ADVERTISEMENT

1104 ಶಾಲಾ ಕೊಠಡಿಗಳಿಗೆ ಹಾನಿ

ನಿರಂತರ ಮಳೆಗೆ ಸೋರುತ್ತಿರುವ ಸರ್ಕಾರಿ ಶಾಲೆಗಳು: ಶಿಕ್ಷಣ ಇಲಾಖೆಗೆ ₹22 ಕೋಟಿ ನಷ್ಟ

ಸಿದ್ದು ಆರ್.ಜಿ.ಹಳ್ಳಿ
Published 18 ಜುಲೈ 2022, 14:16 IST
Last Updated 18 ಜುಲೈ 2022, 14:16 IST
ನಿರಂತರ ಮಳೆಯಿಂದ ರಟ್ಟೀಹಳ್ಳಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲಾ ಕೊಠಡಿಯ ಚಾವಣಿ, ಗೋಡೆ ಕುಸಿದಿದೆ 
ನಿರಂತರ ಮಳೆಯಿಂದ ರಟ್ಟೀಹಳ್ಳಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲಾ ಕೊಠಡಿಯ ಚಾವಣಿ, ಗೋಡೆ ಕುಸಿದಿದೆ    

ಹಾವೇರಿ: ಜುಲೈ ತಿಂಗಳಲ್ಲಿ 15 ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದ ಜಿಲ್ಲೆಯಾದ್ಯಂತ 481 ಸರ್ಕಾರಿ ಶಾಲೆಗಳ 1104 ಕೊಠಡಿಗಳಿಗೆ ಭಾಗಶಃ ಹಾನಿಯಾಗಿದೆ. ಇದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬರೋಬ್ಬರಿ ₹22 ಕೋಟಿ ನಷ್ಟವಾಗಿದೆ.

ಹಾರಿ ಹೋದ ಶೀಟುಗಳು, ಕುಸಿದು ಬಿದ್ದ ಕಟ್ಟಡಗಳು, ಬಿರುಕು ಬಿಟ್ಟ ಗೋಡೆಗಳು, ಸೋರುವ ಚಾವಣಿಗಳು, ನೇತಾಡುವ ಮರದ ತೀರುಗಳು, ಒಡೆದು ಹೋದ ಹೆಂಚುಗಳು, ಉದುರುತ್ತಿರುವ ಸಿಮೆಂಟ್‌... ಹೀಗೆ ನಾನಾ ತರಹದ ಸಮಸ್ಯೆಗಳಿಗೆ ಸರ್ಕಾರಿ ಶಾಲಾ ಕೊಠಡಿಗಳು ತುತ್ತಾಗಿವೆ. ದುರಸ್ತಿ ಮತ್ತು ಮರುನಿರ್ಮಾಣದ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿರುವುದು ಪಾಲಕರು ಮತ್ತು ಮಕ್ಕಳ ಬೇಸರಕ್ಕೆ ಕಾರಣವಾಗಿದೆ.

ಗಾಯದ ಮೇಲೆ ಬರೆ:

ADVERTISEMENT

ಮೊದಲೇ ಕೊಠಡಿ ಕೊರತೆ ಎದುರಿಸುತ್ತಿದ್ದ ಶಿಕ್ಷಣ ಇಲಾಖೆಗೆ, ಮಳೆಯಿಂದಾದ ಹಾನಿಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸುಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ಮಕ್ಕಳಿಗೆ ತರಗತಿ ಸೌಲಭ್ಯ ಕಲ್ಪಿಸುವುದು ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದೆ.

ಹಾವೇರಿ ಜಿಲ್ಲೆಯಲ್ಲಿ 1,160 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, 141 ಸರ್ಕಾರಿ ಪ್ರೌಢಶಾಲೆಗಳಿದ್ದು, ಸುಮಾರು 1.57 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 7,761 ತರಗತಿ ಕೊಠಡಿಗಳ ಪೈಕಿ, 5,196 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. 880 ಕೊಠಡಿಗಳು ಮರುನಿರ್ಮಾಣ ಹಾಗೂ 1,685 ಕೊಠಡಿಗಳ ದುರಸ್ತಿ ಕಾರ್ಯವಾಗಬೇಕಿದೆ.

ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ:

‘ಮಕ್ಕಳ ಜೀವದ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಶಿಥಿಲ ಕೊಠಡಿಗಳಲ್ಲಿ ಮಕ್ಕಳಿಗೆ ತರಗತಿ ನಡೆಸಬಾರದು. ಅಕಸ್ಮಾತ್‌ ಅವಘಡ ಸಂಭವಿಸಿದರೆ, ಇಲಾಖೆ ಅಧಿಕಾರಿಗಳೇ ಹೊಣೆಯಾಗುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಕೀತು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್ ಕೂಡ ಸುತ್ತೋಲೆ ಹೊರಡಿಸಿದ್ದಾರೆ.

ಅನುದಾನಕ್ಕಾಗಿ ಪ್ರಸ್ತಾವ:

‘ಶಿಗ್ಗಾವಿ ತಾಲ್ಲೂಕಿನ 133, ಸವಣೂರು ತಾಲ್ಲೂಕಿನ 38 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲವಾಗಿದ್ದವು. ಈ ಕೊಠಡಿಗಳ ಮರುನಿರ್ಮಾಣ ಕಾರ್ಯಕ್ಕೆ ಮಾರ್ಚ್‌ ತಿಂಗಳಲ್ಲಿ ₹20 ಕೋಟಿ ಅನುದಾನ ಬಿಡುಗಡೆಯಾಗಿದೆ. ಉಳಿದ 6 ತಾಲ್ಲೂಕುಗಳಲ್ಲಿ ಶಿಥಿಲಗೊಂಡಿರುವ ಸುಮಾರು 650 ಕೊಠಡಿಗಳ ಮರುನಿರ್ಮಾಣಕ್ಕೆ ಅಂದಾಜು ₹71 ಕೋಟಿ ಅನುದಾನ ಬಿಡುಗಡೆಯಾಗಬೇಕಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಡಿಡಿಪಿಐ ಜಗದೀಶ್ವರ ಮಾಹಿತಿ ನೀಡಿದರು.

‘₹10 ಕೋಟಿ ಬಿಡುಗಡೆಗೆ ಪ್ರಸ್ತಾವ’

‘1104 ಕೊಠಡಿಗಳ ದುರಸ್ತಿಗೆ ವಿಪತ್ತು ಪರಿಹಾರ ನಿಧಿಯಿಂದ ₹9.62 ಕೋಟಿ ಬಿಡುಗಡೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಶಿಥಿಲವಾಗಿರುವ ಕೊಠಡಿಗಳಿಂದ ಮಕ್ಕಳನ್ನು ಲಭ್ಯವಿರುವ ಸುಸಜ್ಜಿತ ಕೊಠಡಿಗಳಿಗೆ ಸ್ಥಳಾಂತರ ಮಾಡಿ ತರಗತಿ ನಡೆಸುತ್ತಿದ್ದೇವೆ. ಮಕ್ಕಳ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡುವಂತೆ ಎಲ್ಲ ಬಿಇಒಗಳಿಗೆ ಸೂಚನೆ ನೀಡಿದ್ದೇವೆ’ ಎಂದು ಡಿಡಿಪಿಐ ಜಗದೀಶ್ವರ ತಿಳಿಸಿದರು.

‘ಶಾಲಾ ಕೊಠಡಿ ಕೊರತೆ ಇರುವ ಕಡೆ ಸರ್ಕಾರಿ ಕಟ್ಟಡ, ಪಂಚಾಯಿತಿ ಕಟ್ಟಡಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಅಗತ್ಯಬಿದ್ದರೆ, ಬಾಡಿಗೆ ಕಟ್ಟಡ ತೆಗೆದುಕೊಳ್ಳಲು ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.