ADVERTISEMENT

ಪುರಸಭೆ ಮುಖ್ಯಾಧಿಕಾರಿ ಸೇರಿ 6 ನೌಕರರ ಅಮಾನತು

ನೆರೆ ಪರಿಹಾರ ನೀಡಲು ಅನರ್ಹರಿಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 12:13 IST
Last Updated 6 ಡಿಸೆಂಬರ್ 2021, 12:13 IST

ಹಾವೇರಿ: ಪ್ರಕೃತಿ ವಿಕೋಪದ ಪರಿಹಾರವನ್ನು ಅನರ್ಹ ಫಲಾನುಭವಿಗಳಿಗೆ ನೀಡಲು ಶಿಫಾರಸು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯತನ ಮತ್ತು ಕರ್ತವ್ಯಲೋಪ ಎಸಗಿದ ಪುರಸಭೆ ಮುಖ್ಯಾಧಿಕಾರಿ ಹಾಗೂ ಐವರು ಸರ್ಕಾರಿ ನೌಕರರನ್ನು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸವಣೂರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಾ ಡಿ.ಕಟ್ಟಿಮನಿ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಎಚ್‌.ಡಿ.ಬಂಡಿವಡ್ಡರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಎಂಜಿನಿಯರ್‌ ಹನುಮಂತಪ್ಪ ಮಾದರ, ಶಿರಬಡಗಿ ಗ್ರಾಮ ಪಂಚಾಯಿತಿ ಪಿಡಿಒ ಶೈಲಾ ಮಂಟೂರ,ಗ್ರಾಮ ಲೆಕ್ಕಾಧಿಕಾರಿಗಳಾದ ಆರ್‌.ಬಿ.ಮಾಚಕನೂರ ಮತ್ತು ಕುಮಾರ ಬಾಲೇಹೊಸೂರ ಅಮಾನತುಗೊಂಡವರು.

‘ಸಿಎಂ ತವರು ಕ್ಷೇತ್ರ’ವಾದ ಶಿಗ್ಗಾವಿ–ಸವಣೂರಿನಲ್ಲಿ ಮಳೆಯಿಂದ ಅತಿ ಹೆಚ್ಚು ಮನೆಗಳು ಹಾನಿಯಾಗಿರುವ ಬಗ್ಗೆ ಜಂಟಿ ಸ್ಥಳ ತನಿಖಾ ತಂಡದವರು ಉಪವಿಭಾಗಾಧಿಕಾರಿ ಕಚೇರಿಗೆ ದಾಖಲೆ ಸಲ್ಲಿಸಿದ್ದರು. ಮೊದಲನೇ ಹಂತದ ಪರಿಹಾರಧನ ಪಾವತಿಸುವ ಹಾಗೂ ಮೊದಲ ಹಂತದ ಆಡಿಟ್‌ ಮಾಡುವ ಸಂದರ್ಭದಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ನ್ಯೂನತೆ ಮತ್ತು ಅಕ್ರಮಗಳು ಬೆಳಕಿಗೆ ಬಂದಿವೆ.

ADVERTISEMENT

ಮನೆಹಾನಿ ಪ್ರಕರಣಗಳಲ್ಲಿ ಒಂದೇ ನಿವೇಶನದಲ್ಲಿ ಎರಡು ಜಿಪಿಎಸ್‌ ಫೋಟೊಗಳನ್ನು ಲಗತ್ತಿಸಿ, ಪ್ರತ್ಯೇಕ ಪ್ರಕರಣಗಳು ಎಂದು ಪರಿಗಣಿಸಿರುವುದು ಹಾಗೂ ನಕಲಿ ದಾಖಲೆ ಸೃಷ್ಟಿಸಿರುವುದು ಮುಂತಾದ ಲೋಪಗಳು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕ್ರಮ ಜರುಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.