಉದಾಸಿ ಮಾತನಾಡಿ, ‘ನಾವು ಧರ್ಮಶ್ರದ್ಧೆಯಿಂದ ಭಕ್ತಿಮಾರ್ಗದಲ್ಲಿ ನಡೆಯಬೇಕು. ಸಮಾಜ ಸೇವೆಯೇ ನಿಜವಾದ ಧರ್ಮ. ಭಿನ್ನತೆಗಳನ್ನು ತೊಡೆದುಹಾಕಿ ಒಳ್ಳೆಯದನ್ನು ಪ್ರೀತಿಸಿ ಗೌರವಿಸುವ ನಡೆ ನಮ್ಮದಾಗಬೇಕಾಗಿದೆ’ ಎಂದರು.

ಸೊರಬ ತಾಲ್ಲೂಕಿನ ಶಾಂತಪೂರಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನದ ಪ್ರಮುಖ ಅರ್ಚಕ ಸಂಗಯ್ಯಶಾಸ್ತ್ರೀ ಹಿರೇಮಠ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.

ಸಿದ್ಧರಾಮೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ, ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್.ಬಳ್ಳಾರಿ, ನಿರ್ದೇಶಕ ಕಾಶೀನಾಥ ನ್ಯಾಮತಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ ಹಾಗೂ ದೇವಸ್ಥಾನ ಸೇವಾಸಮಿತಿ ನಿರ್ದೇಶಕರು ಹಾಜರಿದ್ದರು. ಕುಮಾರಸ್ವಾಮಿ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

ಮೆರವಣಿಗೆ: ಇದಕ್ಕೂ ಮೊದಲು ನೂತನ ಬನ್ನಿಮಹಾಕಾಳಿಯ ಮೂರ್ತಿ ಮೆರವಣಿಗೆ ನಡೆಯಿತು. ಮಹಿಳೆಯರು ಪೂರ್ಣಕುಂಭಹೊತ್ತು ಮೆರವಣಿಗೆ ಅಂದ ಹೆಚ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.