ಹಾವೇರಿ: ಕ್ಷೀರಭಾಗ್ಯದ ಹಾಲು ಸೇವಿಸಿ ವಿದ್ಯಾರ್ಥಿಯೊಬ್ಬ ವಾಂತಿ ಮಾಡಿಕೊಂಡಿದ್ದಕ್ಕೆ ಗಾಬರಿಗೊಂಡ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿದ ಘಟನೆ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂದಿನಂತೆ ಬುಧವಾರ ಬೆಳಿಗ್ಗೆ ಮಕ್ಕಳಿಗೆ ಕುಡಿಯಲು ಕ್ಷೀರಭಾಗ್ಯದ ಹಾಲು ನೀಡಿದ್ದಾರೆ. ಹಾಲು ಕುಡಿದ ಕೆಲವೇ ಕ್ಷಣಗಳಲ್ಲಿ ವಿದ್ಯಾರ್ಥಿಯೊಬ್ಬ ವಾಂತಿ ಮಾಡಿಕೊಂಡಿದ್ದಾನೆ. ಇದನ್ನು ನೋಡಿದ ಕೆಲ ವಿದ್ಯಾರ್ಥಿಗಳು ಸಹ ನಮಗೂ ವಾಂತಿ ಬಂದಂತಾಗುತ್ತಿದೆ. ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಆಗ ಶಿಕ್ಷಕರು ಸಿಕ್ಕ ಸಿಕ್ಕ ವಾಹನದಲ್ಲಿ ಮಕ್ಕಳನ್ನು ಹತ್ತಿಸಿಕೊಂಡು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಪರೀಕ್ಷಿಸಿ ಚುಚ್ಚುಮದ್ದು ನೀಡಿದ ನೀಡಿದ ವೈದ್ಯರು, ಮಕ್ಕಳಿಗೆ ಯಾವುದೇ ತೊಂದರೆಯಿಲ್ಲ. ವಾಪಸ್ಸು ಊರಿಗೆ ಕಳುಹಿಸಿದರು.
ವಿದ್ಯಾರ್ಥಿಗೆ ಹುಷಾರು ಇರಲಿಲ್ಲ: ಹಾಲು ಕುಡಿದು ವಾಂತಿ ಮಾಡಿಕೊಂಡ ವಿದ್ಯಾರ್ಥಿ ಜ್ವರದಿಂದ ಬಳಲುತ್ತಿದ್ದನು. ಆರೋಗ್ಯ ಸರಿ ಇಲ್ಲದಾಗ ಏನನ್ನಾದರೂ ಸೇವಿಸಿದರೆ ಕೆಲವರಿಗೆ ವಾಂತಿ ಯಾಗುತ್ತದೆ. ಅದರಂತೆ ಹಾಲು ಸೇವಿಸಿದ ತಕ್ಷಣ ಆ ವಿದ್ಯಾರ್ಥಿಗೆ ವಾಂತಿ ಆಗಿದೆ. ಉಳಿದ ವಿದ್ಯಾರ್ಥಿಗಳಲ್ಲಿ ಅಂತಹ ಯಾವುದೇ ಲಕ್ಷಣಗಳಿಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.
ಶಿಕ್ಷಕಿ ತರಾಟೆಗೆ: ಶಾಲೆಯಲ್ಲಿ ಹಾಲು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥ ರಾಗಿದ್ದಾರೆ ಎಂದು ಸುದ್ದಿ ತಿಳಿದಾಕ್ಷಣ ಗ್ರಾಮಸ್ಥರು ಶಾಲೆಗೆ ದೌಡಾಯಿಸಿ ದ್ದಾರೆ. ತಮ್ಮ ಸಹಪಾಠಿ ವಾಂತಿ ಮಾಡಿರುವುದನ್ನು ನೋಡಿರುವ ವಿದ್ಯಾರ್ಥಿಗಳು ತಮ್ಮ ಪಾಲಕರ ಎದುರು ನಮಗೂ ವಾಂತಿ ಬಂದಂತಾಗುತ್ತಿದೆ ಎಂದು ಹೇಳಿದ್ದಾರೆ.
ಇದರಿಂದ ಆಕ್ರೋಶಗೊಂಡ ಪಾಲಕರು ಮುಖ್ಯ ಶಿಕ್ಷಕಿ ವಿ.ಎನ್.ಬಡಿಗೇರ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡಿದ್ದಾರಲ್ಲದೇ, ನಮ್ಮ ಮಕ್ಕಳಿಗೆ ಏನಾದರೂ ಆದರೆ, ನಾವು ಸುಮ್ಮನೆ ಬಿಡುವುದಿಲ್ಲ ಎಂಬ ಬೆದರಿಕೆಯನ್ನು ಸಹ ಹಾಕಿದ್ದಾರೆ.
ಬಿಕ್ಕಿ ಬಿಕ್ಕಿ ಅತ್ತ ಶಿಕ್ಷಕಿ: ವಿದ್ಯಾರ್ಥಿಗಳ ಪಾಲಕರು ಆಡಿದ ಮಾತಿನಿಂದ ಹಾಗೂ ನನ್ನ ಅವಧಿಯಲ್ಲಿ ಇಂತಹದೊಂದು ಘಟನೆ ನಡೆಯಿತಲ್ಲ ಎಂದು ಬೇಸರಿಸಿಕೊಂಡು ಮುಖ್ಯ ಶಿಕ್ಷಕಿ ಜಿಲ್ಲಾ ಆಸ್ಪತ್ರೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತರು.
ಪ್ರತಿದಿನದಂತೆ ಬಿಸಿನೀರಿನಲ್ಲಿ ಹಾಲಿನ ಪುಡಿ ಕಲಿಸಿ ಮಕ್ಕಳಿಗೆ ಹಾಲು ನೀಡಲಾಗಿದೆ. ಅದು ಅಲ್ಲದೇ, ಹಾಲು ಪಾಕೇಟ್ ಮೇಲೆ ಜೂನ್‌ವರೆಗೆನ ಬಳಸಲು ಯೋಗ್ಯ ಎಂದು ಬರೆಯ ಲಾಗಿದೆ. ಹೀಗಾಗಿ ನಮ್ಮಿಂದ ಯಾವುದೇ ತಪ್ಪು ಆಗಿಲ್ಲ. ಆದರೂ, ಎಲ್ಲರಿಂದ ನಿಂದನೆಗೆ ಒಳಗಾಗ ಬೇಕಾಗಿದೆ ಎಂದು ಮುಖ್ಯ ಶಿಕ್ಷಕಿ ವಿ.ಎನ್.ಬಡಿಗೇರ ತಿಳಿಸಿದರು.
ಸ್ಥಳಕ್ಕೆ ಬಿಇಒ ಭೇಟಿ: ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಸುದ್ದಿ ತಿಳಿದ ತಕ್ಷಣವೇ ತಾಲ್ಲೂಕು ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹಾಗೂ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಝೆಡ್. ಎಂ.ಖಾಜಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ದರಲ್ಲದೇ, ಅಳುತ್ತಾ ನಿಂತಿದ್ದ ಮುಖ್ಯ ಶಿಕ್ಷಕಿಗೆ ಧೈರ್ಯದ ಮಾತುಗಳನ್ನು ಹೇಳಿ ಸಮಾಧಾನ ಪಡಿಸಿದರು.
ನಂತರ ವೈದ್ಯರ ಬಳಿ ತೆರಳಿ ಮಕ್ಕಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು, ಯಾವುದೇ ಗಾಬರಿ, ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ವಿದ್ಯಾರ್ಥಿಗಳು ಆರೋಗ್ಯ ವಾಗಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ್ದ ಗ್ರಾಮಸ್ಥರಿಗೆ ತಿಳಿಸಿ, ಮಕ್ಕಳನ್ನು ಆಂಬುಲನ್ಸ್ ಮೂಲಕ ವಾಪಸ್ಸು ಊರಿಗೆ ಕಳುಹಿಸುವ ಕೆಲಸ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.