ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಸಂಧಾನ ಸಭೆ ವಿಫಲ

ಕಳಪೆ ಗೋವಿನಜೋಳ ಬೀಜ ಪೂರೈಕೆ ಆರೋಪ: ಪರಿಹಾರಕ್ಕೆ ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 8:30 IST
Last Updated 4 ಸೆಪ್ಟೆಂಬರ್ 2013, 8:30 IST
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ರೈತರ ಹಾಗೂ ಜಿಯೋ ಹೈಬ್ರಿಡ್ ಬೀಜ ಕಂಪೆನಿ ಅಧಿಕಾರಿಗಳ ಜತೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಹಾಗೂ ರೈತರು ಚಿತ್ರದಲ್ಲಿದ್ದಾರೆ.
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ರೈತರ ಹಾಗೂ ಜಿಯೋ ಹೈಬ್ರಿಡ್ ಬೀಜ ಕಂಪೆನಿ ಅಧಿಕಾರಿಗಳ ಜತೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಹಾಗೂ ರೈತರು ಚಿತ್ರದಲ್ಲಿದ್ದಾರೆ.   

ಹಾವೇರಿ:  ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬ್ಯಾಡಗಿ ತಾಲ್ಲೂಕಿನ ರೈತರ ಹಾಗೂ ಜಿಯೋ ಬೀಜೋತ್ಪಾದನೆ ಕಂಪೆನಿ ಅಧಿಕಾರಿಗಳ ಸಂಧಾನ ಸಭೆ ವಿಫಲವಾಯಿತು.

ಬ್ಯಾಡಗಿ ತಾಲ್ಲೂಕಿನ ರೈತರಿಗೆ ಜಿಯೋ ಹೈಬ್ರಿಡ್ ಬೀಜ ಕಂಪೆನಿ ನೀಡಿರುವ ಗೋವಿನಜೋಳ ಬೀಜ ಕಳಪೆ ಮಟ್ಟದಾಗಿದ್ದು, 80 ಎಕರೆ ಪ್ರದೇಶದ ತೆನೆಗಟ್ಟದೇ ಬೆಳೆ ಸಂಪೂರ್ಣ ಹಾನಿಯಾಗಿದೆ. ಕಂಪೆನಿ ರೈತರಿಗೆ ಕಳಪೆ ಬೀಜ ನೀಡುವ ಮೂಲಕ ಮೋಸ ಮಾಡಿದೆ ಎಂದು ರೈತರು ಕಂಪೆನಿ ವಿರುದ್ಧ ಆರೋಪ ಮಾಡಿದ್ದರಲ್ಲದೇ, ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ರೈತರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರು, ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ರೈತರ ಹಾಗೂ ಜಿಯೋ ಹೈಬ್ರಿಡ್ ಬೀಜ ಕಂಪೆನಿ ಅಧಿಕಾರಿಗಳ ಸಭೆ ಆಯೋಜಿಸಿದ್ದರು.

ಸಭೆಯಲ್ಲಿ ರೈತ ಮುಖಂಡರು ಪಾಲ್ಗೊಂಡು, ಜಿಯೋ ಹೈಬ್ರಿಡ್ ಬೀಜ ಕಂಪೆನಿ ರೈತರಿಗೆ ಮೋಸ ಮಾಡಿದೆ. ಕೃಷಿ ಇಲಾಖೆ ಅಧಿಕಾರಿಗಳು ಕಂಪೆನಿ ಅಧಿಕಾರಿಗಳ ಜತೆಗೆ ಚರ್ಚಿಸಿ ರೈತರ ಹಾನಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

ಜಿಯೋ ಹೈಬ್ರಿಡ್ ಬೀಜ ಕಂಪೆನಿಯ ಅಧಿಕಾರಿ ಸುಹಾಸ್ ಮಾತನಾಡಿ, ಕೃಷಿ ವಿಶ್ವವಿದ್ಯಾಲಯದಿಂದ ಬೀಜಗಳನ್ನು ಪರಿಷ್ಕರಣೆ ಮಾಡಿದೆ. ವಿಶ್ವವಿದ್ಯಾಲಯದ ವರದಿ ಪ್ರಕಾರ ಬೀಜಗಳು ಉತ್ತಮ ಗುಣಮಟ್ಟದ್ದಾಗಿವೆ. ರೈತರು ಬೀಜವನ್ನು ಆಳವಾಗಿ ಮತ್ತ ತಡವಾಗಿ ಬಿತ್ತನೆ ಮಾಡಿದ್ದರಿಂದ ಹಾಗೂ ಹೆಚ್ಚಿನ ಪ್ರಮಾಣದ ಮಳೆಯ ತೇವಾಂಶದಿಂದ ಬೆಳೆ ಉತ್ತಮವಾಗಿ ಬೆಳೆದರೂ ಫಸಲು ಬರುವಲ್ಲಿ ಏರುಪೇರಾಗಿದೆ ಎಂದು ಸ್ಪಷ್ಟಪಡಿಸಿದರು.

ಕಂಪೆನಿ ಅಧಿಕಾರಿಗಳ ಮಾತನ್ನು ಸಂಪೂರ್ಣವಾಗಿ ತಳ್ಳಿಹಾಕಿದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಕಂಪೆನಿ ಅಧಿಕಾರಿಗಳಿಂದ ರೈತರು ಬಿತ್ತನೆ ಪಾಠ ಕಲಿಯಬೇಕಾಗಿಲ್ಲ. ರೈತರು ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಗೋವಿನಜೋಳ ಬಿತ್ತನೆ ಮಾಡುತ್ತಿದ್ದಾರೆ. ಕಂಪೆನಿ ಅಧಿಕಾರಿಗಳು ತಮ್ಮ ತಪ್ಪನ್ನು ರೈತರ ಮೇಲೆ ಹಾಕಿ ಜಾರಿಕೊಳ್ಳುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾವು ಬೀಜ ನೀಡುವಾಗ ಹೇಳಿರುವಂತೆ ಫಸಲು ಬರದಿದ್ದರೂ ಅದಕ್ಕೆ ಸಮೀಪವಾದರೂ ಬರಬೇಕು. ಆದರೆ, ಬೀಜಕ್ಕೆ ಹಾಕಿದ ದುಡ್ಡು ಸಹ ಬರುವುದಿಲ್ಲ. ಅದಕ್ಕಾಗಿ ನೀವು ಮಾಡಿದ ತಪ್ಪನ್ನು ಒಪ್ಪಿಕೊಂಡು ರೈತರಿಗೆ ಆದ ಹಾನಿಯನ್ನು ಭರಿಸಬೇಕು ಎಂದು ಪಟ್ಟು ಹಿಡಿದರು.

ಇದೇ ಸಂದರ್ಭದಲ್ಲಿ ರೈತ ಸಂಘದ ಬ್ಯಾಡಗಿ ತಾಲ್ಲೂಕು ಘಟಕದ ಅಧ್ಯಕ್ಷರುದ್ರಗೌಡ ಕಾಡನಗೌಡ್ರ ಮಾತನಾಡಿ, ನಾವು ಕೃಷಿ ಇಲಾಖೆಯಿಂದ ಜಿಯೋ ಕಂಪೆನಿ ಹೈಬ್ರಿಡ್ ಬೀಜಗಳನ್ನು ಖರೀದಿಸಿದ್ದೇವೆ. ಕಂಪೆನಿಯವರು ಪರಿಹಾರ ನೀಡಲು ಆಗುವುದಿಲ್ಲ ಎಂದರೆ, ಕೃಷಿ ಇಲಾಖೆ ಮೂಲಕ ಪರಿಹಾರ ಕೊಡಿಸಬೇಕು. ಇಲ್ಲದಿದ್ದರೇ, ರೈತ ಸಂಘದ ವತಿಯಿಂದ ತಹಶೀಲ್ದಾರ್ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ರೈತರ ಹಾಗೂ ಕಂಪೆನಿ ಅಧಿಕಾರಿಗಳ ಮಾತುಗಳನ್ನು ಆಲಿಸಿದ ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಮಾತನಾಡಿ, ಜಿಯೋ ಕಂಪೆನಿ ರೈತರಿಗೆ ಏಳು ಕ್ವಿಂಟಲ್ ಹೈಬ್ರಿಡ್ ಬೀಜಗಳನ್ನು ವಿತರಿಸಿದ್ದು, ಅವುಗಳನ್ನು ಬಿತ್ತನೆ ಮಾಡಿದ ರೈತರು ಹಾನಿಗೊಳಗಾಗಿದ್ದಾರೆ ಎಂಬುದು ಬೆಳೆಗಳನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ಅದಕ್ಕಾಗಿ ಕಂಪೆನಿಯವರು ಬೀಜ ಖರೀದಿಸಿದ ಹಾನಿಗೊಳಗಾದ ಎಲ್ಲ ರೈತರಿಗೆ ಪರಿಹಾರ ನೀಡುವಂತೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿಗಳ ಸೂಚನೆಗೆ ಒಪ್ಪದ ಕಂಪೆನಿ ಅಧಿಕಾರಿ ಸುಹಾಸ್, ಬೀಜಗಳು ಗುಣಮಟ್ಟದ್ದಾಗಿವೆ. ಪರಿಹಾರ ನೀಡುವ ಮಾತೇ ಇಲ್ಲ. ಹಾಗೊಂದು ವೇಳೆ ಪರಿಹಾರ ನೀಡಬೇಕೆಂದರೆ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರ ಜತೆ ಚರ್ಚಿಸಿ ತಿಳಿಸುವುದಾಗಿ ಹೇಳಿದರು.

ಅಧಿಕಾರಿಗಳ ಮಾತಿಗೆ ತೀವ್ರ ಆಕ್ರೋಶಗೊಂಡ ರಾಮಣ್ಣ ಕೆಂಚೆಳ್ಳೇರ, ರೈತರ ಬದುಕಿನ ಜತೆಗೆ ಚೆಲ್ಲಾಟವಾಡುತ್ತಿದ್ದಿರಾ? ಎರಡು ಗಂಟೆವರೆಗೂ ಕಾಗೆ, ಗುಬ್ಬಿ ಕಥೆ ಹೇಳಾಕ ಬಂದಿದ್ದೇವೆ ಎಂದು ತಿಳಿದಿದ್ದೀರಾ? ಎಂದು ಪ್ರಶ್ನಿಸಿದರಲ್ಲದೇ, ಪರಿಹಾರ ಕೊಡುವವರೆಗೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗುಟುರು ಹಾಕಿದರು.

ಸರ್ಕಾರ ನಿಮ್ಮಂತ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಂಡು ರೈತರನ್ನು ಕೊಲ್ಲಲು ಸಂಚು ನಡೆಸುತ್ತಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ಇಲ್ಲವಾದರೆ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟ ಮಾಡಲಾಗುವುದು ಎಂದುಎಚ್ಚರಿಸಿದರು.

ಕೊನೆಯಲ್ಲಿ ಸಂದಾನ ವಿಫಲವಾಗಿದ್ದರಿಂದ ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ ಅವರು ಮುಂಬರುವ ಶುಕ್ರವಾರದಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಜತೆಗೆ ಸಭೆ ನಡೆಸುವುದಾಗಿ ತಿಳಿಸಿದರಲ್ಲದೇ, ಅಂದಿನ ಸಭೆಗೆ ರೈತರು ಹಾಗೂ ಕೆಂಪೆನಿ ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ  ಜಂಟಿ ಕೃಷಿ ನಿರ್ದೇಶಕ ಗಣೇಶ ನಾಯ್ಕ, ಸಹಾಯಕ ಜಂಟಿ ಕೃಷಿ ಅಧಿಕಾರಿ ಟಿ.ಎಚ್.ಬ್ಯಾಡಗಿ, ಕೃಷಿ ಅಧಿಕಾರಿ ಡಿ.ಎಸ್. ಕೊಪ್ಪದ, ಜಿಯೋ ಕಂಪೆನಿ ಅಧಿಕಾರಿಗಳಾದ ಮುರಳಿಧರ್ ರಾವ್, ಶಿವರಾಮಯ್ಯ, ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಣ್ಣ ಎಲಿ, ರೈತಾರದ ಶಶಿಧರ ದೊಡ್ಡಮನಿ, ಚಿಕ್ಕಣ್ಣ ಚೂರಿ, ರಮೇಶ ಮಲ್ಲಾಡದ, ಬಸನಗೌಡ ಪಾಟೀಲ, ಮಹೇಶ ಕರ್ಜಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.