ADVERTISEMENT

ಹಾವೇರಿ | ನಿಯಮ ಉಲ್ಲಂಘನೆ: ಹೆದ್ದಾರಿಯಲ್ಲಿ ಕ್ಯಾಮೆರಾ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:22 IST
Last Updated 23 ಜುಲೈ 2025, 2:22 IST
ಯಶೋಧಾ ವಂಟಗೋಡಿ
ಯಶೋಧಾ ವಂಟಗೋಡಿ   

ಹಾವೇರಿ: ‘ಸಂಚಾರ ನಿಯಮ ಉಲ್ಲಂಘಿಸುವವರನ್ನು ಕ್ಯಾಮೆರಾ ಮೂಲಕ ಪತ್ತೆ ಮಾಡಿ ದಂಡ ವಿಧಿಸಿ ಮನೆಗೆ ನೋಟಿಸ್ ನೀಡಲು ಚಿಂತನೆ ನಡೆಸಲಾಗುತ್ತಿದೆ. ಆರಂಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಐ ಆಧರಿತ ಕ್ಯಾಮೆರಾ ಅಳವಡಿಸುವ ಯೋಚನೆಯಿದೆ’ ಎಂದು ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಹಲವರು ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ಓಡಾಡುತ್ತಾರೆ.  ಅತೀ ವೇಗದ ಚಾಲನೆ ಸೇರಿದಂತೆ ಹಲವು ಸಂಚಾರ ನಿಯಮ ಉಲ್ಲಂಘಿಸುತ್ತಿರುವುದು ಕಾಣುತ್ತಿದೆ. ಬೇರೆ ನಗರಗಳ ರೀತಿಯಲ್ಲಿ ಕ್ಯಾಮೆರಾ ಮೂಲಕ ನಿಯಮ ಉಲ್ಲಂಘನೆ ಪತ್ತೆ ಮಾಡಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಅಪರಾಧಗಳ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುವುದು.  ಜಿಲ್ಲೆಯ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಎಷ್ಟು ಸಿ.ಸಿ.ಟಿ.ವಿ. ಕ್ಯಾಮೆರಾಗಳಿವೆ ? ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಮನೆ ಮನೆಗೆ ಪೊಲೀಸ್ ಸುತ್ತೋಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಸೂಚಿಸಲಾಗಿದೆ. ನಾನು ದಾವಣಗೆರೆಯಲ್ಲಿ ಕೆಲಸ ಮಾಡುವಾಗ, ಜನರ ಸಹಕಾರದಿಂದ ಹೆಚ್ಚು ಕ್ಯಾಮೆರಾ ಅಳವಡಿಸಲಾಗಿತ್ತು. ಅದೇ ಮಾದರಿಯಲ್ಲೇ ಹಾವೇರಿಯಲ್ಲೂ ಕ್ಯಾಮೆರಾ ಹಾಕಲು ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯ ಪ್ರತಿಯೊಬ್ಬ ಶಾಸಕರಿಗೂ ರಾಜ್ಯ ಸರ್ಕಾರ, ತಲಾ ₹ 50 ಕೋಟಿ ಅನುದಾನ ನೀಡುತ್ತಿದೆ. ಅದರಲ್ಲಿ ₹ 1 ಕೋಟಿ ಅನುದಾನವನ್ನು ಜಿಲ್ಲೆಯ ಜನರ ಸುರಕ್ಷತಾ ಕ್ರಮಗಳಿಗೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಶಾಸಕರಿಗೆ ಹೇಳಿದ್ದಾರೆ. ಅನುದಾನ ಪಡೆಯುವ ಸಂಬಂಧ ಪ್ರಸ್ತಾವ ಸಿದ್ಧಪಡಿಸಿ, ಶಾಸಕರು ಹಾಗೂ ಸರ್ಕಾರಕ್ಕೆ ಸಲ್ಲಿಸಲಿದ್ದೇನೆ. ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಮೂಲಕವೂ ಕ್ಯಾಮೆರಾ ಅಳವಡಿಕೆಗೆ ಅವಕಾಶವಿದೆ’ ಎಂದು ತಿಳಿಸಿದರು.

‘ಜುಲೈ 15ರಂದು ನೂತನ ಎಸ್‌.ಪಿ ಆಗಿ ಅಧಿಕಾರ ಸ್ವೀಕರಿಸಿದ್ದೇನೆ. ಈ ಹಿಂದಿನವರು ಏನು ಮಾಡಿದ್ದಾರೆ ಎಂಬುದನ್ನು ನಾನು ವಿಮರ್ಶೆ ಮಾಡುವುದಿಲ್ಲ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸಿದ್ದೇನೆ. ಜಿಲ್ಲೆಯಲ್ಲಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಜನರು ಗಮನಕ್ಕೆ ತಂದಿದ್ದಾರೆ. ಎಲ್ಲವನ್ನೂ ಒಂದೇ ದಿನದಲ್ಲಿ ಸರಿ ಮಾಡಲು ಆಗುವುದಿಲ್ಲ. ಹಂತ ಹಂತವಾಗಿ ಮಾಡಬೇಕಾಗುತ್ತದೆ. ಕಾದು ನೋಡಿ’ ಎಂದು ಹೇಳಿದರು.

ಠಾಣೆವಾರು ಪರಿಶೀಲನೆ: ‘ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳು ಹಾಗೂ ಬಾಕಿ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಪ್ರತಿ ಠಾಣೆಗೂ ಭೇಟಿ ನೀಡಿ, ಠಾಣೆವಾರು ಪರಿಶೀಲನೆ ನಡೆಸಲಿದ್ದೇವೆ. ಜಿಲ್ಲೆಯ ಬಗ್ಗೆ ತಿಳಿಯಲು ಸ್ವಲ್ಪ ಸಮಯ ಬೇಕು’ ಎಂದು ಯಶೋಧಾ ತಿಳಿಸಿದರು.

‘1500 ಜನರಿಗೆ ಒಬ್ಬ ಪೊಲೀಸ್’

‘ಜಿಲ್ಲೆಯಲ್ಲಿ ಪೊಲೀಸ್ ಸಂಖ್ಯಾಬಲ ಕಡಿಮೆಯಿದೆ. 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 1500 ಜನರಿಗೆ ಒಬ್ಬ ಪೊಲೀಸ್ ಇದ್ದಾರೆ. ಇರುವ ಪೊಲೀಸರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಸಿಬ್ಬಂದಿಯ ಅಗತ್ಯವಿದೆ’ ಎಂದು ಎಸ್‌ಪಿ ಯಶೋಧಾ ಹೇಳಿದರು. ‘ತಿಳವಳ್ಳಿ ಹೊರ ಠಾಣೆಯನ್ನು ಮೇಲ್ದರ್ಜೇಗೇರಿಸಲಾಗಿದೆ. ಹೊಸ ಠಾಣೆ ಮಾಡಲು ಕಟ್ಟಡ ಹಾಗೂ ಎಲ್ಲ ದರ್ಜೆಯ ಸಿಬ್ಬಂದಿ ಬೇಕು. ಈ ಬಗ್ಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘ಒತ್ತಡವಿದ್ದರೆ ಬಿಟ್ಟು ಹೋಗಲಿ’

‘ಪೊಲೀಸ್ ಇಲಾಖೆ ಕೆಲಸಕ್ಕಾಗಿ ಎಲ್ಲರೂ ಇಷ್ಟಪಟ್ಟು ಬರುತ್ತಾರೆ. ಇಲಾಖೆಯಲ್ಲಿ ಏನೇ ಕೆಲಸ ವಹಿಸಿದರೂ ಅದನ್ನು ನಿಷ್ಠೆಯಿಂದ ಮಾಡಬೇಕು. ಒತ್ತಡ ಇರುವುದಾಗಿ ಹೇಳುವವರು ಕೆಲಸ ಬಿಟ್ಟು ಹೋಗಬಹುದು’ ಎಂದು ಎಸ್‌ಪಿ ಯಶೋಧಾ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದರು. ‘ಬಂದೋಬಸ್ತ್‌ ಕೆಲಸ ಚೆನ್ನಾಗಿದೆ. ಕಚೇರಿಯಲ್ಲಿ ಸಾಕಷ್ಟು ಒತ್ತಡವಿದೆ ಎಂಬುದಾಗಿ ಕೆಲ ಸಿಬ್ಬಂದಿ ಹೇಳುತ್ತಿದ್ದಾರೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಎಲ್ಲರಿಗೂ ಅವರವರ ಸಾಮರ್ಥ್ಯದ ಮೇಲೆ ಕೆಲಸ ಹಂಚಿಕೆ ಮಾಡಲಾಗಿದೆ. ಒತ್ತಡವಿದ್ದರೆ ಅವರು ಇಲಾಖೆಯಲ್ಲಿ ಇರಲು ಅನರ್ಹರು’ ಎಂದರು.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಯಾರಿಗಾದರೂ ಏನಾದರೂ ಸಮಸ್ಯೆಯಿದ್ದರೆ ಧೈರ್ಯವಾಗಿ ಪೊಲೀಸರಿಗೆ ದೂರು ನೀಡಬಹುದು.
ಯಶೋಧಾ ವಂಟಗೋಡಿ, ಜಿಲ್ಲಾ ಎಸ್‌.ಪಿ
ಜಿಲ್ಲೆಯಲ್ಲಿ ಸುಮಾರು 10000 ಸಿ.ಸಿ.ಸಿ. ಟಿವಿ ಕ್ಯಾಮೆರಾಗಳಿವೆ. ಮತ್ತಷ್ಟು ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು.
ಲಕ್ಷ್ಮಣ ಶಿರಕೋಳ, ಹೆಚ್ಚುವರಿ ಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.