ADVERTISEMENT

ಹಮಾಲಿ ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:10 IST
Last Updated 18 ಫೆಬ್ರುವರಿ 2011, 9:10 IST

ಹಾನಗಲ್ಲ: ಪ್ರಸ್ತುತ ರಾಜ್ಯ ಬಜೆಟ್‌ನಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಅವಶ್ಯಕ ಹಣ ತೆಗೆದಿರಿಸಲು ಆಗ್ರಹಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್‌ನ ಹಾನಗಲ್ಲ ಘಟಕದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಹಸೀಲ್ದಾರ ಕಾರ್ಯಾಲಯಕ್ಕೆ ತೆರಳಿ ತಹಸೀಲ್ದಾರ ಎಸ್.ಎನ್.ರುದ್ರೇಶ ಅವರಿಗೆ ಮನವಿ ಅರ್ಪಿಸಿದರು.

ಹಮಾಲಿ ಕಾರ್ಮಿಕರು ಸೇರಿದಂತೆ ಇತರೆ ಅಸಂಘಟಿತ ಕಾರ್ಮಿಕರಿಗಾಗಿ ರಚಿಸಿದ ‘ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ-2009’ ಮುಖಾಂತರ ಸೌಲಭ್ಯಗಳನ್ನು ನೀಡಲು ಪ್ರಸ್ತುತ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಹಮಾಲರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮಂಡಳಿ ಮೂಲಕ ಗುರುತಿನ ಚೀಟಿ, ಪಿಂಚಣಿ, ವಸತಿ ಸೌಲಭ್ಯ, ವೈದ್ಯಕೀಯ ನೆರವು, ಮರಣ ಪರಿಹಾರ, ಅಪಘಾತಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರದ ರಾಷ್ಟ್ರೀಯ ಸ್ವಾಸ್ಥ ಭೀಮಾ, ಜನಶ್ರೀ ಭೀಮಾ ಯೋಜನೆಗಳನ್ನು ಹಮಾಲಿ ಕಾರ್ಮಿಕರಿಗಾಗಿ ಜಾರಿಗೊಳಿಸಬೇಕು. ಹಮಾಲಿ ಕಾರ್ಮಿಕರ ಬೆವರಿನ ಹಣವನ್ನು ಖಾಸಗಿ ಕಂಪನಿಗಳಿಗೆ ಜೂಜಾಡಲು ನೀಡುವ ಮೋಸದ ‘ಸ್ವಾವಲಂಬನೆ’ ಎಂಬ ನೂತನ ಪಿಂಚಣಿ ಯೋಜನೆ ಕೈಬಿಟ್ಟು ಮುಪ್ಪಿನ ಕಾಲದಲ್ಲಿ ಸಹಾಯ ನೀಡುವಂತಹ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಮತ್ತು ಎಲ್ಲ ಹಮಾಲಿ ಕಾರ್ಮಿಕರಿಗೂ ಕಾರ್ಮಿಕ ಕಾನೂನುಗಳು ಕಡ್ಡಾಯವಾಗಿ ಅನ್ವಯವಾಗಬೇಕು ಎಂದು ಕಾರ್ಮಿಕರು ಮನವಿಯಲ್ಲಿ ತಿಳಿಸಿದ್ದಾರೆ.

ಹಮಾಲಿ ಕಾರ್ಮಿಕರ ತಾಲ್ಲೂಕು ಘಟಕದ ಅಧ್ಯಕ್ಷ ನೂರಹ್ಮದ ಖೇಣಿ, ಅಣ್ಣಪ್ಪ ಚಿಕ್ಕಣ್ಣನವರ, ನಜೀರಹ್ಮದ ಧಾರವಾಡ, ಪದಾಧಿಕಾರಿಗಳಾದ ಅಜೀಜಸಾಬ ಅಣ್ಣಿಗೇರಿ, ಹೊನಪ್ಪ ಕುರುಬರ, ನಜೀರಸಾಬ ಅಂದಲಗಿ, ಮಹಾಂತೇಶಪ್ಪ ಹರಿಜನ, ಭಾಷಾಸಾಬ ಹೊಂಬಳಿ, ಮುನ್ನಾ ಖಿಲ್ಲೇದಾರ, ಸತ್ತಾರಸಾಬ ಮಕಾಶಿ, ಅಶೋಕ ಅಳ್ಳೊಳ್ಳಿ, ದಿವಾನಸಾಬ ಮಕಾಂದಾರ, ಗುರುಸಿದ್ಧಪ್ಪ ಕಂಕನೂರ, ಶಿವಪ್ಪ ದಡ್ಡಿಕೊಪ್ಪ ಮುಂತಾದವರು ಪಾಲ್ಗೊಂಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.