ADVERTISEMENT

ಹಾವೇರಿ | ಏಳು ದಿನದಲ್ಲಿ ಶೇ 71ರಷ್ಟು ಹೆಚ್ಚುವರಿ ಮಳೆ

3.3 ಸೆಂ.ಮೀ ವಾಡಿಕೆ ಮಳೆ, 5.7 ಸೆಂ.ಮೀ ಸುರಿದ ಮಳೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:17 IST
Last Updated 28 ಜುಲೈ 2024, 15:17 IST
ಗುತ್ತಲ ಬಳಿಯ ಬೆಳವಗಿ ಗ್ರಾಮದ ಸೇತುವೆ ಮೇಲೆ ಹರಿಯುತ್ತಿರುವ ನೀರಿನಲ್ಲಿಯೇ ಜನರು ಓಡಾಡುತ್ತಿದ್ದಾರೆ
ಗುತ್ತಲ ಬಳಿಯ ಬೆಳವಗಿ ಗ್ರಾಮದ ಸೇತುವೆ ಮೇಲೆ ಹರಿಯುತ್ತಿರುವ ನೀರಿನಲ್ಲಿಯೇ ಜನರು ಓಡಾಡುತ್ತಿದ್ದಾರೆ   

ಹಾವೇರಿ: ಜಿಲ್ಲೆಯಲ್ಲಿ ಜುಲೈ 21ರಿಂದ 28ರ ವರೆಗೆ ವಾಡಿಕೆಗಿಂತ ಶೇ 71ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಪ್ರತಿ ತಾಲ್ಲೂಕಿನಲ್ಲೂ ಉತ್ತಮ ಮಳೆ ಸುರಿದಿದೆ.

‘ಏಳು ದಿನಗಳ ಅವಧಿಯಲ್ಲಿ 3.3 ಸೆಂ.ಮೀ ಮಳೆ ನಿರೀಕ್ಷಿಸಲಾಗಿತ್ತು. ಆದರೆ, 5.7 ಸೆಂ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ ಇದು ಉತ್ತಮ ಮಳೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಜನವರಿ 1ರಿಂದ ಜುಲೈ 28ರ ವರೆಗೆ 41.0 ಸೆಂ.ಮೀ (ವಾಡಿಕೆ 38.9 ಸೆಂ.ಮೀ) ಮಳೆ ಆಗಿದೆ. ಜೂನ್ 1ರಿಂದ ಜುಲೈ 28ರ ವರೆಗೆ 27.7 ಸೆಂ.ಮೀ (ವಾಡಿಕೆ 26.7 ಸೆಂ.ಮೀ) ಮಳೆ ಸುರಿದಿದೆ’ ಎಂದು ಹೇಳಿದೆ.

ADVERTISEMENT

‘ಏಳು ದಿನದಲ್ಲಿ ಬ್ಯಾಡಗಿ ತಾಲ್ಲೂಕಿನಲ್ಲಿ 6.16 ಸೆಂ.ಮೀ., ಹಾನಗಲ್‌ನಲ್ಲಿ 9.06 ಸೆಂ.ಮೀ., ಹಾವೇರಿಯಲ್ಲಿ 4.35 ಸೆಂ.ಮೀ., ಹಿರೇಕೆರೂರಿನಲ್ಲಿ 6.73 ಸೆಂ.ಮೀ., ರಾಣೆಬೆನ್ನೂರಿನಲ್ಲಿ 38.1 ಸೆಂ.ಮೀ., ಸವಣೂರಿನಲ್ಲಿ 4.06 ಸೆಂ.ಮೀ., 0.65 ಸೆಂ.ಮೀ. ಹಾಗೂ ರಟ್ಟೀಹಳ್ಳಿಯಲ್ಲಿ 5.87 ಸೆಂ.ಮೀ. ಮಳೆ ಆಗಿದೆ’ ಎಂದು ಇಲಾಖೆ ತಿಳಿಸಿದೆ.

1,251 ಮನೆಗಳಿಗೆ ಹಾನಿ: ‘ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ 1,251 ಮನೆಗಳಿಗೆ ಹಾನಿಯಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಫೋಟೊ ಸಮೇತ ಮಾಹಿತಿ ದಾಖಲಿಸಿಕೊಂಡಿದ್ದಾರೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಹೇಳಿದರು.

‘5 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 11 ಮನೆಗಳಿಗೆ ತೀವ್ರ ಹಾಗೂ 1,235 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 9 ದನದ ಕೊಟ್ಟಿಗೆಗಳಿಗೆ ಹಾನಿ ಆಗಿದೆ’ ಎಂದರು.

‘ವರದಾ ಹಾಗೂ ತುಂಗಭದ್ರಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಜಮೀನಿಗೆ ನೀರು ನುಗ್ಗಿದೆ. 3,522 ಹೆಕ್ಟೇರ್ ಜಮೀನಿನಲ್ಲಿದ್ದ ಬೆಳೆ ಜಲಾವೃತಗೊಂಡಿದೆ’ ಎಂದು ತಿಳಿಸಿದರು.

ರಟ್ಟೀಹಳ್ಳಿ ತಾಲ್ಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಬಳಿ ರಾಷ್ಟ್ಟೀಯ ಹೆದ್ದಾರಿಯಲ್ಲಿ ಕುಮದ್ವತಿ ನದಿಗೆ ನೂತನವಾಗಿ ನಿರ್ಮಿಸಿರುವ ಬೃಹತ ಸೇತುವೆ

ವರದಾ–ತುಂಗಭದ್ರಾ ಸಂಗಮ:

ಸೇತುವೆ ಮೇಲೆ ನೀರು ಗುತ್ತಲ: ಹಾವೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಒಡಲಿನಲ್ಲಿ ಹರಿಯುತ್ತಿರುವ ವರದಾ ಹಾಗೂ ತುಂಗಾಭದ್ರಾ ನದಿಯಲ್ಲಿ ಕ್ರಮೇಣ ನೀರು ಹೆಚ್ಚಳವಾಗುತ್ತಿದೆ. ಗುತ್ತಲ ಸಮೀಪದ ಬೆಳವಗಿ ಗ್ರಾಮದ ಬಳಿ ಒಂದು ಕಿ.ಮೀ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಹರಿದು ಎರಡೂ ನದಿಗಳು ಪರಸ್ಪರ ಸಂಗಮಗೊಂಡಿವೆ. ಇದರ ಪರಿಣಾಮ ಬೆಳವಗಿ ಗ್ರಾಮದ ಬಳಿಯ ವರದಾ ನದಿಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತುಂಗಭದ್ರಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ತುಂಗಭದ್ರಾ ನದಿಯಿಂದ ಕೂಗಳತೆ ದೂರದಲ್ಲಿರುವ ಬೆಳವಗಿ ಗ್ರಾಮದ ಸೇತುವೆ ವರದಾ ನದಿ ಮತ್ತು ತುಂಗಭದ್ರಾ ನದಿ ನೀರಿನಿಂದಾಗಿ ಜಲಾವೃತಗೊಂಡಿದೆ. ಸೇತುವೆ ಮೇಲೆ ನೀರು ಇರುವುದರಿಂದ ಆ ಮಾರ್ಗದ ಮೂಲಕ ಸಂಚರಿಸುವ ಎಲ್ಲ ವಾಹನಗಳ ಸಂಪರ್ಕ ಕಡಿತಗೊಂಡಿದೆ. ಹಾವೇರಿ ತಾಲ್ಲೂಕಿನ ಗ್ರಾಮಗಳಾದ ನೀರಲಗಿ ಗೋಯಿಲಗುಂದಿ ಮೇವುಂಡಿ ತೆರೆದಹಳ್ಳಿ ಮತ್ತು ಶಿರಹಟ್ಟಿ ತಾಲ್ಲೂಕಿನ ಎಲ್ಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದೇ ನೀರಿನಲ್ಲಿಯೇ ಕೆಲವರು ಓಡಾಡುತ್ತಿದ್ದಾರೆ. ಏಕಾಏಕಿ ಹೆಚ್ಚು ನೀರು ಹರಿದರೆ ಜೀವಕ್ಕೆ ಅಪಾಯ ಉಂಟಾಗುವ ಆತಂಕವೂ ಇದೆ. ಬೆಳವಗಿ ಗ್ರಾಮದ ಸಾವಿರಾರು ಎಕರೆ ಪ್ರದೇಶದಲ್ಲಿದ್ದ ಬೆಳೆಯೂ ಜಲಾವೃತಗೊಂಡಿದೆ.

ತಿಪ್ಪಾಯಿಕೊಪ್ಪ ಸೇತುವೆಯಿಂದ ಜನರಿಗೆ ಅನುಕೂಲ: ಬಿ.ಸಿ.ಪಾಟೀಲ

ರಟ್ಟೀಹಳ್ಳಿ: ತಾಲ್ಲೂಕಿನ ಮಾಸೂರು-ತಿಪ್ಪಾಯಿಕೊಪ್ಪ ಗ್ರಾಮದ ಹತ್ತಿರ ಕುಮದ್ವತಿ ನದಿಗೆ ಅಡ್ಡಲಾಗಿ ನೂತನವಾಗಿ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ₹25 ಕೋಟಿ ವೆಚ್ಚದಲ್ಲಿ ಬೃಹತ್ ಸೇತುವೆ ಮತ್ತು ರಸ್ತೆ ಕಾಮಗಾರಿ ಮುಕ್ತಾಯವಾಗಿದ್ದು ಸಂಚಾರಕ್ಕೆ ಅನುಕೂಲವಾಗಿದೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ತಾಲ್ಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಬಳಿಯ ನೂತನ ಸೇತುವೆಯನ್ನು ಇತ್ತೀಚಿಗೆ ವೀಕ್ಷಿಸಿ ಮಾತನಾಡಿದರು. ಪ್ರತಿ ವರ್ಷ ಮಳೆಗಾಲದಲ್ಲಿ ಈ ಸೇತುವೆ ಮುಳಗಡೆಯಾಗಿ ಸಾರ್ವಜನಿಕ ಸಂಚಾರ ಸ್ಥಗಿತಗೊಳ್ಳುತ್ತಿತ್ತು. ಈ ಬಗ್ಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಚರ್ಚಿಸಿ ಸೇತುವೆ ಮತ್ತು ರಸ್ತೆ ನಿರ್ಮಿಸಲಾಗಿದೆ. ಪ್ರಸ್ತುತ ಕುಮದ್ವತಿ ನದಿಯಲ್ಲಿ ಎಷ್ಟೇ ಪ್ರವಾಹ ಇದ್ದರೂ ಸೇತುವೆಯ ಮೇಲೆ ವಾಹನ ಸಂಚಾರ ಸುಗಮವಾಗಲಿದೆ ಎಂದರು. ಮುಖಂಡರಾದ ಲಿಂಗನಗೌಡ ಹಳ್ಳಪ್ಪಗೌಡ್ರ ಪ್ರಶಾಂತ ಹಳ್ಳಪ್ಪಗೌಡ್ರ ರಾಮು ತೋಳ್ನವರ ನಾಗರಾಜ ಹಿರೇಮಠ ವಾಗೀಶ ಹಿರೇಮಠ ಹನುಮಂತಪ್ಪ ಗಿರಿಯಣ್ಣನವರ ಗಿರೀಶ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.