ADVERTISEMENT

‘ಧರ್ಮದ ಮುಂದೆ ಎಲ್ಲರೂ ಒಂದೇ’

ಕಾಶಿಪೀಠದ ಪೀಠಾಧಿಪತಿ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 3:06 IST
Last Updated 25 ನವೆಂಬರ್ 2022, 3:06 IST
ಹಾನಗಲ್ ಪ್ರಮುಖ ಬೀದಿಗಳಲ್ಲಿ ಗುರುವಾರ ಕಾಶಿಪೀಠದ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು
ಹಾನಗಲ್ ಪ್ರಮುಖ ಬೀದಿಗಳಲ್ಲಿ ಗುರುವಾರ ಕಾಶಿಪೀಠದ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು   

ಹಾನಗಲ್: ‘ಗುರು–ವಿರಕ್ತ ಒಂದು ನಾಣ್ಯದ ಎರಡು ಮುಖವಿದ್ದಂತೆ. ಗುರು ಮತ್ತು ವಿರಕ್ತರು ಒಂದೇ ಎಂಬ ಹಾನಗಲ್ ಲಿಂ.ಕುಮಾರ ಶಿವಯೋಗಿಗಳ ಪ್ರೇರಣೆ ಸಮಾಜದ ಉನ್ನತಿಗೆ ಸಹಕಾರಿಯಾಗಿದೆ’ ಎಂದು ಕಾಶಿಪೀಠದ ನೂತನ ಪೀಠಾಧಿಪತಿ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ನುಡಿದರು.

ಪಟ್ಟಣದಲ್ಲಿ ಗುರುವಾರ ಭಕ್ತರ ಅಡ್ಡಪಲ್ಲಕ್ಕಿ ಮಹೋತ್ಸವದ ಸೇವೆ ಸ್ವೀಕರಿಸಿದ ಬಳಿಕ ವಿರಕ್ತಮಠ ಆವರಣದಲ್ಲಿ ನಡೆದ ಜನಜಾಗೃತಿ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

‘ಭಕ್ತ ಮಠದ ನಿಜವಾದ ಶಕ್ತಿ. ಸ್ವಾಮಿ ಮಠಕ್ಕೆ ಜೋಳಿಗೆಯಾಗಬೇಕು. ಸ್ವಾಮಿಯಾದವನು ಇದ್ದವರ ಭಕ್ತಿಯನ್ನು ಇಲ್ಲದವರಿಗೆ ದಾನ ಮಾಡುವ ವಾಹಕ ಶಕ್ತಿ. ಸಮಾಜವನ್ನು ಬಲಪಡಿಸಿ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಮಠಮಾನ್ಯಗಳಿಗಿರಬೇಕು. ಧರ್ಮದ ಮುಂದೆ ಎಲ್ಲರೂ ಒಂದೇ’ ಎಂದರು.

ADVERTISEMENT

ಧರ್ಮಸಭೆ ಉದ್ಘಾಟಿಸಿದ ಬಮ್ಮನಹಳ್ಳಿ ಗುರುಪಾದೇಶ್ವರ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ‘ಧರ್ಮ ಸಂದೇಶಗಳು ಈಗ ಜನಮಾನಸದಲ್ಲಿ ಜಾಗೃತವಾಗಬೇಕಾಗಿದೆ. ಆಸೆ–ಆಮಿಷಗಳಿಗೆ ಬದುಕುವುದು ಮನುಷ್ಯ ಧರ್ಮವಲ್ಲ’ ಎಂದರು.

ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು, ರಾಣೆಬೆನ್ನೂರು ಶನೀಶ್ವರ ಮಠದ ಶಿವಯೋಗೀಶ್ವರ ಶಿವಾಚಾರ್ಯರು, ಕೂಡಲ ಗುರುಮಹೇಶ್ವರ ಶಿವಾಚಾರ್ಯರು, ಹೋತಹಳ್ಳಿ ಸಿದ್ಧಾರೂಢಮಠದ ಶಂಕರಾನಂದ ಸ್ವಾಮೀಜಿ, ಸಿಂಧಗಿಮಠದ ಶಂಭುಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಮುಖಂಡ ಶಿವಯೋಗಿ ಹಿರೇಮಠ ಆಶಯ ನುಡಿದರು. ಮಾಜಿ ಸಚಿವ ಮನೋಹರ ತಹಸೀಲ್ದಾರ್‌, ಗಣ್ಯರಾದ ನಾಗಪ್ಪ ಸವದತ್ತಿ, ಮಾಲತೇಶ ಸೊಪ್ಪಿನ, ರಾಜಶೇಖರ ಕಟ್ಟೇಗೌಡ್ರ, ಮಲ್ಲಿಕಾರ್ಜುನ ಹಾವೇರಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಲಿಂಗಪ್ಪ ತಲ್ಲೂರ, ಕಲ್ಯಾಣಕುಮಾರ ಶೆಟ್ಟರ, ಚಂದ್ರಶೇಖರ ನಿಕ್ಕಂ, ಆರ್.ಸಿ.ಹಿರೇಮಠ, ಬಸಣ್ಣ ಎಲಿ, ಗದಿಗಯ್ಯಶಾಸ್ತ್ರಿ, ಎನ್.ಎಸ್.ಪಡೆಪ್ಪನವರ, ಚೈತ್ರಾ ಕಂಬಾಳಿಮಠ, ಶಿವಶಂಕರ ಗಣಾಚಾರಿ ಇದ್ದರು.

ಇದಕ್ಕೂ ಮುನ್ನ ಇಲ್ಲಿನ ಎಪಿಎಂಸಿ ಪ್ರಾಂಗಣದಿಂದ ಕಾಶಿ ನೂತನ ಪೀಠಾಧಿಪತಿ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಚಾಲನೆ ಪಡೆಯಿತು. ಪ್ರಮುಖ ಬೀದಿಗಳ ಮೂಲಕ ವಿರಕ್ತಮಠ ಆವರಣ ತಲುಪಿತು. ಡೊಳ್ಳು, ಜಾಂಜ್, ಪುರವಂತಿಕೆ ವಾದ್ಯವೈಭವಗಳು ಮತ್ತು ಅರ್ಚಕ, ಪುರೋಹಿತರ ವೇದಘೋಷ ಮೊಳಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.