ADVERTISEMENT

ಅಸುನೀಗಿದ ಬಾಲಕ; ಅಂತ್ಯಕ್ರಿಯೆಗೂ ಪರದಾಟ

ಕೈ–ಕಾಲು ತೊಳೆಯುವಾಗ ಕೆರೆಗೆ ಬಿದ್ದು ಸಾವು * 16 ತಾಸಿನ ಬಳಿಕ ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 7:28 IST
Last Updated 7 ಸೆಪ್ಟೆಂಬರ್ 2019, 7:28 IST
ಸಾಹಿಲ್
ಸಾಹಿಲ್   

ಹಾವೇರಿ: ಹೊಲದಲ್ಲಿದ್ದ ಅಪ್ಪನಿಗೆ ಊಟ ತೆಗೆದುಕೊಂಡು ಹೋಗಿದ್ದ ಬಾಲಕಸಾಹಿಲ್ (12), ರಾಡಿಯಾಗಿದ್ದ ಕೈ–ಕಾಲು ತೊಳೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದ. ನಿಗೂಢವಾಗಿ ಕಣ್ಮರೆಯಾದ ಮಗನಿಗಾಗಿ ರಾತ್ರಿಯಿಡೀ ಹುಡುಕಾಡಿದ ಹೆತ್ತವರಿಗೆ, ಶುಕ್ರವಾರ ಬೆಳಿಗ್ಗೆ ಆತ ಶವವಾಗಿ ಸಿಕ್ಕಿದ್ದಾನೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಆ ಬಡದಂಪತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.‌

ಹಾವೇರಿ ತಾಲ್ಲೂಕು ಹೊಸಳ್ಳಿ ಗ್ರಾಮದ ದಾವುಲ್ ಸಾಬ್ ಹಾಗೂ ಶಹನಾಜ್ ದಂಪತಿಯ ಮಗನಾದ ಸಾಹಿಲ್, ಮನೆ ಸಮೀಪದ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ. ಮೊದಲು ದೇವಗಿರಿಯಲ್ಲಿದ್ದ ಈ ಕುಟುಂಬ, ಕೂಲಿ ಅರಸಿ ಇತ್ತೀಚೆಗೆ ಹೊಸಳ್ಳಿಗೆ ಬಂದಿತ್ತು. ಹೊಲಗಳಲ್ಲಿ ಕಳೆ ಕೀಳುತ್ತ ಗ್ರಾಮದಲ್ಲೇ ಗುಡಿಸಲು ಹಾಕಿಕೊಂಡು ನೆಲೆಸಿತ್ತು.

‘ಮಧ್ಯಾಹ್ನ 3 ಗಂಟೆಗೆ ಮಗ ಊಟ ತಂದುಕೊಟ್ಟ. ಹೊಲದಲ್ಲಿ ನಡೆದು ಬಂದಿದ್ದರಿಂದ ಆತನ ಕಾಲುಗಳು ಕೆಸರಾಗಿದ್ದವು. ಕೆರೆಯಲ್ಲಿ ತೊಳೆದುಕೊಂಡು ಹೋಗುವಂತೆ ನಾನೇ ಹೇಳಿದ್ದೆ. ಅಂತೆಯೇ ಅವನು ಕೆರೆ ಬಳಿ ಹೋದಾಗ ಈ ಅನಾಹುತ ಆಗಿದೆ. ಮಗನ ಸಾವಿಗೆ ನಾನೇ ಕಾರಣನಾದೆ’ ಎನ್ನುತ್ತ ದುಃಖತಪ್ತರಾದರು ದಾವುಲ್ ಸಾಬ್.

ADVERTISEMENT

‘ಕೂಲಿ ಮುಗಿಸಿ ರಾತ್ರಿ 8 ಗಂಟೆಗೆ ಮನೆಗೆ ಹೋದಾಗ ಮಗ ಇರಲಿಲ್ಲ. ಹೆಂಡತಿಗೆ ಕೇಳಿದರೆ, ‘ಮೋಹರಂ ಇರುವುದರಿಂದ ಗ್ರಾಮದಲ್ಲಿ ದೇವರು ಕೂಡಿಸುತ್ತಿದ್ದಾರೆ. ಅಲ್ಲಿಗೆ ಹೋಗಿರಬಹುದು’ ಎಂದಳು. ರಾತ್ರಿ 11 ಗಂಟೆಯಾದರೂ ಆತ ಬಾರದಿದ್ದಾಗ ಅನುಮಾನದಿಂದ ಎಲ್ಲ ಕಡೆ ಹುಡುಕಾಡಿದೆವು. ಎಲ್ಲೂ ಪತ್ತೆಯಾಗಲಿಲ್ಲ’ ಎಂದರು.

‘ಕೆರೆ ಹತ್ತಿರ ಹೋದಾಗಲೇ ಏನಾದರೂ ಅನಾಹುತ ಸಂಭವಿಸಿರಬಹುದೆಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕೆರೆ ಬಳಿ ಹೋದರೆ, ಅಲ್ಲಿ ಕಾಲು ಜಾರಿರುವ ಗುರುತಿತ್ತು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದೆ. ಸ್ಥಳೀಯ ಹುಡುಗರ ಮೂಲಕ ಕೆರೆಯನ್ನು ಶೋಧಿಸಿದಾಗ ಸುಮಾರು 10 ಅಡಿಯಷ್ಟು ಆಳದಲ್ಲಿ ಮಗನ ಶವ ಸಿಕ್ಕಿತು’ ಎಂದು ವಿವರಿಸುವಾಗ ಅವರ ಕಣ್ಣಾಲಿಗಳು ತುಂಬಿದ್ದವು.‌

ಅಂತ್ಯಕ್ರಿಯೆಗೂ ದುಡ್ಡಿರಲಿಲ್ಲ: ‘ದಾವುಲ್ ಅವರದ್ದು ಬಡಕುಟುಂಬ. ಮಗನ ಅಂತ್ಯಕ್ರಿಯೆ ಮಾಡುವುದಕ್ಕೂ ಅವರ ಬಳಿ ದುಡ್ಡಿರಲಿಲ್ಲ. ಗ್ರಾಮಸ್ಥರೆಲ್ಲ ಸೇರಿ ಅಂತಿಮ ಕಾರ್ಯಗಳನ್ನು ಮಾಡಿದ್ದೇವೆ. ಜನಪ್ರತಿನಿಧಿಗಳು ದಂಪತಿಯ ಜೀವನಕ್ಕೆ ನೆರವಾಗಬೇಕು. ಅವರ ಕಣ್ಣೊರೆಸುವ ಕೆಲಸ ಮಾಡಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಕಣ್ಣೀರು ಹಾಕಿದ ಶಿಕ್ಷಕಿಯರು

ಶುಕ್ರವಾರ ಬೆಳಿಗ್ಗೆ ಶಾಲೆಯ ಶಿಕ್ಷಕರು ಹಾಗೂ ಸಹಪಾಠಿಗಳು ಸಾಹಿಲ್‌ನ ಮನೆ ಬಳಿ ಬಂದಿದ್ದರು. ‘ಆತ ಪ್ರತಿಭಾವಂತ ವಿದ್ಯಾರ್ಥಿ. ಬೆಳಿಗ್ಗೆಯಷ್ಟೇ ಪ್ರತಿ ತರಗತಿಗೂ ಹೋಗಿ ಎಲ್ಲ ಶಿಕ್ಷಕರಿಗೂ ಶುಭಾಶಯ ಹೇಳಿದ್ದ. ಸಹಪಾಠಿಗಳೊಂದಿಗೆ ಸೇರಿ ಶಿಕ್ಷಕರ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಆಚರಿಸಿದ್ದ. ಈಗ ಅದೆಲ್ಲ ಮರೆಯಾಗಿ, ಕರಾಳ ನೆನಪು ಅಚ್ಚಳಿಯದೆ ಉಳಿಯುವಂತಾಯಿತು’ ಎನ್ನುತ್ತ ಶಿಕ್ಷಕರಿಯುರೂ ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.