ಪ್ರವೀಣ ಬೆಟದೂರು
ತಡಸ (ಹಾವೇರಿ ಜಿಲ್ಲೆ): ‘ಪ್ರೀತಿಸಲು ಯುವತಿ ಒಪ್ಪಲಿಲ್ಲವೆಂಬ ಕಾರಣಕ್ಕೆ ನೊಂದಿದ್ದ’ ಎನ್ನಲಾದ ಪ್ರವೀಣ ಬೆಟದೂರು (25) ಎಂಬುವವರು ಬೆಂಕಿ ಹಚ್ಚಿಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ತಡಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ ಗ್ರಾಮದ ಪ‍್ರವೀಣ, ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ತಡಸ ಗ್ರಾಮದ ತಾಯವ್ವ ದೇವಿ ದೇವಸ್ಥಾನದ ಬಳಿ ಬಂದಿದ್ದ ಪ್ರವೀಣ, ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ತೀವ್ರ ಗಾಯಗೊಂಡಿದ್ದ ಇವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ’ ಎಂದು ತಡಸ ಪೊಲೀಸರು ಹೇಳಿದರು.
‘ಪ್ರವೀಣ ಸಾವಿನ ಸಂಬಂಧ ಯುಡಿಆರ್ (ಅಸಹಜ ಸಾವು) ದಾಖಲಿಸಿಕೊಳ್ಳಲಾಗಿದೆ. ಚಿಕಿತ್ಸೆ ಸಂದರ್ಭದಲ್ಲಿ ಪ್ರವೀಣ ಅವರಿಂದ ಹೇಳಿಕೆ ಸಹ ಪಡೆಯಲಾಗಿದ್ದು, ಅದನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
ಯುವತಿ ಜೊತೆ ಸ್ನೇಹ
‘ಪ್ರವೀಣ್ ಅವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ 21 ವರ್ಷದ ಯುವತಿ ಜೊತೆ ಸ್ನೇಹ ಬೆಳೆಸಿದ್ದರು. ನರ್ಸಿಂಗ್ ಕಾಲೇಜ್‌ವೊಂದರಲ್ಲಿ ಯುವತಿ ಓದುತ್ತಿದ್ದರು. ಇಬ್ಬರೂ ಆಗಾಗ ಪರಸ್ಪರ ಭೇಟಿಯಾಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಇತ್ತೀಚೆಗೆ ಯುವತಿ ಜೊತೆಗೆ ಮಾತನಾಡಿದ ಪ್ರವೀಣ್, ತಮ್ಮನ್ನು ಪ್ರೀತಿಸುವಂತೆ ಕೋರಿದ್ದರು. ಆದರೆ, ಯುವತಿ ತಮ್ಮ ಭವಿಷ್ಯದ ದೃಷ್ಟಿಯಿಂದ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಪ್ರವೀಣ ಬೇಸರಗೊಂಡಿದ್ದರು. ತಮ್ಮನ್ನು ಪ್ರೀತಿಸುವಂತೆ ಪಟ್ಟು ಹಿಡಿದಿದ್ದರು’ ಎಂದು ಮೂಲಗಳು ತಿಳಿಸಿವೆ.
ಯುವತಿ ಎದುರೇ ಆತ್ಮಹತ್ಯೆ
‘ಶುಕ್ರವಾರ ಬೆಳಿಗ್ಗೆ ಯುವತಿಯನ್ನು ಪ್ರವೀಣ ಭೇಟಿಯಾಗಿದ್ದರು. ಮಾತನಾಡಬೇಕೆಂದು ಹೇಳಿ ಯುವತಿಯನ್ನು ತಡಸ ಬಳಿಯ ತಾಯವ್ವ ದೇವಸ್ಥಾನದ ಸಮೀಪದಲ್ಲಿ ಕರೆತಂದಿದ್ದರು. ಯುವತಿಗೆ ಗೊತ್ತಾಗದಂತೆ, ಮಾರ್ಗಮಧ್ಯೆಯೇ ಬಂಕ್‌ನಿಂದ ಬಾಟಲಿಯಲ್ಲಿ ಪೆಟ್ರೋಲ್ ಖರೀದಿಸಿಟ್ಟುಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ತಮ್ಮನ್ನು ಪ್ರೀತಿಸುವಂತೆ ಪ್ರವೀಣ ಪುನಃ ಕೋರಿದ್ದರು. ಆದರೆ, ಅದಕ್ಕೆ ಯುವತಿ ಒಪ್ಪಿರಲಿಲ್ಲ. ನಮ್ಮದು ಸ್ನೇಹವಷ್ಟೇ ಎಂಬುದಾಗಿ ಹೇಳಿದ್ದರು. ಅದರಿಂದ ಬೇಸರಗೊಂಡು ಕೂಗಾಡಿದ್ದ ಪ್ರವೀಣ, ಬಾಟಲಿಯಲ್ಲಿದ್ದ ಪೆಟ್ರೋಲ್ ಮೈ ಮೇಲೆ ಸುರಿದುಕೊಂಡಿದ್ದರು. ಬಳಿಕ, ಬೆಂಕಿ ಹಚ್ಚಿಕೊಂಡಿದ್ದರು. ಸ್ಥಳೀಯರು ಸಹಾಯಕ್ಕೆ ಹೋಗುವಷ್ಟರಲ್ಲಿ, ಇಡೀ ದೇಹಕ್ಕೆ ಬೆಂಕಿ ವ್ಯಾಪಿಸಿತ್ತು. ಬೆಂಕಿ ನಂದಿಸಿ, ಪ್ರವೀಣ್ ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.