ಅಕ್ಷತಾ ಕೆ.ಸಿ.
ಹಾವೇರಿ: ಬ್ಯಾನರ್ ತೆರವುಗೊಳಿಸುವ ವಿಚಾರವಾಗಿ ಹಾವೇರಿ ನಗರಸಭೆಯ ಆವರಣಕ್ಕೆ ನುಗ್ಗಿ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಅಕ್ಷತಾ ಕೆ.ಸಿ. ಸೇರಿದಂತೆ ಮೂವರನ್ನು ಹಾವೇರಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪೌರಕಾರ್ಮಿಕರ ಮೇಲೆ ನಡೆದಿದ್ದ ಹಲ್ಲೆಯನ್ನು ಖಂಡಿಸಿ ಹಾವೇರಿ ಶಹರ ಠಾಣೆ ಎದುರು ಪ್ರತಿಭಟನೆ ನಡೆದಿತ್ತು. ಪೊಲೀಸರ ವಿರುದ್ಧವೇ ಪೌರಕಾರ್ಮಿಕರು ಆಕ್ರೋಶ ಹೊರಹಾಕಿದ್ದರು. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದರು. ಘಟನೆ ನಡೆದ ಹಲವು ದಿನಗಳ ನಂತರ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
‘ಜೂನ್ 5 ಹಾಗೂ ಜೂನ್ 7ರಂದು ಪೌರಕಾರ್ಮಿಕರ ಮೇಲೆ ನಡೆದಿದ್ದ ಹಲ್ಲೆ, ಜೀವಬೆದರಿಕೆ ಆರೋಪದಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಲಿಂಗತ್ವ ಅಲ್ಪಸಂಖ್ಯಾತರಾದ ಅಕ್ಷತಾ ಕೆ.ಸಿ., ಸಂಜು ಕೊರವರ, ಪುಟ್ನಂಜ ತಿಮ್ಮಣ್ಣ ಭಜಂತ್ರಿ ಅವರನ್ನು ಮಂಗಳವಾರ ಬಂಧಿಸಲಾಗಿದೆ. ಸದ್ಯ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ ತಿಳಿಸಿದರು.
‘ಹಾವೇರಿ ಶಹರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು. ಆರೋಪಿಗಳಾದ ಶಾಂತಪ್ಪ ಅರುಣ ಕೊರವರ, ಅರ್ಜುನ ಅರುಣಪ್ಪ ಕೊರವರ, ಪ್ರಥಮ, ಫಕ್ಕಿರೇಶ ಕೊರವರ, ಮುಕೇಶ್ ಲಕ್ಷ್ಮಣ ಪಟೇಲ್, ಪ್ರಜ್ವಲ್ ಶಿವಬಸಯ್ಯ ಅಡವಿಮಠ ಹಾಗೂ ಗಣೇಶ ಪರಶುರಾಮ ಭಜಂತ್ರಿ ಅವರನ್ನು ಜೂನ್ 7ರಂದೇ ಬಂಧಿಸಲಾಗಿತ್ತು. ಪ್ರಮುಖ ಆರೋಪಿಗಳಾದ ಅಕ್ಷತಾ ಹಾಗೂ ಇತರರು ತಲೆಮರೆಸಿಕೊಂಡಿದ್ದರು’ ಎಂದು ಹೇಳಿದರು.
ಕೇರಳಕ್ಕೆ ಹೊರಟಿದ್ದ ಅಕ್ಷತಾ: ‘ಆರೋಪಿ ಅಕ್ಷತಾ ಕೆ.ಸಿ., ಸಾಮಾಜಿಕ ಹೋರಾಟಗಾರ್ತಿ ಎಂಬುದಾಗಿ ಹೇಳಿಕೊಂಡು ಓಡಾಡುತ್ತಿದ್ದರು. ಕೆಲ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಯುವಕರನ್ನು ಜೊತೆಯಲ್ಲಿಟ್ಟುಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಪೌರಕಾರ್ಮಿಕರ ಮೇಲೆ ಹಲ್ಲೆ, ಜೀವ ಬೆದರಿಕೆ, ಜಾತಿ ನಿಂದನೆಗೆ ಸಂಬಂಧಪಟ್ಟಂತೆ ದೂರು ದಾಖಲಾಗುತ್ತಿದ್ದಂತೆ ಅಕ್ಷತಾ ಕೆ.ಸಿ. ತಲೆಮರೆಸಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಬಂಧನ ಭೀತಿಯಲ್ಲಿದ್ದ ಅಕ್ಷತಾ, ಕೇರಳಕ್ಕೆ ಹೋಗಿದ್ದರೆಂದು ಗೊತ್ತಾಗಿದೆ. ಪ್ರಕರಣದಿಂದ ಪಾರಾಗಲು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಕೇರಳದಿಂದ ತಯಾರಿ ನಡೆಸುತ್ತಿದ್ದರು. ಆದರೆ, ವಕಾಲತ್ತು ಅರ್ಜಿಗೆ ಆರೋಪಿಯ ಸಹಿ ಅಗತ್ಯವಿತ್ತು. ಹೀಗಾಗಿ, ಅಕ್ಷತಾ ಕೇರಳದಿಂದ ದಾವಣಗೆರೆಗೆ ಸೋಮವಾರ ರಾತ್ರಿ ಬಂದಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಲಾಗಿತ್ತು’ ಎಂದು ಹೇಳಿದರು.
‘ಅಕ್ಷತಾ ಅವರು ಹಲವರ ಜೊತೆ ಮೊಬೈಲ್‌ನಲ್ಲಿ ಸಂಪರ್ಕದಲ್ಲಿದ್ದರು. ಈ ಬಗ್ಗೆ ಸುಳಿವು ಸಂಗ್ರಹಿಸಿ ದಾವಣಗೆರೆಯಲ್ಲಿಯೇ ಅಕ್ಷತಾ ಅವರನ್ನು ಬಂಧಿಸಿ, ಹಾವೇರಿಗೆ ಕರೆತರಲಾಯಿತು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.