ರಾಣೆಬೆನ್ನೂರು: ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದ ತುಂಗಭದ್ರ ನದಿ ತೀರದ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪದ ಬಳಿ ಮೂಲ ಗದ್ದುಗೆಯ ಅಭಿವೃದ್ಧಿಗೆ ಆಗ್ರಹಿಸಿ ನಿಜ ಶರಣ ಅಂಬಿಗರ ಚೌಡಯ್ಯನವರ ಮೂಲ ಮಠದ ಅಭಿನವ ಅಂಬಿಗರ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಪಿಡಿಒ ವೀರಪ್ಪ ತಳವಾರ ಅವರಿಗೆ ಮನವಿ ಸಲ್ಲಿಸಿದರು.
ಚೌಡಯ್ಯದಾನಪುರದ ನಿಜಶರಣ ಅಂಬಿಗರ ಚೌಡಯ್ಯನ ಮಠದ ಅಧ್ಯಕ್ಷೆ ಅಂಬಿಕಾ ಜಾಲಗಾರ ಮಾತನಾಡಿ, ‘ರಾಜ್ಯದಲ್ಲಿರುವ ಅಂಬಿಗ ಸಮುದಾಯದ 39 ಪರ್ಯಾಯ ಪಂಗಡಗಳನ್ನು ಹೊಂದಿದೆ. ಈ ಎಲ್ಲ ಪರ್ಯಾಯ ಪಂಡದ ಜನತೆಯ ಆರಾಧ್ಯ ಕುಲಗುರು ನಿಜಶರಣ ಅಂಬಿಗರ ಚೌಡಯ್ಯನವರಾಗಿದ್ದು, ಅವರ ಐಕ್ಯ ಮಂಟಪ ಅಭಿವೃದ್ಧಿ ಕಾಣದೆ ಇರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ’ ಎಂದರು.
‘ಮುಂಬರುವ ಬಜೆಟ್‌ನಲ್ಲಿ ಗ್ರಾಮದಲ್ಲಿರುವ 100 ಎಕರೆ ವಿಸ್ತೀರ್ಣವುಳ್ಳ ಜಾಗೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ಪ್ರಾಧಿಕಾರ ಮಾಡಬೇಕು. ₹ 50 ಕೋಟಿ ಅನುದಾನ ಒದಗಿಸಬೇಕು. ಐಕ್ಯಮಂಟಪದ ಅಭಿವೃದ್ಧಿಗೆ ಅಡ್ಡಿಯಾಗಿರುವ ಭಾರತೀಯ ಪುರಾತತ್ವ ಇಲಾಖೆಯಿಂದ ಆಕ್ಷೇಪಣೆಯನ್ನು ರಾಜ್ಯ ಸರ್ಕಾರವು ತೆರವುಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಕೂಡಲ ಸಂಗಮ ಮಾದರಿಯಲ್ಲಿ ಐಕ್ಯಮಂಟಪವನ್ನು ಅಭಿವೃದ್ಧಿಪಡಿಸಬೇಕು’ ಎಂದು ಒತ್ತಾಯಿಸಿದರು.
ಹುಬ್ಬಳ್ಳಿಯ ಬ್ರಹ್ಮರ್ಷಿ ರಾಜು ಗುರು ಸ್ವಾಮೀಜಿ ಮಾತನಾಡಿ, ‘ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಬಳಿ ಇರುವ ಜಾನಪದ ವಿಶ್ವವಿದ್ಯಾಲಯಕ್ಕೆ ಅಂಬಿಗರ ಚೌಡಯ್ಯನವರ ಹೆಸರನ್ನು ನಾಮಕರಣ ಮಾಡಬೇಕು. ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮಕ್ಕೆ ₹ 100 ಕೋಟಿ ಬಜೆಟ್‌ನಲ್ಲಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.
ಅಭಿನವ ಅಂಬಿಗರ ಚೌಡಯ್ಯ ಸ್ವಾಮೀಜಿ ಮಾತನಾಡಿದರು. ಲಕ್ಷ್ಮಣ ದೀಪಾವಳಿ, ವೀರೇಶ ಬಾರ್ಕಿ, ಪರಮೇಶ ದೀಪಾವಳಿ, ವೀರಣ್ಣ ಗಂಗಮ್ಮನವರ, ಚಂದ್ರಪ್ಪ ಮಾಳಗಿ, ಪ್ರಕಾಶ ದೀಪಾವಳಿ, ರಾಘವೇಂದ್ರ ಹಳ್ಳಳ್ಳಿ, ಹನುಮಂತಪ್ಪ ಜಾಲಗಾರ , ರಮೇಶ ಕುಂಚೂರ, ಗಜೇಂದ್ರ ಮಾಳಗಿ, ಬಸವಣ್ಣೆಪ್ಪ ದೀಪಾವಳಿ, ಮಲ್ಲಿಕಾರ್ಜುನ ಬಾರ್ಕಿ, ಹನುಮಂತಪ್ಪ ದಿವಟರ, ಮಲ್ಲಿಕಾರ್ಜುನ ದೀಪಾವಳಿ, ದೇವಿಂದ್ರಪ್ಪ ಹುಲ್ಮನಿ, ಕಿರಣಕುಮಾರ ಕುಂಚೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.