ಮುಂಡಗೋಡ: ಅಕ್ರಮವಾಗಿ ಒಂಟಿ ನಳಿಕೆಯ ಬಂದೂಕನ್ನು ದನದ ಕೊಟ್ಟಿಗೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ, ತಾಲ್ಲೂಕಿನ ಇಂದೂರ ಗ್ರಾಮದ ದಾವಲಸಾಬ ಇಮಾಮಸಾಬ ಸೈದಲಿ (25) ಎಂಬುವನನ್ನು ಕಾರವಾರದ ಜಿಲ್ಲಾ ವಿಶೇಷ ಪೊಲೀಸ್ ತಂಡವು ಶುಕ್ರವಾರ ಬಂಧಿಸಿದೆ. ಆರೋಪಿಯಿಂದ ಬಂದೂಕು, ಗನ್ ಪೌಡರ್, ಸೀಸದ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಒಂಟಿ ನಳಿಕೆಯ ಬಂದೂಕು ವಶಪಡಿಸಿಕೊಳ್ಳುವ ಮೂಲಕ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹುಲಗೂರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಮಹಿಳೆಯ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ದಾಂಡೇಲಿ ಗ್ರಾಮೀಣ ಠಾಣೆಯ ಪಿ.ಎಸ್.ಐ ಯಲ್ಲಾಲಿಂಗ ಕುನ್ನೂರ, ಎ.ಎಸ್.ಐ ಅಶೋಕ ರಾಠೋಡ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತು. ಅನಧಿಕೃತವಾಗಿ ಬಂದೂಕು ಇಟ್ಟುಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಲಗೂರದ ಪ್ರಕರಣದ ಬೆನ್ನತ್ತಿ ಹಾವೇರಿಜಿಲ್ಲೆಯ ಪೊಲೀಸರು, ಮುಂಡಗೋಡ ತಾಲ್ಲೂಕಿನ ಇಂದೂರ, ಹುನಗುಂದ ಗ್ರಾಮಗಳ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಸಂಚಾರ ನಡೆಸಿದ್ದರು. ಇದರ ಮಧ್ಯೆಯೇ ಇಂದೂರ ಗ್ರಾಮದ ಮನೆಯೊಂದರಲ್ಲಿ ಅಕ್ರಮ ಬಂದೂಕು ಸಿಕ್ಕಿರುವುದು, ಶೂಟೌಟ್ ಪ್ರಕರಣ ಬೇಧಿಸಲು ಸಹಾಯವಾಗಲಿದೆ ಎನ್ನಲಾಗುತ್ತಿದೆ.
ತಾಲ್ಲೂಕಿನಲ್ಲಿ ಅನಧಿಕೃತವಾಗಿ ಬಂದೂಕುಗಳನ್ನು ಇಟ್ಟುಕೊಂಡಿರುವ ಮಾಹಿತಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ಅವರ ಗಮನಕ್ಕೆ ಬಂದ ನಂತರ, ಪ್ರಕರಣಗಳನ್ನು ಬೇಧಿಸಲು ವಿಶೇಷ ತಂಡವನ್ನು ರಚಿಸಿದ್ದರು. ಅದರಂತೆ ಜಿಲ್ಲಾ ಪೊಲೀಸ್ ವಿಶೇಷ ತಂಡವು ನಸುಕಿನಲ್ಲಿ ಕಾರ್ಯಾಚರಣೆ ನಡೆಸಿದೆ ಎಂದು ಗೊತ್ತಾಗಿದೆ.
ಅನಧಿಕೃತ ಬಂದೂಕು ಇಟ್ಟುಕೊಂಡಿದ್ದ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತಂಡದಲ್ಲಿ ರಾಘವೇಂದ್ರ ನಾಯ್ಕ, ಭಗವಾನ್ ಗಾಂವಕರ, ಸಂತೋಷ ಕುಮಾರ, ದಯಾನಂದ ಲೋಂಡಿ, ಭೀಮಪ್ಪ ಕದರಮಂಡಲಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.