ADVERTISEMENT

ಹಾವೇರಿ: ₹1 ಕೋಟಿ ಮೌಲ್ಯದ ಸ್ವತ್ತು ವಾರಸುದಾರರಿಗೆ ಹಸ್ತಾಂತರ

ಜಿಲ್ಲಾ ಪೊಲೀಸ್‌ ಕಾರ್ಯಾಲಯದಲ್ಲಿ ‘ಪ್ರಾಪರ್ಟಿ ರಿಟರ್ನ್‌ ಪರೇಡ್‌’: ಸಂತಸ ವ್ಯಕ್ತಪಡಿಸಿದ ವಾರಸುದಾರರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 10:42 IST
Last Updated 8 ಡಿಸೆಂಬರ್ 2021, 10:42 IST
ಹಾವೇರಿ ನಗರದ ಜಿಲ್ಲಾ ಪೊಲೀಸ್‌ ಕಾರ್ಯಾಲಯದ ಆವರಣದಲ್ಲಿ ಬುಧವಾರ ನಡೆದ ‘ಪ್ರಾಪರ್ಟಿ ರಿಟರ್ನ್‌ ಪರೇಡ್‌’ ಕಾರ್ಯಕ್ರಮದಲ್ಲಿ, ಪತ್ತೆಯಾದ ಆಭರಣಗಳನ್ನು ವಾರಸುದಾರರಿಗೆ ಎಸ್ಪಿ ಹನುಮಂತರಾಯ ಹಸ್ತಾಂತರಿಸಿದರು  –ಪ್ರಜಾವಾಣಿ ಚಿತ್ರ 
ಹಾವೇರಿ ನಗರದ ಜಿಲ್ಲಾ ಪೊಲೀಸ್‌ ಕಾರ್ಯಾಲಯದ ಆವರಣದಲ್ಲಿ ಬುಧವಾರ ನಡೆದ ‘ಪ್ರಾಪರ್ಟಿ ರಿಟರ್ನ್‌ ಪರೇಡ್‌’ ಕಾರ್ಯಕ್ರಮದಲ್ಲಿ, ಪತ್ತೆಯಾದ ಆಭರಣಗಳನ್ನು ವಾರಸುದಾರರಿಗೆ ಎಸ್ಪಿ ಹನುಮಂತರಾಯ ಹಸ್ತಾಂತರಿಸಿದರು  –ಪ್ರಜಾವಾಣಿ ಚಿತ್ರ    

ಹಾವೇರಿ: ಜಿಲ್ಲೆಯಲ್ಲಿ ನಡೆದ 53 ಪ್ರಮುಖ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ನಗದು, ಚಿನ್ನ–ಬೆಳ್ಳಿ ಆಭರಣಗಳು, ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ₹1.08 ಕೋಟಿ ಮೌಲ್ಯದ ಸ್ವತ್ತನ್ನು ಸಂಬಂಧಿಸಿದ ವಾರಸುದಾರರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಹಸ್ತಾಂತರಿಸಿದರು.

ನಗರದ ಜಿಲ್ಲಾ ಪೊಲೀಸ್‌ ಕಾರ್ಯಾಲಯದ ಆವರಣದಲ್ಲಿ ಬುಧವಾರ ‘ಪ್ರಾಪರ್ಟಿ ರಿಟರ್ನ್‌ ಪರೇಡ್‌’ ಕಾರ್ಯಕ್ರಮ ನಡೆಯಿತು. ಕಳೆದುಕೊಂಡ ವಸ್ತುಗಳನ್ನು ಮತ್ತೆ ಪಡೆದಿದ್ದರಿಂದ ವಾರಸುದಾರರು ಸಂತಸ ವ್ಯಕ್ತಪಡಿಸಿ, ಪೊಲೀಸ್‌ ಇಲಾಖೆಗೆ ಧನ್ಯವಾದಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಹನುಮಂತರಾಯ, ಹಾವೇರಿ ಉಪವಿಭಾಗದ 15 ಪ್ರಕರಣಗಳಲ್ಲಿ ₹71.93 ಲಕ್ಷ, ಶಿಗ್ಗಾವಿ ಉಪವಿಭಾಗದ 12 ಪ್ರಕರಣಗಳಲ್ಲಿ ₹10.78 ಲಕ್ಷ ರಾಣೆಬೆನ್ನೂರು ಉಪವಿಭಾಗದ 26 ಪ್ರಕರಣಗಳಲ್ಲಿ ₹26 ಲಕ್ಷ ಮೌಲ್ಯದ ಸ್ವತ್ತನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದೇವೆ ಎಂದರು.

ADVERTISEMENT

ಅಪರಾಧ ತಡೆ ಮಾಸಾಚರಣೆ: ಪೊಲೀಸ್‌ ಇಲಾಖೆವಶಪಡಿಸಿಕೊಂಡ ಸ್ವತ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಸಂಬಂಧಿಕರಿಗೆ ಕಾಲಕಾಲಕ್ಕೆ ಹಸ್ತಾಂತರ ಮಾಡುತ್ತಿರುತ್ತೇವೆ. ಇದು ಇಲಾಖೆಯ ಸಾಮಾನ್ಯ ಪ್ರಕ್ರಿಯೆಯಾಗಿದೆ. ‘ಅಪರಾಧ ತಡೆ ಮಾಸಾಚರಣೆ’ ಅಂಗವಾಗಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಇತ್ತೀಚೆಗೆ ಪತ್ತೆಯಾದ ಪ್ರಕರಣಗಳ ಸ್ವತ್ತನ್ನು ಒಟ್ಟಿಗೆ ಎಲ್ಲ ವಾರಸುದಾರರಿಗೆ ಹಿಂದಿರುಗಿಸಿ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ನಮ್ಮದಾಗಿದೆ ಎಂದರು.

₹28 ಲಕ್ಷ ಮೌಲ್ಯದ ಮೆಣಸಿನಕಾಯಿ ಪುಡಿ, ₹27 ಲಕ್ಷ ಮೌಲ್ಯದ ಬ್ಯಾಡಗಿ ಮೆಣಸಿನಕಾಯಿಗಳನ್ನು ಗುಜರಾತ್‌ ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಪೊಲೀಸ್‌ ತಂಡ ಸಂಚರಿಸಿ, ವಶಪಡಿಸಿಕೊಂಡಿದೆ. ಜತೆಗೆ, ₹4.50 ಲಕ್ಷ ಮೌಲ್ಯದ ತಾಮ್ರದ ತಂತಿ, ಒಂದು ಲಾರಿ, 23 ಬೈಕ್‌ಗಳು, 1 ಸರಕು ಸಾಗಣೆ ವಾಹನ, 1 ಟಿಪ್ಪರ್‌ ಸೇರಿದಂತೆ ಮೌಲ್ಯಯುತ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದೇವೆ ಎಂದರು.

ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಿ: ಬ್ಯಾಡಗಿಯಲ್ಲಿ ಮೆಣಸಿನಕಾಯಿ ವ್ಯಾಪಾರ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಇಲ್ಲಿ ವಂಚನೆ ಮತ್ತು ಕಳವು ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಹೀಗಾಗಿ ವರ್ತಕರು ಮತ್ತು ಲಾರಿ ಮಾಲೀಕರ ಸಭೆ ನಡೆಸಿ ಜಾಗೃತಿ ಮೂಡಿಸಿದ್ದೇವೆ. ಸರಕು ಸಾಗಣೆ ಸಂದರ್ಭ ಲಾರಿ ಚಾಲಕ ಮತ್ತು ಮಾಲೀಕರ ಬಗ್ಗೆ ಪೂರ್ವಾಪರ ತಿಳಿದುಕೊಳ್ಳುವುದು ಅವಶ್ಯ. ಮನೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.

‘ಊರಿಗೆ ಹೋಗುವಾಗ ಮಾಹಿತಿ ನೀಡಿ’
ಬೈಕ್‌ ನಿಲುಗಡೆ ಮಾಡುವಾಗ ಸೈಡ್‌ ಲಾಕ್‌ ಹಾಕಬೇಕು, ಸಿಕ್ಕ ಸಿಕ್ಕ ಕಡೆ ಪಾರ್ಕ್‌ ಮಾಡಬಾರದು. ಮನೆಗಳಿಗೆ ಬೀಗ ಹಾಕಿಕೊಂಡು ಹೆಚ್ಚು ದಿನ ಬೇರೆ ಊರುಗಳಿಗೆ ಹೋಗುವಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ನೀವು ಮರಳಿ ಮನೆಗೆ ಬರುವವರೆಗೆ ಪೇಪರ್‌ ಮತ್ತು ಹಾಲಿನ ಪ್ಯಾಕೆಟ್‌ ಹಾಕದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅವುಗಳೇ ಮನೆಗಳ್ಳತನಕ್ಕೆ ಸುಳಿವು ನೀಡುತ್ತವೆ.ರಾತ್ರಿ ವೇಳೆ ಮನೆಯ ಸುತ್ತ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಎಸ್ಪಿ ಹನುಮಂತರಾಯ ಸಲಹೆ ನೀಡಿದರು.

‘ಹಣ, ಆಭರಣ ಬ್ಯಾಂಕ್‌ ಲಾಕರ್‌ನಲ್ಲಿಡಿ’
ಮಹಿಳೆಯರು ವಾಕಿಂಗ್‌ ಮಾಡುವಾಗ ಹಾಗೂ ಹಾಲು, ತರಕಾರಿ, ದಿನಸಿ ತರಲು ಹೋಗುವಾಗ ಬೆಲೆ ಬಾಳುವ ಆಭರಣಗಳನ್ನು ಧರಿಸಬಾರದು. ಮನೆಗಳಲ್ಲಿರುವ ನಗದು ಮತ್ತು ಆಭರಣವನ್ನು ಸಾಧ್ಯವಾದಷ್ಟೂ ಬ್ಯಾಂಕ್‌ ಲಾಕರ್‌ಗಳಲ್ಲಿ ಇಡಬೇಕು. ದೇವಸ್ಥಾನ ಹುಂಡಿಗಳಲ್ಲಿರುವ ಹಣವನ್ನು ಕಾಲಕಾಲಕ್ಕೆ ಎಣಿಕೆ ಮಾಡಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಜಾತ್ರೆ ಮತ್ತು ವಿಶೇಷ ಸಂದರ್ಭಗಳಲ್ಲಿ ಮಾತ್ರ ದೇವರಿಗೆ ಆಭರಣಗಳನ್ನು ಹಾಕಬೇಕು ಎಂದು ಎಸ್ಪಿ ಹನುಮಂತರಾಯ ಮನವಿ ಮಾಡಿದರು.

ಡಿಸಿಆರ್‌ಬಿ ಡಿವೈಎಸ್ಪಿ ಎಂ.ಎಸ್‌. ಪಾಟೀಲ, ಹಾವೇರಿ ಉಪವಿಭಾಗದ ಡಿವೈಎಸ್ಪಿ ಶಂಕರ ಮಾರೀಹಾಳ, ರಾಣೆಬೆನ್ನೂರು ಉಪವಿಭಾಗದ ಡಿವೈಎಸ್ಪಿ ಟಿ.ವಿ.ಸುರೇಶ್‌, ಶಿಗ್ಗಾವಿ ಉಪವಿಭಾಗದ ಡಿವೈಎಸ್ಪಿ ಕಲ್ಲೇಶಪ್ಪ ಓ.ಬಿ., ಜಿಲ್ಲಾ ಸಶಸ್ತ್ರ ಪೊಲೀಸ್‌ ವಿಭಾಗದ ಡಿವೈಎಸ್ಪಿ ಹನಕನಹಳ್ಳಿ ಮತ್ತು ಇನ್‌ಸ್ಪೆಕ್ಟರ್‌, ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.