ADVERTISEMENT

ಅನ್ನ ದಾಸೋಹ ತಯಾರಿಗೆ 200 ಮಂದಿ

ಹುಕ್ಕೇರಿಮಠ ಜಾತ್ರಾ ಮಹೋತ್ಸವ | ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ | ನಿತ್ಯವೂ 15 ಸಾವಿರ ಮಂದಿಗೆ ಊಟ

ಸಂತೋಷ ಜಿಗಳಿಕೊಪ್ಪ
Published 24 ಡಿಸೆಂಬರ್ 2025, 2:40 IST
Last Updated 24 ಡಿಸೆಂಬರ್ 2025, 2:40 IST
ಹಾವೇರಿ ಹುಕ್ಕೇರಿಮಠ ಜಾತ್ರೆ ನಿಮಿತ್ತ ಜಿಲ್ಲಾ ಕ್ರೀಡಾಂಗಣದ ಭಕ್ತರ ದಾಸೋಹಕ್ಕಾಗಿ ಕೊಪ್ಪರಿಕೆಯಲ್ಲಿ ಸಿದ್ಧಪಡಿಸುತ್ತಿರುವ ಸಾರನ್ನು ಸದಾಶಿವ ಸ್ವಾಮೀಜಿ ಅವರು ಮಂಗಳವಾರ ವೀಕ್ಷಿಸಿದರು
ಹಾವೇರಿ ಹುಕ್ಕೇರಿಮಠ ಜಾತ್ರೆ ನಿಮಿತ್ತ ಜಿಲ್ಲಾ ಕ್ರೀಡಾಂಗಣದ ಭಕ್ತರ ದಾಸೋಹಕ್ಕಾಗಿ ಕೊಪ್ಪರಿಕೆಯಲ್ಲಿ ಸಿದ್ಧಪಡಿಸುತ್ತಿರುವ ಸಾರನ್ನು ಸದಾಶಿವ ಸ್ವಾಮೀಜಿ ಅವರು ಮಂಗಳವಾರ ವೀಕ್ಷಿಸಿದರು   

ಹಾವೇರಿ: ಇಲ್ಲಿಯ ಹುಕ್ಕೇರಿಮಠ ಜಾತ್ರಾ ಮಹೋತ್ಸವದ ರಂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಎಲ್ಲ ಪ್ರಮುಖ ಕಾರ್ಯಕ್ರಮಗಳನ್ನು ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.

ಜಾತ್ರಾ ಮಹೋತ್ಸವ ಶುರುವಾಗುತ್ತಿದ್ದಂತೆ ಮಠದ ಶಾಲೆಯ ಆವರಣದಲ್ಲಿರುವ ವೇದಿಕೆಯಲ್ಲಿ ‘ಆಧ್ಯಾತ್ಮಿಕ ಪ್ರವಚನ’ ಆರಂಭವಾಗಿತ್ತು. ಇದರ ಜೊತೆಯಲ್ಲಿ, ಡಿ. 22ರವರೆಗೆ ಹಲವು ಕಾರ್ಯಕ್ರಮಗಳು ನಡೆದವು.

ಜಾತ್ರೆ ಜೊತೆಯಲ್ಲಿ ಈ ವರ್ಷ, ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುವರ್ಣ ಮಹೋತ್ಸವ, ಶಿವಬಸವೇಶ್ವರ ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೇ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ, ಸದಾಶಿವ ಸ್ವಾಮೀಜಿಯವರ ಬೆಳ್ಳಿ ತುಲಾಭಾರ ನಡೆಯಲಿದೆ.

ADVERTISEMENT

ಈ ಎಲ್ಲ ಕಾರ್ಯಕ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದೆ. ಹೀಗಾಗಿ, ಕಾರ್ಯಕ್ರಮಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಡಿ. 23ರಿಂದ ಡಿ. 29ರ ವರೆಗೂ ಕ್ರೀಡಾಂಗಣದಲ್ಲಿಯೇ ಕಾರ್ಯಕ್ರಮಗಳು ನಡೆಯಲಿದ್ದು, ನಿತ್ಯವೂ 15 ಸಾವಿರದಿಂದ 20 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಅವರೆಲ್ಲರಿಗೂ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಅಡುಗೆ ತಯಾರಿಗಾಗಿ 200 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಜಿಲ್ಲಾ ಕ್ರೀಡಾಂಗಣದ ಒಂದು ಬದಿಯಲ್ಲಿ ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆ ನಿರ್ಮಿಸಲಾಗಿದೆ. ಅದರ ಎದುರು ಕುಳಿತುಕೊಳ್ಳಲು ಜನರಿಗೆ ಕುರ್ಚಿ ವ್ಯವಸ್ಥೆಯಿದೆ. ಇನ್ನೊಂದು ಬದಿ ಅಡುಗೆ ಸಿದ್ಧಪಡಿಸಲು ಹಾಗೂ ದಾಸೋಹ ಸೇವಿಸಲು ಜಾಗ ಮೀಸಲಿಡಲಾಗಿದೆ. ಊಟದ ಸರದಿ ಹಾಗೂ ನೀರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಕ್ರೀಡಾಂಗಣಕ್ಕೆ ಮಂಗಳವಾರ ಭೇಟಿ ನೀಡಿದ ಸದಾಶಿವ ಸ್ವಾಮೀಜಿ, ವ್ಯವಸ್ಥೆಯನ್ನು ಪರಿಶೀಲಿಸಿದರು. ಅಡುಗೆಯ ಪ್ರತಿಯೊಂದು ಸ್ಥಳಕ್ಕೂ ಭೇಟಿ ನೀಡಿ, ಅಡುಗೆ ತಯಾರಕರನ್ನು ಮಾತನಾಡಿಸಿ, ಅಚ್ಚುಕಟ್ಟಾಗಿ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಅಡುಗೆ ಪ್ರದೇಶ ಹಾಗೂ ಅನ್ನ ದಾಸೋಹ ಸ್ಥಳದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು. ವೇದಿಕೆಯನ್ನೂ ಪರಿಶೀಲಿಸಿದ ಸ್ವಾಮೀಜಿ, ಕೆಲ ಮಾರ್ಪಾಡುಗಳನ್ನು ಮಾಡುವಂತೆ ಸಲಹೆ ನೀಡಿದರು.

ದಿನವೂ ವಿಶೇಷ ಖಾದ್ಯ: ‘ಡಿ. 23ರಿಂದ ಡಿ. 29ರವರೆಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ನಿತ್ಯವೂ ರಾತ್ರಿ ದಾಸೋಹ ಇರಲಿದೆ. ಇದಕ್ಕಾಗಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತಿದೆ’ ಎಂದು ಕ್ಯಾಟರಿಂಗ್ ಜವಾಬ್ದಾರಿ ವಹಿಸಿಕೊಂಡಿರುವ ಯಲ್ಲಪ್ಪ ಶಿಗ್ಗಾವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತರಕಾರಿ ಸ್ವಚ್ಛಗೊಳಿಸುವುದರಿಂದ ಹಿಡಿದು ಅಡುಗೆ ತಯಾರಿಸಲು 200 ಮಂದಿಯನ್ನು ನಿಯೋಜಿಸಲಾಗಿದೆ. ಸರದಿ ಪ್ರಕಾರ ಎಲ್ಲರೂ ಕೆಲಸ ಮಾಡುತ್ತಾರೆ. ಏಕಕಾಲಕ್ಕೆ ನಿತ್ಯವೂ 11 ಕ್ವಿಂಟಲ್ ಅಕ್ಕಿಯ ಅನ್ನ, ಕೊಪ್ಪರಿಕೆಯಲ್ಲಿ 18,000 ಲೀಟರ್ ಸಾರು, 500 ಕೆ.ಜಿ. ಪಲ್ಲೆ ತಯಾರಿಸುತ್ತಿದ್ದೇವೆ. ಜನ ಹೆಚ್ಚಾದರೆ, ಮತ್ತೆ ಅಡುಗೆ ಮಾಡಲು ಸಿದ್ಧರಿರುತ್ತೇವೆ’ ಎಂದರು.

‘ಕಡ್ಲಿಬೇಳೆ–ರವಾ ಪಾಯಸ, ಬೂಂದಿ, ಹೆಸರು ಬೇಳೆ ಪಾಯಸ, ಗೋಧಿ ಪಾಯಸ, ಹೋಳಿಗೆ ಸೇರಿ ದಿನವೂ ಒಂದೊಂದು ವಿಶೇಷ ಖಾದ್ಯ ಇರಲಿದೆ. ಇದರ ಜೊತೆಯಲ್ಲಿ ಭಕ್ತರು ನೀಡುವ ಹೋಳಿಗೆ, ಉಂಡೆ, ರೊಟ್ಟಿ, ಚಪಾತಿ ಹಾಗೂ ಇತರೆ ಎಲ್ಲ ಪದಾರ್ಥಗಳನ್ನು ಭಕ್ತರಿಗೆ ಬಡಿಸಲಾಗುವುದು’ ಎಂದು ಹೇಳಿದರು.

‘ಡಿ. 27ರಂದು 51 ಸಾವಿರ ಭಕ್ತರ ಸಮ್ಮುಖದಲ್ಲಿ ವಚನ ವಂದನ ಕಾರ್ಯಕ್ರಮವಿದೆ. ಈ ಸಂದರ್ಭದಲ್ಲಿ ಅತೀ ಹೆಚ್ಚು ಅಡುಗೆ ಸಿದ್ಧಪಡಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಎಷ್ಟೇ ಜನ ಬಂದರೂ ಅದನ್ನು ನಿಭಾಯಿಸುತ್ತೇವೆ’ ಎಂದರು.

ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಕ್ತರ ದಾಸೋಹ ಸಿದ್ಧಪಡಿಸಲು ಮಹಿಳೆಯರು ಬದನೆಕಾಯಿಯನ್ನು ಮಂಗಳವಾರ ತುಂಡರಿಸಿದರು
ಯುವಜನತೆಯನ್ನು ದುಶ್ಚಟಗಳಿಂದ ಮುಕ್ತಗೊಳಿಸಿ ಅವರಲ್ಲಿ ಧಾರ್ಮಿಕ ಸಂಸ್ಕಾರ ಬೆಳೆಸಲು ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕ್ರೀಡಾಂಗಣದ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು
ಸದಾಶಿವ ಸ್ವಾಮೀಜಿ ಹಾವೇರಿ ಹುಕ್ಕೇರಿಮಠ

15555 ಹೋಳಿಗೆ ನೀಡಿದ ಭಕ್ತರು

ಹಾವೇರಿ ತಾಲ್ಲೂಕಿನ ದೇವಿಹೊಸೂರಿನ ಭಕ್ತರು ಮಂಗಳವಾರ ಮೆರವಣಿಗೆ ಮೂಲಕ ಹುಕ್ಕೇರಿಮಠಕ್ಕೆ ಬಂದು ದಾಸೋಹದ ಪದಾರ್ಥಗಳನ್ನು ನೀಡಿದರು. ‘ಶಿವಬಸವ ಬುತ್ತಿ ಸಮರ್ಪಣಾ ಯಾತ್ರೆ ಮೂಲಕ ಬಂದ ಭಕ್ತರು 15555 ಹೋಳಿಗೆ 5555 ರೊಟ್ಟಿ ಹಾಗೂ 111 ಅಡುಗೆ ಎಣ್ಣೆ ಡಬ್ಬಿ ನೀಡಿದ್ದಾರೆ’ ಎಂದು ಮಠದ ಪ್ರಕಟಣೆ ತಿಳಿಸಿದೆ. ನಾಗನೂರು ಗ್ರಾಮದ ಭಕ್ತರು ಸಹ ಮೆರವಣಿಗೆ ಮೂಲಕ ಬಂದು ಪದಾರ್ಥ ನೀಡಿದ್ದಾರೆ.

ಪ್ರವಚನ ಮಂಗಲೋತ್ಸವ ನಾಳೆ

ಜಿಲ್ಲಾ ಕ್ರೀಡಾಂಗಣದಲ್ಲಿ ಡಿ. 25ರಂದು ಸಂಜೆ 6.30 ಗಂಟೆಗೆ ‘ಆಧ್ಯಾತ್ಮಿಕ ಪ್ರವಚನ ಮಂಗಲೋತ್ಸವ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಮಹಿಳಾ ಗೋಷ್ಠಿ’ ನಡೆಯಲಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗೌರಿಗದ್ದೆಯ ವಿನಯ್ ಗುರೂಜಿ ಸಮಾರಂಭ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯರಾದ ಸುಧಾಮೂರ್ತಿ ಭಾಗವಹಿಸಲಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋ ವಿಜೇತ ಹನುಮಂತ ಲಮಾಣಿ ಅವರಿಂದ ಸಂಗೀತ ಕಾರ್ಯಕ್ರಮವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.