ADVERTISEMENT

ಹಾವೇರಿ: ಅಡಿಕೆ ಗಿಡಗಳಿಗೆ ಬಸವನಹುಳು ಕಾಟ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 2:20 IST
Last Updated 27 ಸೆಪ್ಟೆಂಬರ್ 2025, 2:20 IST
ಎರಡು ವರ್ಷದ ಅಡಿಕೆ ಗಿಡದ ಬುಡದಲ್ಲಿ ಜಮೆಗೊಂಡ ಬಸವನಹುಳುಗಳು ಗಿಡದ ಕಾಂಡವನ್ನು ಹಾನಿಗೊಳಿಸಿರುವುದು
ಎರಡು ವರ್ಷದ ಅಡಿಕೆ ಗಿಡದ ಬುಡದಲ್ಲಿ ಜಮೆಗೊಂಡ ಬಸವನಹುಳುಗಳು ಗಿಡದ ಕಾಂಡವನ್ನು ಹಾನಿಗೊಳಿಸಿರುವುದು   

ಹಾನಗಲ್: ನಿರಂತರ ಮಳೆಗೆ ಸಿಲುಕಿ ಕೊಳೆ ರೋಗಕ್ಕೆ ತುತ್ತಾಗಿದ್ದ ತಾಲ್ಲೂಕಿನ ಅಡಿಕೆ ಬೆಳೆಗೆ ಈಗ ಬಸವನಹುಳು (ಸ್ನೇಲ್ಸ್‌) ಕಾಟ ಶುರುವಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಮಾವು ಬೆಳೆಯನ್ನು ಹಿಂದಿಕ್ಕಿ ಇತ್ತೀಚಿನ ವರ್ಷಗಳಲ್ಲಿ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿ ಅಡಿಕೆ ಮುನ್ನೆಲೆಗೆ ಬಂದಿದೆ. 25 ಸಾವಿರ ಎಕರೆ ಭೂಮಿಯಲ್ಲಿ ಅಡಿಕೆ ಬೆಳೆ ಇದೆ.

ಜಿಟಿಜಿಟಿ ಮಳೆಯ ಕಾರಣದಿಂದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಕೊಪ್ಪರಸಿಕೊಪ್ಪ ಸಮೀಪದ ಅಡಿಕೆ ತೋಟಗಳಲ್ಲಿ ಬಸವನಹುಳು ಬಾಧೆ ಕಾಣಿಸಿಕೊಂಡಿದೆ. ಎರಡರಿಂದ ಮೂರು ವರ್ಷಗಳ ಅಡಿಕೆ ಗಿಡಗಳ ಬೆಳವಣಿಗೆ ಕುಂಠಿತವಾಗಿ, ಕ್ರಮೇಣ ಹಾಳಾಗುತ್ತಿದೆ.

ADVERTISEMENT

ಬುಡದಿಂದ ಮೇಲೆ ಸಾಗುವ ಹುಳುಗಳು ಗಿಡ ಚಿಗಿಯುವ ಸುಳಿ ಭಾಗವನ್ನು ತಿಂದು ಹಾಕುತ್ತಿವೆ. ಇದರಿಂದ ಎಲೆಗಳು ಹಳದಿಯಾಗಿ ಕ್ರಮೇಣ ಗಿಡವು ಒಣಗಿ ಹೋಗುತ್ತದೆ.

ರಂಗನಾಥ ಅಕ್ಕಿವಳ್ಳಿ ಎಂಬುವವರ ತೋಟದಲ್ಲಿ ಸುಮಾರು ಎರಡು ತಿಂಗಳಿನಿಂದ ಬಸವನಹುಳು ಬಾಧೆ ಶುರುವಾಗಿದೆ.  ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ತೇವಾಂಶ ಹೆಚ್ಚಿರುವ ಭೂಮಿಯಲ್ಲಿ ಹುಳುಗಳ ಕಾಟ ತಪ್ಪಿಲ್ಲ.

‘3 ಎಕರೆ ಪ್ರದೇಶದಲ್ಲಿ ಎರಡು ವರ್ಷದಿಂದ ಅಡಿಕೆ ತೋಟ ಮಾಡಿದ್ದೇನೆ. ಈ ಹಿಂದೆ ಬಸವನಹುಳು ಕಾಟ ಇರಲಿಲ್ಲ. ಈ ವರ್ಷದ ಜಿಟಿಜಿಟಿ ಮಳೆಗೆ ಹುಳು ಬಾಧೆ ಆವರಿಸಿದೆ. ಮಳೆಗಾಲದಲ್ಲಿ ತೇವಾಂಶ ಹೆಚ್ಚಾದಾಗ ಈ ಹುಳು ಉಪದ್ರವ ಇರುತ್ತದೆ‘ ಎಂದು ರೈತ ರಂಗನಾಥ ತಿಳಿಸಿದರು.

‘ಅಡಿಕೆ ಗಿಡಗಳ ಬುಡದಲ್ಲಿ ಸ್ನೇಲ್ಸ್‌ ಕಿಲ್ಸ್‌ ಎಂಬ ಬಿಸ್ಕಟ್‌ ಹಾಕುವುದು ಮತ್ತಿತರ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡಿದ್ದೇನೆ. ಸಂಪೂರ್ಣವಾಗಿ ಹುಳು ಬಾಧೆ ಹತೋಟಿಗೆ ಬಂದಿಲ್ಲ. ಹೀಗಾಗಿ ಎರಡು ವರ್ಷದ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ’ ಎಂದರು.

ಹುಳು ಬಾಧೆ ಕಾಣಿಸಿಕೊಂಡಿದ್ದ ತೋಟಗಳಿಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಮೃತ್ಯಂಜಯ ಹಿರೇಮಠ ಭೇಟಿ ನೀಡಿ ಪರಿಶೀಲಿಸಿದರು.

‘ಜವಳು, ಮೃದು ಭಾಗದಲ್ಲಿ ಬಸವನಹುಳು ಹಾವಳಿ ಮಾಡುತ್ತವೆ. ಗಿಡವನ್ನು ಕೆರೆದು ತಿನ್ನುವ ಸ್ವಭಾವವನ್ನು ಈ ಹುಳುಗಳು ಹೊಂದಿವೆ. ತಾಲ್ಲೂಕಿನ ಅಲ್ಲಲ್ಲಿ ಸ್ನೇಲ್ಸ್‌ ಹಾವಳಿ ಕಂಡು ಬಂದಿದೆ. ಆದರೆ, ಹೆಚ್ಚು ಪ್ರಮಾಣದಲ್ಲಿ ಇಲ್ಲ. ಅಕ್ಕಿ ತವಡಿಗೆ ಮೈದಾ ಹಿಟ್ಟು ಬೆರೆಸಿ ಕ್ಲೋರೊಪೈರಿ ಪಾಸ್‌ ಮಿಶ್ರಣ ಮಾಡಿ ಬಿಸ್ಕಟ್‌ ತರಹ ಇಡಬೇಕು. ಹುಳು ಇದನ್ನು ತಿಂದು ಸಾಯುತ್ತವೆ. ಹುಳುಗಳನ್ನು ಆಕರ್ಷಿಸಲು ಸ್ನೇಲ್ಸ್‌ ಕಿಲ್ಸ್‌ ಬಿಸ್ಕಟ್‌ ಸಹ ಇಡಬೇಕು. ಹುಳು ಬಾಧೆ ನಿಯಂತ್ರಣಕ್ಕೆ ಬಂದ ಬಳಿಕ ಗಿಡಗಳ ಬಲವರ್ಧನೆಗಾಗಿ ಜೀವಾಮೃತ ನೀಡಬೇಕು’ ಮೃತ್ಯುಂಜಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.