ADVERTISEMENT

ಹಾವೇರಿ | ಮಾತು ಮರೆತ ಮುಖ್ಯಮಂತ್ರಿ: ಆಕ್ರೋಶ

₹ 10 ಸಾವಿರ ಗೌರವಧನಕ್ಕೆ ಆಗ್ರಹ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಸಂತೋಷ ಜಿಗಳಿಕೊಪ್ಪ
Published 12 ಜುಲೈ 2025, 3:05 IST
Last Updated 12 ಜುಲೈ 2025, 3:05 IST
‘ಕನಿಷ್ಠ ₹ 10,000 ಗೌರವಧನ ಮತ್ತು ಬಜೆಟ್‌ನಲ್ಲಿ ಉಲ್ಲೇಖಿಸಿದ್ದಂತೆ ₹ 1,000 ಗೌರವಧನ ಹೆಚ್ಚಳದ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು 
‘ಕನಿಷ್ಠ ₹ 10,000 ಗೌರವಧನ ಮತ್ತು ಬಜೆಟ್‌ನಲ್ಲಿ ಉಲ್ಲೇಖಿಸಿದ್ದಂತೆ ₹ 1,000 ಗೌರವಧನ ಹೆಚ್ಚಳದ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು    

ಹಾವೇರಿ: ‘ಮುಖ್ಯಮಂತ್ರಿಯವರು ಘೋಷಣೆ ಮಾಡಿದಂತೆ ಕನಿಷ್ಠ ₹ 10,000 ಗೌರವಧನ ಮತ್ತು ಬಜೆಟ್‌ನಲ್ಲಿ ಉಲ್ಲೇಖಿಸಿದ್ದಂತೆ ₹ 1,000 ಗೌರವಧನ ಹೆಚ್ಚಳದ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ಪ್ರತಿಭಟನಕಾರರು, ತಮ್ಮ ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು. ಸುರಿವ ಮಳೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು. ಎಐಯುಟಿಯುಸಿಯ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

‘ಜನವರಿಯಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ನಡೆಸಲಾಗಿತ್ತು. ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಿದ್ದರಿಂದ ಸಂಘದ ಮುಖಂಡರು, ಮುಖ್ಯಮಂತ್ರಿ ಮಾತಿನಂತೆ ಆರೋಗ್ಯ ಸಚಿವ ಮತ್ತು ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಏಪ್ರಿಲ್ 1ರಿಂದ ಜಾರಿಯಾಗುವಂತೆ ಕನಿಷ್ಠ ₹ 10,000 ಗೌರವಧನವನ್ನು ನೀಡಲಾಗುವುದು. ಹೆಚ್ಚುವರಿ ಕೆಲಸಕ್ಕೆ ನೀಡುವ ಭತ್ಯೆಯನ್ನು ಹೆಚ್ಚಿಸುವುದಾಗಿ ಹೇಳಿದ್ದರು. ಆದರೆ, ಮುಖ್ಯಮಂತ್ರಿಯವರು ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಇದುವರೆಗೂ ಗೌರವಧನ ಹೆಚ್ಚಳದ ಬಗ್ಗೆ ಆದೇಶ ಹೊರಡಿಸಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

‘ಈ ವರ್ಷದ ಬಜೆಟ್‌ನಲ್ಲಿ ಎಲ್ಲ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿದಂತೆ, ಆಶಾ ಕಾರ್ಯಕರ್ತೆಯರಿಗೂ ₹ 1,000 ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಭರವಸೆಯನ್ನೂ ಸರ್ಕಾರ ಈಡೇರಿಸಿಲ್ಲ. ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ₹ 2000 ಗೌರವಧನವನ್ನು ಹೆಚ್ಚಿಗೆ ಮಾಡಬೇಕು’ ಎಂದು ಒತ್ತಾಯಿಸಿದರು.

‘60 ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳದ ಮಾದರಿಯಲ್ಲಿ ₹ 5 ಲಕ್ಷ ಇಡಿಗಂಟು ನೀಡುವುದಾಗಿಯೂ ಭರವಸೆ ನೀಡಿದ್ದರು. ಬಗ್ಗೆ ನಿರ್ಣಯಿಸುವುದಾಗಿ ಹೇಳಿದ್ದರು. ಈ ಬಗ್ಗೆಯೂ ಯಾವುದೇ ಆದೇಶ ಹೊರಬಿದ್ದಿಲ್ಲ. ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ವೇತನ ಆಗುತ್ತಿಲ್ಲ. 2ರಿಂದ 3 ತಿಂಗಳ ಪ್ರೋತ್ಸಾಹಧನವೂ ಬಾಕಿಯಿದೆ’ ಎಂದು ಹೇಳಿದರು.

ರಾಜ್ಯ ಉಪಾಧ್ಯಕ್ಷ ಗಂಗಾಧರ ಬಡಿಗೇರ, ಕಾರ್ಯದರ್ಶಿ ರತ್ನಾ ಗಿರಣಿ, ಜಿಲ್ಲಾಧ್ಯಕ್ಷ ಜಯಶೀಲಾ ಎಸ್.ಬಿ. ಮಾತನಾಡಿದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಗೌರವ ಧನ ಹೆಚ್ಚಳದ ಆದೇಶ ಹೊರಡಿಸದಿದ್ದರೆ ಪುನಃ ಗಂಭೀರ ಸ್ವರೂಪದ ಹೋರಾಟ ಆರಂಭಿಸಲಾಗುವುದು
ರತ್ನಾ ಗಿರಣಿ ರಾಜ್ಯ ಕಾರ್ಯದರ್ಶಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ 

‘ಕೆಲಸ ಪರಿಶೀಲನೆಗೆ ಆಶಾ ಸಾಫ್ಟ್‌: ಅನ್ಯಾಯ’:

‘ಆಶಾ ಕಾರ್ಯಕರ್ತೆಯರು ಕೆಲಸದ ಆನ್‌ಲೈನ್ ದಾಖಲಾತಿ ಪರಿಶೀಲನೆಗೆ ಆಶಾ ಸಾಫ್ಟ್ ವ್ಯವಸ್ಥೆ ಜಾರಿಗೆ ತರಲಾಗಿದ್ದು ಇದರಲ್ಲಿ ಹಲವು ಲೋಪಗಳಿವೆ. ಆಶಾ ಕಾರ್ಯಕರ್ತೆಯರಿಗೂ ಅನ್ಯಾಯವಾಗುತ್ತದೆ’ ಎಂದು ಪ್ರತಿಭಟನಕಾರರು ದೂರಿದರು. ‘ಆಶಾ ಸಾಫ್ಟ್‌ನಲ್ಲಿ ತಾಂತ್ರಿಕ ಸಮಸ್ಯೆಗಳಿವೆ. ಆಶಾ ಕಾರ್ಯಕರ್ತರ ಬೇಡಿಕೆ ಈಡೇರಿಕೆಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಇದೇ ಆಶಾ ಸಾಫ್ಟ್‌ ಪರಿಗಣಿಸಿದರೆ ಆಶಾ ಕಾರ್ಯಕರ್ತೆಯರಿಗೆ ಅನ್ಯಾಯವಾಗಲಿದೆ. ಕೆಲಸ ಹೋಗುವ ಆತಂಕವೂ ಇದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.