ADVERTISEMENT

ಅಪ್ಪ, ತುತ್ತು ತಿನ್ನಿಸುವ ಅಮ್ಮನನ್ನೇ ಕಸಿದ ಕೊರೊನಾ: ಆಸರೆ ಕಳೆದುಕೊಂಡ 112ಮಕ್ಕಳು

ಮನೆಯ ಆಧಾರಸ್ತಂಭವಾಗಿದ್ದ ಅಪ್ಪ, ತುತ್ತು ತಿನ್ನಿಸುವ ಅಮ್ಮನನ್ನೇ ಕಸಿದ ಕೊರೊನಾ

ಸಿದ್ದು ಆರ್.ಜಿ.ಹಳ್ಳಿ
Published 14 ಜೂನ್ 2021, 19:30 IST
Last Updated 14 ಜೂನ್ 2021, 19:30 IST
ಹಾವೇರಿ ನಗರದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿ –ಪ್ರಜಾವಾಣಿ ಚಿತ್ರ
ಹಾವೇರಿ ನಗರದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿ –ಪ್ರಜಾವಾಣಿ ಚಿತ್ರ   

ಹಾವೇರಿ: ಕೋವಿಡ್‌ ಪೀಡಿತರಾಗಿ ಆಸ್ಪತ್ರೆಗೆ ದಾಖಲಾದ ಅಪ್ಪ ಮರಳಿ ಮನೆಗೆ ಬರಲೇ ಇಲ್ಲ; ಕೈ ತುತ್ತು ತಿನ್ನಿಸಿ, ಜೋಗುಳ ಹಾಡಿ ನಿದ್ರೆ ಮಾಡಿಸುತ್ತಿದ್ದ ಅಮ್ಮನೇ ಚಿರನಿದ್ರೆಗೆ ಜಾರಿದ್ದಾಳೆ...

ಹೀಗೆ, ಕೋವಿಡ್‌ನಿಂದ ಅಪ್ಪ ಅಥವಾ ಅಮ್ಮನನ್ನು ಕಳೆದುಕೊಂಡು, ಜಿಲ್ಲೆಯಲ್ಲಿ 112 ಮಕ್ಕಳು ತಬ್ಬಲಿಯಾಗಿ ಕಂಬನಿ ಮಿಡಿಯುತ್ತಿದ್ದಾರೆ. ಬದುಕನ್ನು ಕರಾಳವಾಗಿಸಿದ ಕೊರೊನಾಕ್ಕೆ ಈ ಸಂತ್ರಸ್ತ ಕುಟುಂಬಗಳು ಹಿಡಿಶಾಪ ಹಾಕುತ್ತಿವೆ.

ಈ 112 ಮಕ್ಕಳ ಪೈಕಿ 50 ಬಾಲಕರು ಮತ್ತು 62 ಬಾಲಕಿಯರು ಪ್ರಸ್ತುತ ಏಕ ಪೋಷಕರ ಆರೈಕೆಯಲ್ಲಿದ್ದಾರೆ. ಇವರಲ್ಲಿ ಬಹುತೇಕ ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ನಾಲ್ಕು ಕುಟುಂಬಗಳಲ್ಲಿ ತಾಯಂದಿರು ಮತ್ತು ಉಳಿದ ಕುಟುಂಬಗಳಲ್ಲಿ ಮನೆಗೆ ಆಧಾರಸ್ತಂಭವಾಗಿದ್ದ ಅಪ್ಪಂದಿರೇ ಕೋವಿಡ್‌ಗೆ ಬಲಿಯಾಗಿದ್ದಾರೆ.

ADVERTISEMENT

‘ಬಾಲ ಸ್ವರಾಜ್‌’ನಲ್ಲಿ ನೋಂದಣಿ:

ಏಕಪೋಷಕರ ಆರೈಕೆಯಲ್ಲಿರುವ 112 ಮಕ್ಕಳ ಸಂಪೂರ್ಣ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಗ್ರಹಿಸಿದೆ. ಈ ಮಕ್ಕಳ ವಿವರವನ್ನುಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ‘ಬಾಲ ಸ್ವರಾಜ್‌’ ಪೋರ್ಟಲ್‌ನಲ್ಲಿ ದಾಖಲಿಸಿದ್ದಾರೆ.

‘ಮಕ್ಕಳ ಕಲ್ಯಾಣ ಸಮಿತಿಯು ಮಕ್ಕಳ ಮಾಹಿತಿ ಪರಿಶೀಲಿಸಿ, ನೀಡುವ ಸೂಕ್ತ ನಿರ್ದೇಶನದ ಮೇರೆಗೆ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಗೆ ರಾಜ್ಯ ಸರ್ಕಾರದ ‘ಪ್ರಾಯೋಜಕತ್ವ’ ಯೋಜನೆಯಡಿ ತಿಂಗಳಿಗೆ ₹1 ಸಾವಿರದಂತೆ ಮೂರು ವರ್ಷಗಳ ಕಾಲ ಒಟ್ಟು ₹ 36 ಸಾವಿರ ಆರ್ಥಿಕ ನೆರವು ನೀಡಲಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ಈ ಹಣ ಉಪಯೋಗವಾಗಲಿದೆ’ ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ.

‘ನಮ್ಮ ಜಿಲ್ಲೆಯಲ್ಲಿ ಕೋವಿಡ್‌ನಿಂದ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡು ಮಕ್ಕಳು ಅನಾಥರಾದ ಪ್ರಕರಣಗಳು ಇದುವರೆಗೂ ಕಂಡು ಬಂದಿಲ್ಲ. ತಂದೆ ಅಥವಾ ತಾಯಿ ಕಳೆದುಕೊಂಡು ತಬ್ಬಲಿಯಾದ ಮಕ್ಕಳು ಆರ್ಥಿಕ ನೆರವು ನಿರಾಕರಿಸಿದರೆ, ಹಾಸ್ಟೆಲ್‌ ಸೌಲಭ್ಯ ಕಲ್ಪಿಸುತ್ತೇವೆ. ಅನಾಥ ಮಕ್ಕಳಿಗೆ 18 ವರ್ಷದವರೆಗೆ ಬಾಲ ಮಂದಿರದಲ್ಲಿ ಉಚಿತ ಊಟ, ವಸತಿ, ಶಿಕ್ಷಣ, ಕೌಶಲ ತರಬೇತಿ ನೀಡಿ, ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುತ್ತೇವೆ’ ಎಂದು ತಿಳಿಸಿದರು.

ರಾಜ್ಯ–ಕೇಂದ್ರದ ನೆರವು:

ತಂದೆ-ತಾಯಿ ಇಬ್ಬರೂ ಕೋವಿಡ್‌ಗೆ ಬಲಿಯಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವಂತೆ ₹10 ಲಕ್ಷದ ಪರಿಹಾರ ಸಿಗಲಿದೆ. ಜತೆಗೆ, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ₹1 ಲಕ್ಷ ಪರಿಹಾರ ಘೋಷಿಸಿದೆ. ಏಕಪೋಷಕರ ಆರೈಕೆಯಲ್ಲಿರುವ ಮಕ್ಕಳ ಕುಟುಂಬಗಳು (ಬಿಪಿಎಲ್‌) ರಾಜ್ಯ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿವೆ.

ಏಕಪೋಷಕರ ಆರೈಕೆಯಲ್ಲಿರುವ ಮಕ್ಕಳ ವಿವರ

ತಾಲ್ಲೂಕು;ಮಕ್ಕಳ ಸಂಖ್ಯೆ

ಹಾನಗಲ್‌;51

ಹಾವೇರಿ;25

ಹಿರೇಕೆರೂರು;21

ಬ್ಯಾಡಗಿ;05

ರಾಣೆಬೆನ್ನೂರು;04

ಶಿಗ್ಗಾವಿ;03

ಸವಣೂರು;03

ಒಟ್ಟು;112

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.