ತಮ್ಮಣ್ಣ ಕಾಂಬಳೆ, ಗೂಳಪ್ಪ, ಶಿವಾನಂದ ಬಡಿಗೇರ್
ಹಾವೇರಿ: ಜಿಲ್ಲೆಯ ಹಾನಗಲ್ ತಹಶೀಲ್ದಾರ್ ಕಚೇರಿಯಲ್ಲಿ ₹12 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಡಿ ಶಿರಸ್ತೆದಾರ ಹಾಗೂ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು (ಎಸ್‌ಡಿಎ) ಹಾವೇರಿ ಜಿಲ್ಲಾ ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.
‘ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ನವೀನ ಬಸನಗೌಡ ಪಾಟೀಲ ಎಂಬುವವರು ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಪಹಣಿ ಪತ್ರ (ಆರ್.ಟಿ.ಸಿ.) ದುರಸ್ತಿ ಮಾಡಿಸಲು ₹ 12 ಸಾವಿರ ಲಂಚ ಪಡೆಯುತ್ತಿದ್ದಾಗಲೇ ಶಿರಸ್ತೆದಾರ ತಮ್ಮಣ್ಣ ಕಾಂಬಳೆ, ಎಸ್‌ಡಿಎ ಗೂಳಪ್ಪ ಮನಗೂಳಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಎಸ್‌ಡಿಎ ಶಿವಾನಂದ ಬಡಿಗೇರ್ ಎಂಬುವವರನ್ನು ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ಮಧುಸೂದನ್ ಅವರು ಪ್ರಜಾವಾಣಿಗೆ ತಿಳಿಸಿದರು.
‘ನವೀನ್ ಅವರ ಪರಿಚಯಸ್ಥರಾದ ಶಂಕ್ರಪ್ಪ ಗುಮಗುಂಡಿ ಅವರು ಕೆ.ಡಿ.ಟಿ ಪ್ರಕಾರ ಪಹಣಿ ಪತ್ರ ದುರಸ್ತಿಗಾಗಿ ಹಾನಗಲ್ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ದುರಸ್ತಿ ಮಾಡಲು ಆರೋಪಿಗಳು ₹ 12 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಹಾನಗಲ್ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಪುರಾವೆ ಸಮೇತ ಸೆರೆ ಹಿಡಿಯಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.