ADVERTISEMENT

ಬ್ಯಾಡಗಿ| ಎಪಿಎಂಸಿ ಪ್ರಾಂಗಣದಲ್ಲಿ ಸ್ವಚ್ಛತಾ ಶುಲ್ಕ ಸಂಗ್ರಹ: ಶಾಸಕ ಶಿವಣ್ಣನವರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 8:03 IST
Last Updated 4 ಜನವರಿ 2026, 8:03 IST
ಬ್ಯಾಡಗಿ ಪುರಸಭೆಯಲ್ಲಿ ಶನಿವಾರ ನಡೆದ 2026–27ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು
ಬ್ಯಾಡಗಿ ಪುರಸಭೆಯಲ್ಲಿ ಶನಿವಾರ ನಡೆದ 2026–27ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು   

ಬ್ಯಾಡಗಿ: ‘ಅನುದಾನದ ಕೊರತೆಯಿಂದ ಆದಾಯದ ಕಡೆಗೆ ಹೆಚ್ಚು ಗಮನ ನೀಡಬೇಕಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವಚ್ಛತಾ ಶುಲ್ಕ ವಿಧಿಸಬೇಕಾಗಿದೆ’ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಇಲ್ಲಿಯ ಪುರಸಭೆಯಲ್ಲಿ ಶನಿವಾರ ನಡೆದ 2026–27ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಪುರಸಭೆಯ ಇನ್ನಿಲ್ಲದ ಖರ್ಚುಗಳ ನಿರ್ವಹಣೆ ದೊಡ್ಡ ಸಮಸ್ಯೆಯಾಗಿರುವುದರಿಂದ ಸ್ವಚ್ಛತಾ ಶುಲ್ಕ ವಿಧಿಸುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.

‘ಮುಂಬರುವ ದಿನಗಳಲ್ಲಿ ಹಾವೇರಿ ವಿಶ್ವವಿದ್ಯಾಲಯ ಆಶ್ರಯದಲ್ಲಿ ಅಂತರ ವಿಶ್ವವಿದ್ಯಾಲಯ ಮಹಿಳಾ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಕ್ರೀಡಾನಿಧಿಯನ್ನು ಹೆಚ್ಚಳ ಮಾಡಬೇಕಾಗಿದೆ. ಅಲ್ಲದೇ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಖರ್ಚು, ವೆಚ್ಚವನ್ನು ಕ್ರೀಡಾನಿಧಿಯಿಂದ ಭರಿಸಬೇಕಾಗುತ್ತದೆ’ ಎಂದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಾಧಿಕಾರಿ ವಿನಯಕುಮಾರ, 15ನೇ ಹಣಕಾಸು ಮತ್ತು ಎಸ್‌ಎಫಸಿ ಯೋಜನೆಯಡಿ ನಿಗದಿತ ಅನುದಾನ ಬಿಡುಗಡೆಯಾಗದಿರುವುದರಿಂದ ಸ್ಥಳೀಯ ಮಟ್ಟದಲ್ಲಿಯೇ ಆದಾಯದ ಮೂಲಗಳನ್ನು ಹುಡುಕಿಕೊಳ್ಳಬೇಕಾಗಿದೆ. ಕಾರಣ ಎಪಿಎಂಸಿ ಪ್ರಾಂಗಣದಲ್ಲಿರುವ ಪೇಟೆ ಕಾರ್ಯಕರ್ತರಿಗೆ ಪ್ರತ್ಯೇಕವಾಗಿ ಶುಲ್ಕ ವಿಧಿಸಬೇಕೋ ಅಥವಾ ಸಂಬಂಧಿಸಿದ ಎಪಿಎಂಸಿ ಕಾರ್ಯದರ್ಶಿಗಳಿಂದ ವಾರ್ಷಿಕವಾಗಿ ಇಂತಿಷ್ಟು ಶುಲ್ಕ ವಿಧಿಸಬೇಕೋ ಎಂಬುದರ ಕುರಿತು ಸಕ್ಷಮ ಪ್ರಾಧಿಕಾರದ ಬಳಿ ಅನುಮತಿ ಪಡೆದುಕೊಳ್ಳಲಾಗುವುದು’ ಎಂದು ತಳಿಸಿದರು.

‘ಸದ್ಯ ಎಪಿಎಂಸಿ ಪ್ರಾಂಗಣಕ್ಕೆ ಸ್ವಚ್ಛತಾ ಶುಲ್ಕ ವಿಧಿಸದೇ ಪುರಸಭೆ ನಿರ್ವಹಣೆ ಸಾಧ್ಯವಾಗಲಾರದು. ಈಗಾಗಲೇ ಮಾಸಣಿ ಗ್ರಾಮ ಪಂಚಾಯಿತಿಯ ಗುಮ್ಮನಹಳ್ಳಿ ಸಾಜಾವನ್ನು ಪಡೆದುಕೊಳ್ಳಲಾಗಿದೆ. ಕೈಗಾರಿಕಾ ಮತ್ತು ವಾಣಿಜ್ಯ ಕಟ್ಟಡಗಳಿರುವ ಗುಮ್ಮನಹಳ್ಳಿ ಸಾಜಾದಿಂದ ಒಂದಷ್ಟು ಆದಾಯ ಹೆಚ್ಚಿಸಿಕೊಳ್ಳುವ ಕುರಿತು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ತರೇದಹಳ್ಳಿ ಸಾಜಾದಿಂದ ಕೆಲವು ವಾಣಿಜ್ಯ ಕಟ್ಟಡಗಳಿಂದ ಪಡೆದುಕೊಳ್ಳಲಾಗುವುದು’ ಎಂದು ಹೇಳಿದರು.

ಪಟ್ಟಣದಲ್ಲಿ ಮಹಿಳಾ ಭವನ ನಿರ್ಮಾಣಕ್ಕೆ ಅನುದಾನ, ಚರಂಡಿ ಹಾಗೂ ರಸ್ತೆ ದುರಸ್ತಿಗೆ ಅನುದಾನ ಸೇರಿದಂತೆ ಪಟ್ಟಣದ ಸರ್ವಾಂಗೀಣ ಅಭಿವೃದ್ದಿ ಕೈಕೊಳ್ಳುವಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಸಾರ್ವಜನಿಕರು ಸಲಹೆ ನೀಡಿದರು. 

‘ಕ್ರೀಡಾ ಉತ್ತೇಜನಕ್ಕೆ 2 ಎಕರೆ ಪ್ರದೇಶ’

ಪುರಸಭೆ ಆಡಳಿತಾಧಿಕಾರಿ ಹಾವೇರಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಮಾತನಾಡಿ ಪಟ್ಟಣದ ಹೊರವಲಯದಲ್ಲಿ ಕ್ರೀಡಾ ಉತ್ತೇಜನಕ್ಕೆ 2 ಎಕರೆ ಪ್ರದೇಶವನ್ನು ಸದ್ಭಳಕೆ ಮಾಡಿಕೊಂಡು ಸುಸಜ್ಜಿತ ಈಜುಗೊಳ ನಿರ್ಮಾಣಕ್ಕೆ ಅನುದಾನ ಮೀಸಲಿಡುವಂತೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.