ADVERTISEMENT

5 ವರ್ಷಗಳಲ್ಲಿ 48 ಸಾಕುಪ್ರಾಣಿ ಹತ್ಯೆ

ಮಾನವ– ವನ್ಯಜೀವಿ ಸಂಘರ್ಷ: ಅರಣ್ಯ ಇಲಾಖೆಯಿಂದ ₹1.11 ಕೋಟಿ ಪರಿಹಾರ ಪಾವತಿ

ಸಿದ್ದು ಆರ್.ಜಿ.ಹಳ್ಳಿ
Published 29 ಏಪ್ರಿಲ್ 2021, 5:06 IST
Last Updated 29 ಏಪ್ರಿಲ್ 2021, 5:06 IST
ರಟ್ಟೀಹಳ್ಳಿ ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಈಚೆಗೆ ರೈತರು ಆತ್ಮರಕ್ಷಣೆಗಾಗಿ ಚಿರತೆಯನ್ನು ಹತ್ಯೆ ಮಾಡಿದ್ದರು (ಸಂಗ್ರಹ ಚಿತ್ರ)
ರಟ್ಟೀಹಳ್ಳಿ ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಈಚೆಗೆ ರೈತರು ಆತ್ಮರಕ್ಷಣೆಗಾಗಿ ಚಿರತೆಯನ್ನು ಹತ್ಯೆ ಮಾಡಿದ್ದರು (ಸಂಗ್ರಹ ಚಿತ್ರ)   

ಹಾವೇರಿ: ಮಾನವ–ವನ್ಯಜೀವಿ ಸಂಘರ್ಷಕ್ಕೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 48 ಸಾಕುಪ್ರಾಣಿಗಳು ಹತ್ಯೆಯಾಗಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಬರೋಬ್ಬರಿ 2,225 ಬೆಳೆ ಹಾನಿ ಪ್ರಕರಣಗಳೂ ದಾಖಲಾಗಿವೆ.

ಕರ್ನಾಟಕ ಅರಣ್ಯ ಇಲಾಖೆಯ ಹಾವೇರಿ ವಿಭಾಗದಲ್ಲಿ ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹಿರೇಕೆರೂರು, ಹಾನಗಲ್‌, ದುಂಡಶಿ ಹಾಗೂ ವನ್ಯಜೀವಿ ರಾಣೆಬೆನ್ನೂರು ಒಟ್ಟು ಏಳು ವಲಯಗಳಿವೆ. ಮಾನವ–ವನ್ಯಜೀವಿ ಸಂಘರ್ಷವನ್ನು ತಪ್ಪಿಸಲು ಅರಣ್ಯ ಇಲಾಖೆ ವಿವಿಧ ಕ್ರಮಗಳನ್ನು ಕೈಗೊಂಡರೂ ಪ್ರತಿ ವರ್ಷ ದಾಖಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ.

2016–17ರಿಂದ 2020–21ನೇ ಸಾಲಿನವರೆಗೆ ಜಿಲ್ಲೆಯಲ್ಲಿ ಮಾನವ–ವನ್ಯಜೀವಿ ಸಂಘರ್ಷಕ್ಕೆ ಸಂಬಂಧಿಸಿ ಒಟ್ಟು 3,763 ಪ್ರಕರಣಗಳು ದಾಖಲಾಗಿದ್ದು, ಅರಣ್ಯ ಇಲಾಖೆಯಿಂದ ₹1.11 ಕೋಟಿ ಪರಿಹಾರ ನೀಡಲಾಗಿದೆ.

ADVERTISEMENT

ಚಿರತೆ ಕೊಂದಿದ್ದ ರೈತರು: ರಟ್ಟೀಹಳ್ಳಿ ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಈಚೆಗೆ ರೈತರಿಬ್ಬರು ರಾತ್ರಿ ವೇಳೆ ಹೊಲದಲ್ಲಿ ನೀರು ಹಾಯಿಸುವ ಸಂದರ್ಭ ದಾಳಿ ಮಾಡಿದ ಚಿರತೆಯನ್ನು ಆತ್ಮರಕ್ಷಣೆಗಾಗಿ ಹತ್ಯೆ ಮಾಡಿದ್ದರು.ಹಾನಗಲ್‌ ತಾಲ್ಲೂಕಿನ ಶಿರಗೋಡ ಗ್ರಾಮದ ಮಾವಿನತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಯಲ್ಲಿ ಸಿಲುಕಿಕೊಂಡು ಪೇಚಾಡುತ್ತಿದ್ದ ಕರಡಿಯನ್ನು ಅರಣ್ಯ ಇಲಾಖೆ ಈಚೆಗೆ ರಕ್ಷಣೆ ಮಾಡಿತ್ತು.ಬ್ಯಾಡಗಿ ತಾಲ್ಲೂಕು ಅರಳಿಕಟ್ಟಿ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯು ಮಾರ್ಚ್‌ ತಿಂಗಳಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿತ್ತು.

ಪರಿಹಾರ ಹೆಚ್ಚಳ: ವನ್ಯಪ್ರಾಣಿಗಳ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ನೀಡುವ ಪರಿಹಾರವನ್ನು ಹೆಚ್ಚಳ ಮಾಡಬೇಕು ಎಂಬುದು ರೈತ ಸಂಘದ ಮುಖಂಡರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಈಚೆಗೆ ಪರಿಹಾರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಸಾಕುಪ್ರಾಣಿಗಳಾದ ಹಸು, ಎತ್ತು, ಎಮ್ಮೆ, ಕೋಣ ಮೃತಪಟ್ಟರೆ, ಅವುಗಳ ಮಾಲೀಕರಿಗೆ ನೀಡುತ್ತಿರುವ ಪರಿಹಾರಧನವನ್ನು ₹10 ಸಾವಿರದಿಂದ ಗರಿಷ್ಠ ₹75 ಸಾವಿರಕ್ಕೆ ಹೆಚ್ಚಿಸಲಾಗಿದೆ. ಘಟನೆ ನಡೆದ ತಕ್ಷಣವೇ ₹20 ಸಾವಿರ ಪರಿಹಾರವನ್ನು ಪಾವತಿಸಲು ಸೂಚಿಸಲಾಗಿದೆ. ಕುರಿ, ಮೇಕೆ, ಆಡು ಮೃತಪಟ್ಟರೆ ₹5 ಸಾವಿರದಿಂದ ₹10 ಸಾವಿರಕ್ಕೆ ಪರಿಹಾರಧನವನ್ನು ಸರ್ಕಾರ ಹೆಚ್ಚಳ ಮಾಡಿದೆ.

ಚಿರತೆ, ಕೃಷ್ಣಮೃಗಗಳ ಹಾವಳಿ: ಹಿರೇಕೆರೂರು, ಹಾನಗಲ್‌, ದುಂಡಶಿ ಅರಣ್ಯ ವಲಯದಲ್ಲಿ ಚಿರತೆಗಳ ಕಾಟ, ಹಾವೇರಿ ಮತ್ತು ಬ್ಯಾಡಗಿ ವಲಯಗಳಲ್ಲಿ ಕೃಷ್ಣಮೃಗಗಳಿಂದ ಬೆಳೆ ಹಾನಿ ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದಾರೆ. ಕೃಷ್ಣಮೃಗಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ‘ತಂತಿಬೇಲಿ’ ನಿರ್ಮಿಸಿಕೊಳ್ಳುವ ಯೋಜನೆಯನ್ನು ಅರಣ್ಯ ಇಲಾಖೆ ಜಾರಿಗೆ ತಂದಿದೆ.

‘ಕೆಲವೇ ರೈತರಿಗೆ ಉಪಯೋಗ’

‘ತಂತಿಬೇಲಿ ಯೋಜನೆಯಡಿ ಶೇ 90ರಷ್ಟು ಸಹಾಯಧನ ಅರಣ್ಯ ಇಲಾಖೆ ಹಾಗೂ ಶೇ 10ರಷ್ಟು ವೆಚ್ಚ ರೈತರು ಭರಿಸಬೇಕು. ಆದರೆ, ವರ್ಷಕ್ಕೆ ಒಟ್ಟು 5 ಕಿ.ಮೀ. ತಂತಿಬೇಲಿ ನಿರ್ಮಿಸಲು ಇಲಾಖೆಯಲ್ಲಿ ಅವಕಾಶವಿದೆ. ಇದರಿಂದ ಮೂರ್ನಾಲ್ಕು ರೈತರಿಗೆ ಮಾತ್ರ ಉಪಯೋಗವಾಗುತ್ತಿದೆ. ಕೃಷ್ಣಮೃಗಗಳಿಂದ ಬಾಧಿತರಾದ ಎಲ್ಲ ರೈತರು ತಂತಿಬೇಲಿ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿ, ನಿರ್ಬಂಧಗಳನ್ನು ತೆರವು ಮಾಡಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.