ADVERTISEMENT

ಹೃದಯ ಬಡಿತ ಹೆಚ್ಚಿಸಿದ ಬೆಟ್ಟಿಂಗ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 11:20 IST
Last Updated 4 ಜನವರಿ 2011, 11:20 IST

ಹಾವೇರಿ: ಜಿ.ಪಂ., ತಾ.ಪಂ. ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿರುವವರ ಬೆಂಬಲಿಗರ ಸಂಖ್ಯೆ ಇನ್ನೂ ಏರುತ್ತಲೇ ಇದೆ. ಇದು ಬೆಟ್ಟಿಂಗ್‌ನಲ್ಲಿ ನಿರತರಾದವರಲ್ಲಿ ಮಾತ್ರವಲ್ಲ. ಅಭ್ಯರ್ಥಿಗಳ ಹೃದಯ ಬಡಿತ ಹೆಚ್ಚಿಸಿದೆ. ಅಭ್ಯರ್ಥಿಗಳು ಚುನಾವಣೆ ಮುಗಿದ ನಂತರ ಫಲಿತಾಂಶಕ್ಕಾಗಿ ರಾತ್ರಿಯೂ ಸರಿಯಾಗಿ ನಿದ್ದೆ ಮಾಡದೇ ಕಾಯುತ್ತಿದ್ದರೆ, ಅಭ್ಯರ್ಥಿಗಳ ಹೆಸರಿನ ಮೇಲೆ ಲಕ್ಷಾಂತರ ರೂ. ಬೆಟ್ಟಿಂಗ್ ನಡೆಸುತ್ತಿರುವ ಅಭ್ಯರ್ಥಿಗಳಿಗಿಂತ ಹೆಚ್ಚಿನ ಕುತೂಹಲದಿಂದ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಈ ಚುನಾವಣಾ ಫಲಿತಾಂಶ ಪ್ರಕಟವಾಗಲು ನಾಲ್ಕು ದಿನಗಳನ್ನು ತೆಗೆದುಕೊಂಡಿರುವುದೇ ಗ್ರಾಮೀಣ ಪ್ರದೇಶದಲ್ಲಿ ಬೆಟ್ಟಿಂಗ್‌ಗೆ ದಾರಿ ಮಾಡಿಕೊಟ್ಟಿದ್ದು, ಗ್ರಾಮೀಣ ಪ್ರದೇಶದ ಯಾವುದೇ ಮೂಲೆಗೆ ಹೋದರೂ, ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರದ ಬಗ್ಗೆಯೇ ಮಾತುಗಳು ನಡೆಯುತ್ತಿದೆ. ಗ್ರಾಮೀಣ ಭಾಗದ ಬಸ್ ನಿಲ್ದಾಣ, ದೇವಸ್ಥಾನಗಳು, ಚಹಾದ ಅಂಗಡಿ, ಸಲೂನ್ ಅಂಗಡಿಗಳು ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ರಾಜಾರೋಷವಾಗಿಯೇ ಬೆಟ್ಟಿಂಗ್ ನಡೆಯುತ್ತಿರುವುದು ಗೋಚರವಾಗದೇ ಇರದು. 

ಪರಸ್ಪರ ಸ್ನೇಹಿತರಲ್ಲಿ, ಬೀಗರು ಬಿಜ್ಜರಲ್ಲಿ, ಬೇರೆ ಬೇರೆ ರಾಜಕೀಯ ಕಾರ್ಯಕರ್ತರ ನಡುವೆ ಬೆಟ್ಟಿಂಗ್ ನಡೆಯುತ್ತಿದ್ದರೆ, ಕೆಲವಡೆ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಪತಿಗಳೇ ಬೆಟ್ಟಿಂಗ್ ವ್ಯವಹಾರಕ್ಕೆ ಇಳಿದಿರುವುದು ಗುಟ್ಟಾಗಿ ಉಳಿದಿಲ್ಲ. ಕೆಲವು ಕಡೆಗಳಲ್ಲಿ ಬೆಟ್ಟಿಂಗ್ ನಡೆಸುವುದಕ್ಕಾಗಿಯೇ ತಾತ್ಕಾಲಿಕ ಬುಕ್ಕಿಗಳು ಜನ್ಮತಾಳಿದ್ದಾರೆ. ಇಂತಹ ಬುಕ್ಕಿಗಳು ಗ್ರಾಮೀಣ ಭಾಗದ ಜನ ಸೇರುವ ಪ್ರದೇಶದಲ್ಲಿ ನಿಂತುಕೊಂಡು ಚುನಾವಣಾ ವಿಷಯವ ಚರ್ಚೆ ಆರಂಭಿಸಿ ತಮ್ಮ ತಮ್ಮಲ್ಲಿಯೇ ಒಬ್ಬರ ಹೆಸರಿನಲ್ಲಿ ಒಬ್ಬರು ಹಣ ಕಟ್ಟಲು ಆರಂಭಿಸುವ ಮೂಲಕ ಜನರನ್ನು ಬೆಟ್ಟಿಂಗ್‌ನತ್ತ ಸೆಳೆಯಲು ಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತದೆ.

ಇದೇ ಬುಕ್ಕಿಗಳು ಬೆಟ್ಟಿಂಗ್‌ಗಾಗಿ ಗ್ರಾಮೀಣ ಪ್ರದೇಶದ ಯುವಕರನ್ನು ಕಮಿಷನ್ ಏಜೆಂಟರನ್ನು ನೇಮಕ ಮಾಡಿಕೊಂಡಿದ್ದಾರೆ. ಅವರು ಎಷ್ಟು ಹಣವನ್ನು ಬುಕ್ಕಿಂಗ್ ಮಾಡಿಕೊಳ್ಳುತ್ತಾರೆಯೋ ಅದರ ಮೇಲೆ ಅವರಿಗೆ ಕಮಿಷನ್ ನೀಡುವ ಪದ್ಧತಿ ಸಹ ಜಾರಿಯಲ್ಲಿದೆ. 

ಐದು ಲಕ್ಷದವರೆಗೆ: ಚುನಾವಣಾ ಬೆಟ್ಟಿಂಗ್ ವ್ಯವಹಾರ ನೂರರಿಂದ 5 ಲಕ್ಷ ರೂ.ವರೆಗೆ ನಡೆಯುತ್ತಿದೆ. ಕೆಲವರು ಒಂದಕ್ಕೆ ಎರಡು ಪಟ್ಟು ನೀಡಲು ಒಪ್ಪಿಕೊಂಡು ಬೆಟ್ಟಿಂಗ್‌ನಲ್ಲಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಎಷ್ಟು ಹಣ ಕಟ್ಟುತ್ತಾರೆಯೋ ಅಷ್ಟೇ ಹಣವನ್ನು ವಾಪಸ್ಸು ನೀಡುವ ಒಪ್ಪಂದದ ಮೇಲೆಯೂ ಬೆಟ್ಟಿಂಗ್ ನಡೆಸುತ್ತಿದ್ದಾರೆ.

ಅಭ್ಯರ್ಥಿಗಳಿಗೆ ಬುಧವಾರ ಹೊರ ಬೀಳಲಿರುವ ಫಲಿತಾಂಶಕ್ಕಿಂತ ತಮ್ಮ ಮೇಲೆ ಇಷ್ಟೊಂದು ಹಣದ ಬೆಟ್ಟಿಂಗ್ ನಡೆಯುತ್ತಿದೆ ಎಂದು ತಿಳಿದೇ ಅಭ್ಯರ್ಥಿಗಳ ಹೃದಯ ಬಡಿತ ಹೆಚ್ಚಾಗುತ್ತಿದೆ. ಬಹುತೇಕ ಕಡೆಗಳಲ್ಲಿ ನೇರ ಸ್ಪರ್ಧೆ ಇರುವುದರಿಂದ ಯಾರು ಗೆಲ್ಲಬಹುದು ಎಂಬ ಗೊಂದಲ ಅಭ್ಯರ್ಥಿಗಳಲ್ಲಿದೆ. ಇಂತಹ ಸಂದರ್ಭದಲ್ಲಿ ತಮ್ಮ ಪರ ವಿರೋಧ ಬೆಟ್ಟಿಂಗ್ ಕಟ್ಟಿತ್ತಿರುವ ಸುದ್ದಿ ಅಭ್ಯರ್ಥಿಗಳ ನಿದ್ದೆಯನ್ನು ಮತ್ತಷ್ಟು ಕೆಡಿಸಿದೆ. ಅದಕ್ಕಾಗಿಯೇ ಕೆಲ ಅಭ್ಯರ್ಥಿಗಳು ಬೆಟ್ಟಿಂಗ್ ಸುದ್ದಿಯನ್ನು ತಮಗೆ ತಿಳಿಸದಂತೆ ತಮ್ಮ ಬೆಂಬಲಿಗರಿಗೆ ತಾಕೀತು ಸಹ ಮಾಡಿದ್ದಾರೆಂದು ಹೇಳಲಾಗುತ್ತದೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಟ್ಟಿಂಗ್‌ನ ಬಹುತೇಕ ವ್ಯವಹಾರ, ಯಾವುದೇ ರಾಜಕೀಯ ಪಕ್ಷಗಳ ಹೆಸರಿನ ಮೇಲೆ ನಡೆಯದೇ, ಕೇವಲ ಆ ವ್ಯಕ್ತಿ ಹಾಗೂ ಅವರು ಚುನಾವಣೆಯಲ್ಲಿ ಮಾಡಿದ ಖರ್ಚಿನ ಮೇಲೆ ಇದೇ ಅಭ್ಯರ್ಥಿ ಗಲ್ಲಬಹುದೆಂಬ ಅಂದಾಜಿನ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಸರ್ಕಾರ, ಪಕ್ಷ ಹಾಗೂ ತತ್ವ ಸಿದ್ಧಾಂತಗಳು ಯಾವುದೇ ಪರಿಣಾಮ ಬೀರಿಲ್ಲ. ಹಣವೊಂದೇ ಚುನಾವಣಾ ಫಲಿತಾಂಶ ನಿರ್ಧರಿಸಲಿದೆ ಎಂಬುದು ಈ ಬೆಟ್ಟಿಂಗ್ ವ್ಯವಹಾರದಿಂದಲೇ ತಿಳಿದುಬರುತ್ತದೆ.

ಅಹಿತಕರ ಘಟನೆಗೆ ಕಾರಣ?: ಈ ಚುನಾವಣಾ ಬೆಟ್ಟಿಂಗ್ ವ್ಯವಹಾರ ಎಲ್ಲರ ಕಣ್ಣು ತಪ್ಪಿಸಿ ನಡೆಯುತ್ತಿರುವುದರಿಂದ, ಚುಣಾವಣಾ ಫಲಿತಾಂಶ ಬಂದ ಮೇಲೆ ವ್ಯವಹಾರ ಸರಿಯಾಗದೇ ಅಹಿತಕರ ಘಟನೆಗಳಿಗೆ ಕಾರಣವಾದರೆ, ಆಶ್ಚರ್ಯಪಡಬೇಕಿಲ್ಲ. ಕೂಡಲೇ ಪೊಲೀಸರು ಇಂತಹ ವ್ಯಕ್ತಿಗಳ ಮೇಲೆ ಕಣ್ಣಿಟ್ಟು ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯ ಎಂದು ಪ್ರಜ್ಞಾವಂತ ನಾಗರಿಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.