ADVERTISEMENT

₹178 ಕೋಟಿ ಬೆಳೆ ವಿಮೆ ಮಂಜೂರು: ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 16:34 IST
Last Updated 29 ಸೆಪ್ಟೆಂಬರ್ 2020, 16:34 IST
ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ 
ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ    

ಹಾವೇರಿ: ‘ಜಿಲ್ಲೆಯ 175 ಗ್ರಾಮ ಪಂಚಾಯತಿಗಳ 75,704 ರೈತರಿಗೆ ₹178.88 ಕೋಟಿ ಬೆಳೆ ವಿಮೆ ಮಂಜೂರಾಗಿದೆ. ಇದು ರಾಜ್ಯದಲ್ಲಿ ಅತೀ ಹೆಚ್ಚು ಬೆಳೆ ವಿಮೆ ಮೊತ್ತ ಜಿಲ್ಲೆಗೆ ಬಿಡುಗಡೆಯಾಗಿದೆ. ಪ್ರವಾಹದಿಂದ ಬೆಳೆ ನಷ್ಟ ಸಂಕಷ್ಟದಲ್ಲಿರುವ ರೈತರಿಗೆ ಸಮಯೋಚಿತ ಸಹಾಯ ಸಿಕ್ಕಂತಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೆಬೆನ್ನೂರು ಮತ್ತು ಶಿಗ್ಗಾವಿ ತಾಲ್ಲೂಕುಗಳಲ್ಲಿ ಪ್ರಮುಖವಾಗಿ ಭತ್ತ, ಮೆಕ್ಕೆಜೋಳ, ಹತ್ತಿ ಮತ್ತು ಶೇಂಗಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳಲ್ಲಿ ಬೆಳೆ ವಿಮೆಗೆ 1,13,857 ರೈತರು ನೋಂದಾಯಿಸಿದ್ದು, ಈ ಪೈಕಿ 48 ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ ಬೆಳೆ ವಿಮೆ ಮಂಜೂರಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಮಧ್ಯಂತರ ಬೆಳೆವಿಮೆ ಪರಿಹಾರವಾಗಿ ₹ 48.74 ಕೋಟಿ ನೀಡಲಾಗಿದೆ. ಉಳಿದ ₹130.14 ಕೋಟಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಕೃಷಿ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

‌ಬಾಕಿ ಇರುವ 45 ಗ್ರಾಮ ಪಂಚಾಯಿತಿಗಳ 38,153 ರೈತರಿಗೆ ವಿಮೆ ಬಿಡುಗಡೆ ರೈತರಿಂದ ಒತ್ತಡವಿದ್ದು, ಈ ಹಿಂದೆ ಮಾಡಿರುವ ಬೆಳೆ ಕಟಾವು ಪ್ರಯೋಗಗಳ ಫಲಿತಾಂಶದ ಬಗ್ಗೆ ತೀವ್ರ ಅಸಮಾಧಾನ ಇರುವ ಹಿನ್ನೆಲೆಯಲ್ಲಿ ಸದರಿ ಗ್ರಾಮ ಪಂಚಾಯತಿಗಳ ಬೆಳೆಗಳ ಇಳುವರಿಯನ್ನು ಮತ್ತೊಮ್ಮೆ ಪರಿಶೀಲಿಸಲು ಸೂಚನೆ ನೀಡಲಾಗಿದೆ.

ಪ್ರವಾಹದಿಂದ ಬೆಳೆ ನಷ್ಟ ಆಗಿರುವ ಬಗ್ಗೆ ಸಂಪೂರ್ಣವಾಗಿ ಸರ್ವೆ ಮಾಡಿ ವಿವಿಧ ಬೆಳೆಗಳ ನಷ್ಟದ ವಿವರಗಳನ್ನು ರಾಜ್ಯ ಸರ್ಕಾರಕ್ಕೆ ಕೂಡಲೇ ಕಳುಹಿಸಬೇಕೆಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.