ADVERTISEMENT

ಹಾವೇರಿಗೆ ಯಾಲಕ್ಕಿ ಕಂಪು ನೀಡಿದ ಬಜೆಟ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 6:35 IST
Last Updated 22 ಮಾರ್ಚ್ 2012, 6:35 IST

ಹಾವೇರಿ: ಮುಖ್ಯಮಂತ್ರಿ  ಡಿ.ವಿ.ಸದಾನಂದ ಗೌಡ ಅವರು ತಮ್ಮ ಚೊಚ್ಚಲ ಮುಂಗಡ ಪತ್ರದಲ್ಲಿ ಜಿಲ್ಲೆಗೆ ಬ್ಯಾಡಗಿ ಮೆಣಸಿನಕಾಯಿ ಖಾರಕ್ಕಿಂತ ಹೆಚ್ಚಿನ ಪಾಲು ಹಾವೇರಿ ಯಾಲಕ್ಕಿ ಕಂಪನ್ನು ನೀಡಿದ್ದಾರೆ.

ಜಿಲ್ಲೆಯ ಪ್ರಮುಖ ನಿರೀಕ್ಷೆಯಾದ ವೈದ್ಯಕೀಯ ಮಹಾವಿದ್ಯಾಲಯ ಮಂಜೂರಾತಿ ಬೇಡಿಕೆಗೆ ಮನ್ನಣೆ ನೀಡದಿರುವುದು, ಸರ್ವಜ್ಞ, ಸಂತ ಶಿಶುವಿನಾಳ ಶರೀಫ್ ಹಾಗೂ ಜ್ಞಾನಪೀಠ ಪುರಸ್ಕೃತ ಡಾ.ವಿ.ಕೃ.ಗೋಕಾಕ್‌ರನ್ನು ಮರೆತಿರು ವುದು ಜಿಲ್ಲೆಯ ಪಾಲಿಗೆ ಬ್ಯಾಡಗಿ ಮೆಣಸಿನ ಕಾಯಿ ಖಾರವಾಗಿದೆ.

ಜಾನಪದ ವಿವಿಗೆ ರೂ 7.5 ಕೋಟಿ  ಕಾಗಿನೆಲೆ ಕನಕ ಗುರುಪೀಠಕ್ಕೆ ರೂ 6 ಕೋಟಿ . ಕಾಗಿನೆಲೆ ಅಭಿವೃದ್ಧಿಗೆ ರೂ 2 ಕೋಟಿ , ಅಂಬಿಗರ ಚೌಡಯ್ಯ ಪೀಠಕ್ಕೆ ರೂ 1 ಕೋಟಿ  ., ರಾಣೆ ಬೆನ್ನೂರಿನ ಸಿದ್ಧಾರೂಢ ಟ್ರಸ್ಟ್‌ಗೆ 1ಕೋಟಿ ರೂ.ಅನುದಾನ, ರಾಣೆಬೆನ್ನೂರಿನಲ್ಲಿ ಮೆಕ್ಕೆಜೋಳ ತಾಂತ್ರಿಕ ಅಭಿವೃದ್ಧಿ ಪಾರ್ಕ್, ಒಣಮೆಣಸಿನಕಾಯಿ ಹಾಗೂ ಹತ್ತಿಯ ಮೇಲಿನ ತೆರಿಗೆಯನ್ನು ಶೇ 5ರಿಂದ 2ಕ್ಕೆ ಇಳಿಕೆ ಮಾಡಿರುವುದು ಜಿಲ್ಲೆಗೆ ಒದಗಿಸಿದ ಯಾಲಕ್ಕಿ ಕಂಪಾಗಿದೆ.

ಜಿಲ್ಲೆಯ ಜನರ ಬಹುದಿನಗಳ ಕನಸಾದ ವೈದ್ಯಕೀಯ ಕಾಲೇಜು ಈ ಮುಂಗಡಪತ್ರದಲ್ಲಿ ಘೋಷಣೆ ಯಾಗಬಹುದೆಂಬ ನಿರೀಕ್ಷೆ ಹುಸಿ ಯಾಗಿದೆ. ಮುಖ್ಯಮಂತ್ರಿ ಸದಾನಂದಗೌಡರು, ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಮಾಡಿದರೆ, ಹಾವೇರಿ ಜಿಲ್ಲೆಗೆ ಪ್ರಥಮ ಆಧ್ಯತೆ ನೀಡುವ ಭರವಸೆ ನೀಡಿದ್ದರು.

ಇದಕ್ಕೆ ಪೂರಕವೆಂಬಂತೆ ಸರ್ಕಾರ ಕೂಡಾ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅವಶ್ಯವಿರುವ ಜಾಗದ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತವನ್ನು ಕೋರಿತ್ತು. ಹೀಗಾಗಿ ವೈದ್ಯಕೀಯ ಕಾಲೇಜಿನ ಬಗ್ಗೆ ಸಹಜವಾಗಿ ನಿರೀಕ್ಷೆ ಇಮ್ಮಡಿಯಾಗಿತ್ತು. ಮುಖ್ಯ ಮಂತ್ರಿಗಳು ಮುಂಗಡ ಪತ್ರದಲ್ಲಿ ಯಾವುದೇ ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಸ್ತಾವ  ಮಾಡದಿ ರುವುದು ಜಿಲ್ಲೆಯಲ್ಲಿ ವೈದ್ಯ ಕೀಯ ಕಾಲೇಜು ಸ್ಥಾಪನೆಗೆ ಹಿನ್ನೆಡೆ ಆಗಿದೆ.

ಕನಕಗೆ ಬೆಣ್ಣೆ, ಸರ್ವಜ್ಞಗೆ ಸುಣ್ಣ: ಈಗಾ ಗಲೇ ಸರ್ಕಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಕನಕದಾಸರ ಜನ್ಮಭೂಮಿ ಬಾಡ ಹಾಗೂ ಕರ್ಮಭೂಮಿ ಕಾಗಿನೆಲೆ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಈ ಮುಂಗಡಪತ್ರದಲ್ಲಿಯೂ ಮತ್ತೆ ರೂ 2 ಕೋಟಿ  ಗಳನ್ನು ಪ್ರಾಧಿಕಾರಕ್ಕೆ ನೀಡಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.

ಆದರೆ, ಕನಕದಾಸರಿಗೆ ನೀಡಿದಷ್ಟು ಮಹತ್ವವನ್ನು ಜಿಲ್ಲೆಯ ಉಳಿದ ದಾರ್ಶನಿಕರಾದ ತ್ರಿಪದಿ ಕವಿ ಸರ್ವಜ್ಞ, ತತ್ವಪದಗಳ ಹರಿಕಾರ ಸಂತ ಶಿಶು ವಿನಾಳ ಶರೀಫ್‌ರ ಅಭಿವೃದ್ಧಿ ಪ್ರಾಧಿಕಾರ ರಚನೆಯ ಬೇಡಿಕೆ ಈಡೇರಿಸಿಲ್ಲ. ಕಳೆದ ಎರಡ್ಮೂರು ಮುಂಗಡಪತ್ರಗಳಲ್ಲಿ ಸರ್ಕಾರ ಕನಕದಾಸರಿಗೆ ಬೆಣ್ಣೆ ನೀಡುತ್ತಿದ್ದರೆ, ಇದೇ ಜಿಲ್ಲೆ ಯಲ್ಲಿ ಹುಟ್ಟಿರುವ ಸರ್ವಜ್ಞ, ಶರೀಫ್‌ರಿಗೆ ಸುಣ್ಣ ನೀಡುತ್ತಿರುವುದು ಬೇಸರ ಮೂಡಿಸಿದೆ.

ಜಾನಪದ ವಿವಿಗೆ ಮಮಕಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಕೂಸಾದ ಜಾನಪದ ವಿವಿಗೆ ಪ್ರಸಕ್ತ ಮುಂಗಡಪತ್ರದಲ್ಲಿ ಏಳೂವರೆ ಕೋಟಿ ರೂ.ಗಳನ್ನು ನೀಡುವ ಮೂಲಕ ವಿಶೇಷ ಮಮಕಾರ ವ್ಯಕ್ತಪಡಿಸಿದ್ದಾರೆ. ಆದರೂ, ಕಳೆದ ಮುಂಗಡಪತ್ರದಲ್ಲಿ ನೀಡಿದಂತೆ ಈ ವರ್ಷವೂ ಹತ್ತು ಕೋಟಿ ರೂ. ನೀಡಿದ್ದರೇ ಅದರ ಬೆಳಗವಣಿಗೆಗೆ ಇನ್ನಷ್ಟು ಸಹಕಾರಿಯಾಗುತ್ತಿತ್ತು ಎನ್ನುವ ಅಭಿಪ್ರಾಯ ಸಾಹಿತ್ಯ ವಲಯದ್ದಾಗಿದೆ.

ಮಠಮಾನ್ಯಗಳ ಮಮಕಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಠಮಾನ್ಯಗಳಿಗೆ ಧಾರಾಳವಾಗಿ ಹಣ ನೀಡ್ದ್ದಿದನ್ನು ಮುಂದುವರೆಸಿದಿರುವ ಸದಾನಂದ ಗೌಡರು ಮಠಮಾನ್ಯಗಳಿಗೆ ಹಣ ನೀಡುವು ದರಲ್ಲಿ  ಧಾರಾಳತವನ್ನು ಪ್ರದರ್ಶಿಸಿದ್ದಾರೆ.

ರಾಜ್ಯದ ನಾಲ್ಕು ವಿಭಾಗಗಳಲ್ಲಿರುವ ಕನಕಗುರುಪೀಠದ ಮಠಗಳಿಗೆ ತಲಾ ಒಂದು ಕೋಟಿ ರೂ.ಗಳನ್ನು ಯಡಿಯೂರಪ್ಪ ಅವರು ನೀಡಿದ್ದರೆ, ಸದಾನಂದಗೌಡರು ಕಾಗಿನೆಲೆ ಕನಕಗುರುಪೀಠವೊಂದಕ್ಕೆ ರೂ 6 ಕೋಟಿ  ನೀಡಿದ್ದಾರೆ. ಅದೇ ರೀತಿ ಜಿಲ್ಲೆಯ ಗಂಗಾಮತಸ್ಥ ಸಮುದಾಯದ ಅಂಬಿಗರ ಚೌಡಯ್ಯ ಪೀಠಕ್ಕೆ 1 ಕೋಟಿ, ರಾಣೆಬೆನ್ನೂರಿನ ಸಿದ್ಧಾರೂಢ ಟ್ರಸ್ಟ್ ಗೆ ರೂ 1 ಕೋಟಿ   ನೀಡಿದ್ದಾರೆ.

ಸಿಹಿಯಾದ ಮೆಣಸಿಕಾಯಿ: ಅಂತರ್‌ರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಜಿಲ್ಲೆಗೆ ಒಣಮೆಣಸಿನಕಾಯಿ ಮೇಲಿನ ಶೇ 5 ರ ತೆರಿಗೆಯನ್ನು ಶೇ 2ಕ್ಕೆ ಇಳಿಸುವ ಮೂಲಕ  ವ್ಯಾಪಾರಸ್ಥರಿಗೆ ಮೆಣಸಿ ಕಾಯಿಯನ್ನು ಸಿಹಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುವ ಮೆಕ್ಕೆ ಜೋಳ ತಾಂತ್ರಿಕ ಅಭಿವೃದ್ಧಿ ಪಾರ್ಕ್ ಸ್ಥಾಪಿಸಲು ನಿರ್ಧರಿಸಿರುವುದು ಮೆಕ್ಕೆಜೋಳ ಬೆಳೆಯುವ ರೈತರಿಗೆ ಮತ್ತಷ್ಟು ಉತ್ತೇಜನ ನೀಡಿ ದಂತಾಗಿದೆ. ಆದರೆ, ಎರಡು ವರ್ಷದ ಹಿಂದಿನ ಮುಂಗಡಪತ್ರದಲ್ಲಿ ಘೋಷಿಸಲಾದ ಮೆಣಸಿನ ಕಾಯಿ ಸಂಸ್ಕರಣ ಘಟಕ ಈವರೆಗೆ ಸ್ಥಾಪನೆ ಯಾಗಿಲ್ಲ. ಅದರಂತೆ ಮಕ್ಕೆಜೋಳ ಘಟಕವು ಆಗಬಾರದು ಎನ್ನುವುದು ರೈತರ ಪ್ರಾರ್ಥನೆ.

ಲೆಕ್ಕಕ್ಕಿಲ್ಲದ ಗೋಕಾಕ್: ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿ ಅಭಿವೃದ್ಧಿ ಪಡಿಸಲು ಮುಂಗಡಪತ್ರದಲ್ಲಿ 5ಕೋಟಿ ರೂ. ನೀಡಿರುವ ಮುಖ್ಯಮಂತ್ರಿಗಳು, ಜ್ಞಾನಪೀಠ ಪುರಸ್ಕೃತ ಡಾ.ವಿ.ಕೃ.ಗೋಕಾಕ್‌ರನ್ನು ಮರೆತಿದ್ದಾರೆ. ಅವರ ಜನ್ಮಸ್ಥಳ ಸವಣೂರು ಅಭಿವೃದ್ಧಿ ಹಾಗೂ ಅವರ ಸಾಹಿತ್ಯ ಪುನರ್ ಮುದ್ರಣ ಸೇರಿದಂತೆ ಇತರ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸ್ಥಾಪಿಸಿದ್ದರೂ, ಅದಕ್ಕೆ ಮುಂಗಡಪತ್ರದಲ್ಲಿ ಯಾವುದೇ ಅನುದಾನ ನೀಡದಿರುವುದು ಜಿಲ್ಲೆಯ ಸಾಹಿತಿಗಳಲ್ಲಿ ಬೇಸರ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.