ADVERTISEMENT

ಹಾವೇರಿ: ವರ್ಷದಿಂದ ವರ್ಷಕ್ಕೆ ಪ್ರವೇಶಾತಿ ಕುಸಿತ!

ಕಾಯಂ ಬೋಧಕರ ಕೊರತೆಯಿಂದ ಬಳಲುತ್ತಿರುವ ಕೆರಿಮತ್ತಿಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರ

ಸಿದ್ದು ಆರ್.ಜಿ.ಹಳ್ಳಿ
Published 9 ಫೆಬ್ರುವರಿ 2021, 1:55 IST
Last Updated 9 ಫೆಬ್ರುವರಿ 2021, 1:55 IST
ಹಾವೇರಿ ತಾಲ್ಲೂಕಿನ ಕೆರಿಮತ್ತಿಹಳ್ಳಿಯಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಪಿ.ಜಿ. ಸೆಂಟರ್‌ನ ಹೊರನೋಟ  
ಹಾವೇರಿ ತಾಲ್ಲೂಕಿನ ಕೆರಿಮತ್ತಿಹಳ್ಳಿಯಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಪಿ.ಜಿ. ಸೆಂಟರ್‌ನ ಹೊರನೋಟ     

ಹಾವೇರಿ: ತಾಲ್ಲೂಕಿನ ಕೆರಿಮತ್ತಿಹಳ್ಳಿಯಲ್ಲಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿ ಕುಸಿಯುತ್ತಿರುವುದು ಬೋಧಕರಿಗೆ ತೀವ್ರ ಆತಂಕ ತಂದಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮೂರು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ ಕೆರಿಮತ್ತಿಹಳ್ಳಿಯ ಪಿ.ಜಿ. ಸ್ಟಡಿ ಸೆಂಟರ್‌ ಕೂಡಾ ಪ್ರಮುಖವಾದುದು. 2005ರಲ್ಲಿ ಹಾವೇರಿಯ ಜಿ.ಎಚ್‌. ಕಾಲೇಜಿನಲ್ಲಿ ಆರಂಭವಾದ ಈ ಕೇಂದ್ರವು, 2009ರಲ್ಲಿ ಕೆರಿಮತ್ತಿಹಳ್ಳಿಯ 48 ಎಕರೆ ಸುವಿಶಾಲ ಜಾಗದಲ್ಲಿ ನಿರ್ಮಿಸಿದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

6 ವಿಭಾಗಗಳು: ಈ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಸ್ತುತ ಕನ್ನಡ, ಇಂಗ್ಲಿಷ್‌, ಸಮಾಜ ಕಾರ್ಯ (ಎಂ.ಎಸ್.ಡಬ್ಲ್ಯು), ಪತ್ರಿಕೋದ್ಯಮ (ಎಂ.ಸಿ.ಜೆ), ಸಮಾಜಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ (ಎಂ.ಕಾಂ) ಸೇರಿದಂತೆ 6 ವಿಭಾಗಗಳಿವೆ. 2014–15ನೇ ಸಾಲಿನಲ್ಲಿ 376 ವಿದ್ಯಾರ್ಥಿಗಳಿದ್ದ ಸಂಖ್ಯೆ ಪ್ರಸ್ತುತ ಸಾಲಿನಲ್ಲಿ 207ಕ್ಕೆ ಕುಸಿದಿದೆ. ಅಂದರೆ, ಆರು ವರ್ಷಗಳಲ್ಲಿ ಶೇ 45ರಷ್ಟು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.

ADVERTISEMENT

6 ವಿಭಾಗಗಳಿಗೆ ಮೊದಲನೇ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 570 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶವಿದೆ. ಆದರೆ, ಕೇಂದ್ರ ಆರಂಭದಿಂದಲೂ ಇಲ್ಲಿನ ಸೀಟುಗಳು ಭರ್ತಿಯೇ ಆಗಿಲ್ಲ. 2014–15ನೇ ಸಾಲಿನಲ್ಲಿ ಶೇ 65ರಷ್ಟು ಸೀಟುಗಳು ಭರ್ತಿಯಾಗಿತ್ತು. ನಂತರ ವರ್ಷದಿಂದ ವರ್ಷಕ್ಕೆ ಪ್ರವೇಶಾತಿ ಕಡಿಮೆಯಾಯಿತು. ಪ್ರಸ್ತುತ ವರ್ಷ ಶೇ 36 ಸೀಟುಗಳು ಮಾತ್ರ ಭರ್ತಿಯಾಗಿವೆ.

‘ಕಾಯಂ ಉಪನ್ಯಾಸಕರ ಕೊರತೆಯಿಂದ ಬೋಧನಾ ಗುಣಮಟ್ಟ ತೀವ್ರ ಕುಸಿದಿದೆ. ವೇಳಾಪಟ್ಟಿಯ ಪ್ರಕಾರ ತರಗತಿಗಳು ಸರಿಯಾಗಿ ನಡೆಯುವುದಿಲ್ಲ. ಹೀಗಾಗಿ ಕೆಲವು ವಿದ್ಯಾರ್ಥಿಗಳು ಮಧ್ಯಾಹ್ನದ ಸಮಯದಲ್ಲೇ ಮನೆಗೆ ಹಿಂತಿರುಗುತ್ತಾರೆ. ಆಟದ ಮೈದಾನ, ಕ್ಯಾಂಟೀನ್‌, ಜೆರಾಕ್ಸ್‌ ಸೆಂಟರ್‌, ಇಂಟರ್‌ನೆಟ್‌ ಸೌಲಭ್ಯವಿಲ್ಲದೆ ಪರದಾಡುತ್ತಿದ್ದೇವೆ. ಭವ್ಯ ಕಟ್ಟಡವಿದ್ದರೂ ಸಮರ್ಪಕ ನಿರ್ವಹಣೆಯಿಲ್ಲ. ಹೀಗಾಗಿ ಇಲ್ಲಿ ಅಧ್ಯಯನ ಮಾಡಲು ಯಾರೂ ಆಸಕ್ತಿ ತೋರುತ್ತಿಲ್ಲ’ ಎನ್ನುತ್ತಾರೆ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು.

ಬಸ್‌ ಕೊರತೆ: ಹಾವೇರಿ ನಗರದಿಂದ 8 ಕಿ.ಮೀ. ದೂರದಲ್ಲಿರುವ ಪಿ.ಜಿ. ಸೆಂಟರ್‌ಗೆ ಉತ್ತಮ ಬಸ್‌ ಸೌಲಭ್ಯವಿಲ್ಲ. ಬೆಳಿಗ್ಗೆ ಎರಡು ಬಸ್‌ಗಳು ಬರುತ್ತವೆ. ಆದರೆ ಮಧ್ಯಾಹ್ನ ಮತ್ತು ಸಂಜೆ ವೇಳೆ ಹೋಗಲು ಬಸ್‌ಗಳೇ ಇಲ್ಲ. ಹೀಗಾಗಿ ಬಹುಪಾಲು ವಿದ್ಯಾರ್ಥಿಗಳು ಹಾನಗಲ್‌ ಮುಖ್ಯರಸ್ತೆಯಲ್ಲಿರುವ ಹೊಸಳ್ಳಿಯವರೆಗೆ 1.5 ಕಿ.ಮೀ. ಕಾಲ್ನಡಿಗೆಯಲ್ಲೇ ಬಿಸಿಲಿನಲ್ಲಿ ಹೋಗಬೇಕು.

‘ಹಾವೇರಿ ಜಿಲ್ಲೆಯಲ್ಲಿ ಸುಮಾರು 22 ಪದವಿ ಕಾಲೇಜುಗಳಿದ್ದು, ಎಲ್ಲಿಯೂ ಬಿ.ಎಸ್‌.ಡಬ್ಲ್ಯು ಕೋರ್ಸ್‌ ಇಲ್ಲ. ಪತ್ರಿಕೋದ್ಯಮ ಕೋರ್ಸ್‌ ಕೂಡ ಒಂದೇ ಒಂದು ಕಾಲೇಜಿನಲ್ಲಿದೆ. ಹೀಗಾಗಿ ಎಂ.ಎಸ್‌.ಡಬ್ಲ್ಯೂ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ವಿದ್ಯಾರ್ಥಿಗಳು ಸಿಗುತ್ತಿಲ್ಲ. ಗದಗದಲ್ಲೇ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭವಾದ ಕಾರಣ ಅಲ್ಲಿನ ವಿದ್ಯಾರ್ಥಿಗಳೂ ಇಲ್ಲಿಗೆ ಬರುವುದನ್ನು ನಿಲ್ಲಿಸಿದ್ದಾರೆ’ ಎನ್ನುತ್ತಾರೆ ಉಪನ್ಯಾಸಕರು.

ಪದವಿಯಿಂದಲೇ ಪತ್ರಿಕೋದ್ಯಮ ಮತ್ತು ಸಮಾಜಕಾರ್ಯ ಓದಲು ಬಯಸುವ ವಿದ್ಯಾರ್ಥಿಗಳು ಧಾರವಾಡದ ಕಡೆ ಹೋಗುತ್ತಿದ್ದಾರೆ. ನಂತರ ಎಂ.ಎ., ಎಂ.ಕಾಂ. ವ್ಯಾಸಂಗವನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲೇ ಮುಂದುವರಿಸುತ್ತಾರೆ.ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳಿರುವುದು ಮತ್ತೊಂದು ಆಕರ್ಷಣೆಯಾಗಿದೆ. ಈ ಎಲ್ಲ ಕಾರಣಗಳಿಂದ ಹಾವೇರಿಯಲ್ಲಿ ಪಿ.ಜಿ. ಸ್ಟಡಿ ಸೆಂಟರ್ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ ಎನ್ನಲಾಗುತ್ತಿದೆ.

16 ಹುದ್ದೆಗಳು ಖಾಲಿ!
ಒಂದು ವಿಭಾಗಕ್ಕೆ ಪ್ರಾಧ್ಯಾಪಕ–1, ಸಹ ಪ್ರಾಧ್ಯಾಪಕ–2, ಸಹಾಯಕ ಪ್ರಾಧ್ಯಾಪಕ–3 ಹುದ್ದೆಗಳು ಸೇರಿದಂತೆ 6 ಕಾಯಂ ಬೋಧಕರಿರಬೇಕು ಎನ್ನುತ್ತದೆ ಯುಜಿಸಿ ಮಾರ್ಗಸೂಚಿ. ಈ ಪ್ರಕಾರ 6 ವಿಭಾಗಗಳಿಗೆ 36 ಕಾಯಂ ಬೋಧಕರಿರಬೇಕಿತ್ತು.

ಆದರೆ, ಈ ಕೆರಿಮತ್ತಿಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇಬ್ಬರು ಮಾತ್ರ ಕಾಯಂ ಬೋಧಕರಿದ್ದಾರೆ. ಇವರ ಜತೆ ಗುತ್ತಿಗೆ ಆಧಾರಿತ 13 ಬೋಧನಾ ಸಹಾಯಕರು, 5 ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ 20 ಬೋಧಕ ಸಿಬ್ಬಂದಿ ಇದ್ದು, ಇನ್ನೂ 16 ಹುದ್ದೆಗಳು ಖಾಲಿ ಉಳಿದಿವೆ.

*
‘ಪದವಿ ಕಾಲೇಜುಗಳಿಗೆ ಭೇಟಿ ನೀಡಿ, ನಮ್ಮ ಪಿ.ಜಿ. ಸೆಂಟರ್‌ಗೆ‌ ಪ್ರವೇಶಾತಿ ಪಡೆಯಲು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದ್ದೇವೆ. ಕಲಿಕೆಗೆ ಉತ್ತಮ ವಾತಾವರಣವಿದೆ’
– ಪ್ರಶಾಂತ್‌ ಎಚ್‌.ವೈ., ಪ್ರಭಾರ ಆಡಳಿತಾಧಿಕಾರಿ, ಕೆರಿಮತ್ತಿಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.