
ಸವಣೂರು: ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದಿಂದ ಕುರುಬರಮಲ್ಲೂರ ಗ್ರಾಮಕ್ಕೆ ತೆರಳುವ ರಸ್ತೆಯ ಪಕ್ಕದ ಕೃಷಿ ಜಮೀನಿನಲ್ಲಿದ್ದ ಗೋವಿನಜೋಳದ ಬಣಿವೆಗಳಿಗೆ ಶನಿವಾರ ಆಕಸ್ಮಿಕ ಬೆಂಕಿ ತಗುಲಿ, ಅಪಾರ ನಷ್ಟ ಸಂಭವಿಸಿದೆ.
ಸುಮಾರು 120 ಎಕರೆಗೂ ಹೆಚ್ಚಿನ ಕೃಷಿ ಭೂಮಿಯಲ್ಲಿ 66ಕ್ಕೂ ಹೆಚ್ಚಿನ ರೈತರು ಬೆಳೆದ ಗೋವಿನಜೋಳ ತೆನೆಗಳನ್ನು ಹೊಲದಲ್ಲಿ ಕಣವನ್ನು ಮಾಡಿ ಅಕ್ಕ ಪಕ್ಕದಲ್ಲಿ ಶೇಖರಿಸಿದ್ದರು. ಅದರಲ್ಲಿ 16 ರೈತರ ಗೋವಿನಜೋಳದ ತೆನೆಯ ರಾಶಿಯ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 277 ಟನ್ ತೂಕದ ಗೋವಿನಜೋಳ ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಬೆಂಕಿಗೆ ಆಹುತಿಯಾದ ಗೋವಿನಜೋಳದ ಮೌಲ್ಯ ಅಂದಾಜು ₹80 ಲಕ್ಷದಿಂದ ಒಂದು ಕೋಟಿ ಎನ್ನಲಾಗಿದೆ.
ಬೆಂಕಿ ತಗುಲಿರುವ ಸುದ್ದಿ ತಿಳಿದು ಹಾವೇರಿ, ಶಿಗ್ಗಾಂವಿ ಹಾಗೂ ಸವಣೂರಿನ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಸ್ಥಳೀಯ ರೈತರು, ಯುವಕರು ನೆರವಾದರು.
ಅಧಿಕಾರಿಗಳೊಂದಿಗೆ ರೈತರ ವಾಗ್ವಾದ: ಬೆಂಕಿ ಅನಾಹುತ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ಜೊತೆ ರೈತರು ವಾಗ್ವಾದ ನಡೆಸಿದರು. ಸರ್ಕಾರ ಗೋವಿನಜೋಳ ಖರೀದಿಯಲ್ಲಿ ಸೃಷ್ಟಿಸಿದ ಗೊಂದಲದಿಂದಾಗಿ ಇದುವರೆಗೆ ಗೋವಿನಜೋಳ ಮಾರಾಟ ಮಾಡಿರಲಿಲ್ಲ. ಇದರಿಂದಾಗಿ ಅಪಾರ ಪ್ರಮಾಣದ ಗೋವಿನಜೋಳ ಸಂಗ್ರಹವಾಗಿತ್ತು. ಕೂಡಲೇ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಉಪ ವಿಬಾಗಾಧಿಕಾರಿ ಶುಭಂ ಶುಕ್ಲಾ, ತಹಶೀಲ್ದಾರ್ ರವಿಕುಮಾರ ಕೊರವರ, ಪಿಎಸ್‍ಐ ರಂಗನಾಥ ಅಂತರಗಟ್ಟಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಚಕ್ರಸಾಲಿ, ಕಂದಾಯ ನಿರೀಕ್ಷಕ ರವಿ ಹೂಗಾರ ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರೈತರಿಗೆ ಆತ್ಮಸ್ಥೈರ್ಯ ಹೇಳಿದರು.
ಪ್ರಮುಖರಾದ ಸುಭಾಸ ಮಜ್ಜಗಿ, ಎಂ.ಜೆ.ಮುಲ್ಲಾ, ಪ್ರಕಾಶ ಬಾರ್ಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಇದ್ದರು.
ಬೆಂಕಿ ಅನಾಹುತದಲ್ಲಿ ಅಪಾರ ಗೋವಿನಜೋಳ ನಷ್ಟವಾಗಿದೆ. ಹಾನಿಗೊಳಗಾದ ರೈತರಿಗೆ ತ್ವರಿತ ಗತಿಯಲ್ಲಿ ಪರಿಹಾರ ನೀಡಲಾಗುವುದುವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.