
ಹಾವೇರಿ: ‘ಜಿಲ್ಲೆಯ ಹಾವನೂರು ಸೇರಿದಂತೆ ಹಲವು ಕಡೆಯ ಜಾತ್ರೆಗಳಲ್ಲಿ ಪ್ರಾಣಿ ಬಲಿ ನಡೆಯುತ್ತಿದ್ದು, ಇದರ ತಡೆ ಹಾಗೂ ಜಾಗೃತಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ‘ಅಹಿಂಸಾ ಪ್ರಾಣಿ ದಯಾ ಆಧ್ಯಾತ್ಮ ಸಂದೇಶ ಯಾತ್ರೆ’ ಹಮ್ಮಿಕೊಳ್ಳಲಾಗಿದೆ’ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಣಿ ಬಲಿ ತಡೆಯುವಂತೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಅವರಿಗೂ ಮನವಿ ಸಲ್ಲಿಸಲಾಗಿದೆ’ ಎಂದರು.
‘ಜಾತ್ರೆಗಳಲ್ಲಿ ದೇವರ ಹೆಸರಿನಲ್ಲಿ ಕುರಿ, ಮೇಕೆ, ಕೋಣ... ಹೀಗೆ ನಾನಾ ಪ್ರಾಣಿಗಳನ್ನು ಬಲಿ ನೀಡಲಾಗುತ್ತಿದೆ. ಕೆಲ ದೇವಾಲಯಗಳ ಬಳಿಯೇ ಪ್ರಾಣಿಗಳ ತೂರಾಟ, ಪ್ರಾಣಿ ಅಂಗಾಗಗಳ ನೈವೇದ್ಯ ಸಲ್ಲಿಕೆ ಸೇರಿ ಹಲವು ಆಚರಣೆಗಳು ನಡೆಯುತ್ತಿವೆ. ಕಾನೂನು ಬಾಹಿರವಾದ ಈ ಕೃತ್ಯಗಳನ್ನು ತಡೆಗಟ್ಟಲು ಜಿಲ್ಲಾಡಳಿತ, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಕರಪತ್ರ, ಭಿತ್ತಿಪತ್ರ ಹಚ್ಚಬೇಕು. ಧ್ವನಿವರ್ಧಕ ಮೂಲಕ ಪ್ರಚಾರ ಮಾಡಬೇಕು. ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಪೊಲೀಸ್ ಬಂದೋಬಸ್ತ್ ನೀಡುವ ಮೂಲಕ ಪ್ರಾಣಿ ಬಲಿ ತಡೆಯಬೇಕು’ ಎಂದು ಆಗ್ರಹಿಸಿದರು.
‘ಪ್ರಾಣಿ ಬಲಿ ಮುಕ್ತ, ಜೀವ ಹಿಂಸಾ ಮುಕ್ತ ಜಾತ್ರೆ ಆಚರಿಸಬೇಕು. ಪ್ರಾಣಿಗಳ ಮೇಲೆಯೂ ಕರುಣೆ. ಪ್ರೇಮ. ಜೀವ ದಯೆ, ಮಾನವೀಯತೆ, ಆದ್ಯಾತ್ಮಿಕ ದಯೆ ಇರಬೇಕು. ಪ್ರಾಣಿ ಬಲಿ ಮೌಢ್ಯತೆ ಬಿಟ್ಟು ಸಿಹಿ ತಿನಿಸು ಹಾಗೂ ಸಸ್ಯಾಹಾರಿ ಪದಾರ್ಥಗಳನ್ನು ಬಳಸಿ ಧಾರ್ಮಿಕ ಆಚರಣೆ ಮಾಡಬೇಕು’ ಎಂದರು.
‘ಜಿಲ್ಲೆಯ ವಿವಿಧ ಭಾಗಗಳಲ್ಲಿ ಮತ್ತು ಹಾವೇರಿ ತಾಲ್ಲೂಕಿನ ಹಾವನೂರ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿ ತಡೆಗಾಗಿ ಯಾತ್ರೆ ಕೈಗೊಳ್ಳಲಾಗುತ್ತಿದೆ. ಪೊಲೀಸರು ನಮಗೆ ಸೂಕ್ತ ಭದ್ರತೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಮಹಿಳಾ ಸಂಚಾಲಕರಾದ ಸುನಂದಾ ದೇವಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.