ADVERTISEMENT

ಕೃಷಿಯಲ್ಲಿ ‘ನವೀನ’ ಸಾಧನೆಗೆ ಅರಸಿ ಬಂತು ಪ್ರಶಸ್ತಿ

ಕೃಷಿ ಮಾತು...

ಪ್ರಮೀಳಾ ಹುನಗುಂದ
Published 15 ಅಕ್ಟೋಬರ್ 2018, 20:00 IST
Last Updated 15 ಅಕ್ಟೋಬರ್ 2018, 20:00 IST
ತಮ್ಮ ಹೊಲದ ನರ್ಸರಿಯಲ್ಲಿ ನವೀನ ನಾಗಣ್ಣನವರ 
ತಮ್ಮ ಹೊಲದ ನರ್ಸರಿಯಲ್ಲಿ ನವೀನ ನಾಗಣ್ಣನವರ    

ಬ್ಯಾಡಗಿ:ಶಿಕ್ಷಕ ವೃತ್ತಿ ಬಯಸಿ ಡಿ.ಇಡಿ ಪೂರ್ಣಗೊಳಿಸಿದ ತಾಲ್ಲೂಕಿನ ಬಡಮಲ್ಲಿ ಗ್ರಾಮದ ನವೀನ ನಾಗಪ್ಪ ನಾಗಣ್ಣನವರ, ಕೃಷಿಯಲ್ಲಿ ಸಾಧನೆಗೈಯುವ ಮೂಲಕ ತಾಲ್ಲೂಕಿನ ‘ಶ್ರೇಷ್ಠ ಕೃಷಿಕ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಉದ್ಯೋಗದ ಕನಸು ಕಂಡಿದ್ದ ಅವರು, ಸ್ವಾವಲಂಬಿಯಾಗುವ ಇಚ್ಛೆಯಿಂದ ಕೃಷಿ ಬಗ್ಗೆ ಆಸಕ್ತಿ ಹೊಂದಿದರು. ತಮ್ಮ ಹೊಲದಲ್ಲಿ ವಿವಿಧ ತರಕಾರಿ ಬೆಳೆಸಿ, ಮಾರಾಟ ಮಾಡಿದರು. ಇದರಲ್ಲಿ ಉತ್ತಮ ಆದಾಯ ಬಂದ ಕಾರಣ, ತಮ್ಮ ಫಾರ್ಮ್‌ ಹೌಸ್‌ನಲ್ಲಿ 4 ಜನರಿಗೆ ಕೆಲಸ ನೀಡಿದ್ದು, ಕೃಷಿ ಚಟುವಟಿಕೆಯ ವ್ಯಾಪ್ತಿ ವಿಸ್ತರಿಸಿದ್ದಾರೆ.

ಎರಡೂವರೆ ಎಕರೆ ಜಮೀನು ಹೊಂದಿರುವ ಅವರು, 30 ಗುಂಟೆಯಲ್ಲಿ ಪಾಲಿ ಹೌಸ್ ನಿರ್ಮಿಸಿಕೊಂಡಿದ್ದಾರೆ. ಉಳಿದ ಹೊಲದಲ್ಲಿ ಎಲೆ ಕೋಸು, ಮುಳಗಾಯಿ, ಬೆಂಡೆಕಾಯಿ, ಟೊಮೆಟೊ, ಮೆಣಸಿನಕಾಯಿ ಸೇರಿದಂತೆ ವಿವಿಧ ಕಾಯಿಪಲ್ಲೆ ಬೆಳೆಯುತ್ತಿದ್ದಾರೆ.

ADVERTISEMENT

ನರ್ಸರಿ
ರೈತರ ಬೇಡಿಕೆಗೆ ಅನುಗುಣವಾಗಿ ಸಸಿಗಳನ್ನು ಮಾಡಿ ನೀಡುತ್ತಿದ್ದಾರೆ. ಟ್ರೇನಲ್ಲಿ ಗುಣಮಟ್ಟದ ಸಸಿಗಳನ್ನು ಬೆಳೆಸಲಾಗುತ್ತದೆ. ಒಂದು ಟ್ರೇನಲ್ಲಿ ಸುಮಾರು 98 ಸಸಿಗಳನ್ನು ಬೆಳೆಸಲು ಸಾಧ್ಯವಿದ್ದು, ವರ್ಷಕ್ಕೆ 20 ಸಾವಿರ ಟ್ರೇಗಳನ್ನು ಮಾರಾಟ ಮಾಡಲಾಗುತ್ತದೆ. ನಾನು ಶಿಕ್ಷಕನಾಗದಿದ್ದರೂ ಪರವಾಗಿಲ್ಲ, ನಮ್ಮದು, ಅಪ್ಪಟ ದೇಸೀಯ ‘ಹೊಲದ ನರ್ಸರಿ’ ಇದೆ ಎಂದು ನಕ್ಕರು.

ತುಂತುರು
ಒಂದು ಕೊಳವೆ ಬಾವಿಯಿದ್ದು, ಎರಡೂವರೆ ಇಂಚು ನೀರಿದೆ. 2015ರಲ್ಲಿ ಕೃಷಿ ಹೊಂಡ ನಿರ್ಮಿಸಿದ್ದು, ಡೀಸೆಲ್ ಪಂಪ್ ಮೂಲಕ ಹೊಂಡದಲ್ಲಿ ನೀರು ಸಂಗ್ರಹಿಸಿ, ಹನಿ ಹಾಗೂ ತುಂತುರು ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಹನಿ ನೀರಾವರಿಯಲ್ಲೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಹೊಲಗಳಿಗೆ ನೀರು ಹಾಯಿಸುತ್ತಿದ್ದಾರೆ. ನೀರಿನ ಬಳಕೆ ಬಗ್ಗೆಯೂ ಎಚ್ಚರ ವಹಿಸಿದ್ದಾರೆ.

ಹೈನುಗಾರಿಕೆ
6 ದೇಸೀಯ ಹಸು ಸಾಕಿದ್ದು, ದಿನಕ್ಕೆ 10 ಲೀ ಹಾಲು ಸಿಗುತ್ತಿದೆ. ಜಾನುವಾರುಗಳಿಂದ ಕೇವಲ ಹಾಲು ಮಾತ್ರವಲ್ಲ, ಅವುಗಳ ಸೆಗಣಿಗೆ ಕಸ ಕಡ್ಡಿ, ಉದುರಿದ ಎಲೆಗಳನ್ನು ಹಾಕಿ, ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಅಂತಹ ಗೊಬ್ಬರದ ಬಳಕೆಯಿಂದ ರೋಗ ಹಾಗೂ ಕೀಟಬಾಧೆಯೂ ಇಲ್ಲದಾಗಿದೆ. ಹೀಗಾಗಿ, ನಮ್ಮ ನರ್ಸರಿಯ ಸಸಿಗಳನ್ನು ಶಿಕಾರಿಪುರ, ಸೊರಬ ಸೇರಿದಂತೆ ಸುತ್ತಲಿನ ರೈತರು ಕೊಂಡೊಯ್ಯುತ್ತಾರೆ ಎಂದರು.

ಎರಡೂವರೆ ಎಕರೆಯಲ್ಲಿ ವೈಜ್ಞಾನಿಕ ಹಾಗೂ ವೈವಿಧ್ಯಮಯವಾಗಿ ಕೃಷಿ ಮಾಡುತ್ತಿದ್ದು, ಕಸುಬಿನ ಜೊತೆ ಉಪಕಸುಬಿಗೂ ಆದ್ಯತೆ ನೀಡುತ್ತಿದ್ದೇನೆ. ಹೀಗಾಗಿ, ಸುಮಾರು ₹15 ಲಕ್ಷ ಆದಾಯ ಪಡೆಯಲು ಸಾಧ್ಯವಾಗಿದೆ. ಸಂಕಲ್ಪ ಮಾಡಿದರೆ ಕೃಷಿಯಿಂದ ಸಾಧನೆ ಮಾಡಬಹುದು ಎಂದು ಹೆಮ್ಮೆಯಿಂದ ಅವರು (ಮೊ. 9164827671) ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.