ರಟ್ಟೀಹಳ್ಳಿ: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ವೈದ್ಯರ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿಯನ್ನು ಸೋಮವಾರ ತಾಲ್ಲೂಕಿನ ಹೊಸಳ್ಳಿ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.
ಹೊಸಳ್ಳಿ ಗ್ರಾಮದ ನಿವಾಸಿ ರವಿ ತಳವಾರ ಅವರ ಐದು ತಿಂಗಳ ಮಗ ಕಾರ್ತಿಕ ತೀವ್ರಬ ಜ್ವರದಿಂದ ಬಳತ್ತಿದ್ದು, ಶನಿವಾರ ರಾತ್ರಿ ಹಿರೇಕೆರೂರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಸೂಕ್ತ ಚಿಕಿತ್ಸೆ ನೀಡದೆ, ಹಾವೇರಿ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಅಲ್ಲಿನ ಸಿಬ್ಬಂದಿ ತಿಳಿಸಿದ್ದರು. ಅಲ್ಲಿಂದ ಜಿಲ್ಲಾ ಆಸ್ಪತ್ರೆಗೆ ಮಗುವನ್ನು ಸಾಗಿಸಲಾಗಿತ್ತು. ನಂತರ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಹೋಗಲು ತಿಳಿಸಿದ್ದಾರೆ. ಪೋಷಕರು ಮಗುವನ್ನು ಕರೆದುಕೊಂಡು ದಾವಣಗೇರೆ ಬಾಪೂಜಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದೆ.
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸೋಮವಾರ ವೈದ್ಯರನ್ನು ಗ್ರಾಮಕ್ಕೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ. ವೈದ್ಯರು ಇನ್ನು ಮುಂದೆ ಇಂತಹ ತಪ್ಪಾಗದಂತೆ ಜಾಗೃತಿವಹಿಸುತ್ತೇವೆ ಎಂದು ಗ್ರಾಮಸ್ಥರಲ್ಲಿ ಕ್ಷಮಾಪಣೆ ಕೇಳಿದರು.
ಘಟನೆ ಕುರಿತು ಜಿಲ್ಲಾ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಎಂ.ಎಂ. ಮಾತನಾಡಿ, ‘ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳ್ನು ಸರಿಯಾಗಿ ಪರೀಕ್ಷಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಗ್ರಾಮದಲ್ಲಿ ಅನೇಕರು ಜ್ವರದಿಂದ ಬಳಲುತ್ತಿದ್ದು, ಡೆಂಘಿ ಜ್ವರ ಇರಬಹುದು ಎನ್ನುವ ಶಂಕೆಯಿದೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರು ತಕ್ಷಣ ಚಿಕಿತ್ಸೆ ನೀಡುವುದಿಲ್ಲ. ಈ ಪ್ರಕರಣದಲ್ಲಿ ತಪ್ಪಿತಸ್ಥ ವೈದ್ಯ ಹಾಗೂ ಸಿಬ್ಬಂದಿಗೆ ವಿರುದ್ಧ ಕ್ರಮ ಜರುಗಿಸಬೇಕು’ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಝೆಡ್. ಆರ್. ಮಕಾಂದಾನ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವಂತೆ ಎಚ್ಚರಿಸಲಾಗಿದೆ. ಹೊಸಳ್ಳಿ ಗ್ರಾಮಕ್ಕೆ ಸಂಬಂಧಪಟ್ಟ ಮೂವರು ವೈದ್ಯ, ಸಿಬ್ಬಂದಿಯನ್ನು ತಕ್ಷಣ ಬೇರೆಡೆ ವರ್ಗಾವಣೆ ಮಾಡಿ ಕ್ರಮಕೈಗೊಳ್ಳಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.