ADVERTISEMENT

ಸಮೀಕ್ಷೆ: ಮಾಹಿತಿ ನೀಡದ 500 ಕುಟುಂಬ

ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ , ಜಿಲ್ಲೆಯಲ್ಲಿ ಶೇ 94.96ರಷ್ಟು ಸಾಧನೆ | ಕಂದಾಯ–ಆರ್‌ಡಿಪಿಆರ್ ಸಿಬ್ಬಂದಿಯಿಂದ ಮುಂದುವರಿಕೆ

ಸಂತೋಷ ಜಿಗಳಿಕೊಪ್ಪ
Published 26 ಅಕ್ಟೋಬರ್ 2025, 5:58 IST
Last Updated 26 ಅಕ್ಟೋಬರ್ 2025, 5:58 IST
ಹಾವೇರಿಯ ಮನೆಯೊಂದರಲ್ಲಿ ಸಮೀಕ್ಷೆ ನಡೆಸಿದ ಗಣತಿದಾರರು, ಕುಟುಂಬದ ಮಾಲೀಕರ ಫೋಟೊ ಕ್ಲಿಕ್ಕಿಸಿಕೊಂಡರು
ಹಾವೇರಿಯ ಮನೆಯೊಂದರಲ್ಲಿ ಸಮೀಕ್ಷೆ ನಡೆಸಿದ ಗಣತಿದಾರರು, ಕುಟುಂಬದ ಮಾಲೀಕರ ಫೋಟೊ ಕ್ಲಿಕ್ಕಿಸಿಕೊಂಡರು   

ಹಾವೇರಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಮೀಕ್ಷೆಯನ್ನು ಅ.30ರವರೆಗೆ ಮುಂದೂಡಲಾಗಿದ್ದು, ಜಿಲ್ಲೆಯಲ್ಲಿ ಅ.24ರ ಅಂತ್ಯಕ್ಕೆ ಶೇ 94.96ರಷ್ಟು ಗುರಿ ಸಾಧನೆ ಮಾಡಲಾಗಿದೆ. ಉಳಿದ ಮನೆಗಳ ಸಮೀಕ್ಷೆ ಕೆಲಸವೂ ಪ್ರಗತಿಯಲ್ಲಿದೆ.

ರಾಜ್ಯದಾದ್ಯಂತ ಸೆಪ್ಟೆಂಬರ್ 22ರಿಂದ ಸಮೀಕ್ಷೆಗೆ ಚಾಲನೆ ನೀಡಲಾಗಿತ್ತು. ಆರಂಭದ ದಿನಗಳಲ್ಲಿ ಗುರಿ ಸಾಧನೆಯಲ್ಲಿ ಹಾವೇರಿ ಜಿಲ್ಲೆಯು ಮೊದಲ ಸ್ಥಾನದಲ್ಲಿತ್ತು. ಅ.7ರಂದು ಎಲ್ಲ ಮನೆಗಳ ಸಮೀಕ್ಷೆ ಪೂರ್ಣಗೊಳ್ಳುವ ನಿರೀಕ್ಷೆಯೂ ಇತ್ತು. ಆದರೆ, ಮನೆಗಳ ಗುರುತಿಸುವಿಕೆಯಲ್ಲಿ ಉಂಟಾದ ಗೊಂದಲದಿಂದಾಗಿ ಇದುವರೆಗೂ ಸಮೀಕ್ಷೆ ಪೂರ್ಣಗೊಂಡಿಲ್ಲ.

ಹೆಸ್ಕಾಂನ ವಿದ್ಯುತ್ ಮೀಟರ್ ಆಧರಿಸಿ ಜಿಲ್ಲೆಯಲ್ಲಿ 4.18 ಲಕ್ಷ ಮನೆಗಳನ್ನು ಗುರುತಿಸಲಾಗಿತ್ತು. ಆದರೆ, ಸಮೀಕ್ಷೆ ಸಂದರ್ಭದಲ್ಲಿ 4.48 ಲಕ್ಷ ಮನೆಗಳನ್ನು ಗುರುತಿಸಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಒಂದೇ ಕಟ್ಟಡದಲ್ಲಿ ಮೂಲ ಮಾಲೀಕರು– ಬಾಡಿಗೆದಾರರು ವಾಸವಿರುವುದು, ವಿಭಜಿತ ಕುಟುಂಬಗಳು... ಹೀಗೆ ನಾನಾ ಕಾರಣಗಳಿಂದಾಗಿ ಮನೆಗಳ ಸಂಖ್ಯೆ ಹೆಚ್ಚಳವಾಗಿದೆ.

ADVERTISEMENT

ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 18.49 ಲಕ್ಷ ಜನಸಂಖ್ಯೆಯಿದೆ. ಈ ಪೈಕಿ 17.50 ಲಕ್ಷ ಮಂದಿ ಮಾತ್ರ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಇನ್ನು 98,564 ಮಂದಿಯ ಸಮೀಕ್ಷೆ ನಡೆಸುವುದು ಬಾಕಿಯಿದೆ.

ಸರ್ಕಾರಿ ಪ್ರಾಥಮಿಕ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗಿತ್ತು. ಈಗ ಶಾಲೆಗಳು ಆರಂಭವಾಗಿವೆ. ಹೀಗಾಗಿ, ಎಲ್ಲ ಶಿಕ್ಷಕರನ್ನು ಸಮೀಕ್ಷೆ ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಬಿಲ್ ಕಲೆಕ್ಟರ್, ಗ್ರಾಮ ಆಡಳಿತಾಧಿಕಾರಿ, ಕಂದಾಯ ಇಲಾಖೆ ಸಿಬ್ಬಂದಿಗೆ ಸಮೀಕ್ಷೆ ಜವಾಬ್ದಾರಿ ವಹಿಸಲಾಗಿದೆ. ಅವರೆಲ್ಲರೂ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಯಾರೆಲ್ಲ ಸಮೀಕ್ಷೆಯಿಂದ ದೂರವುಳಿದಿದ್ದಾರೆ ಎಂಬುದನ್ನು ಗುರುತಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಲಾಭವಿಲ್ಲವೆಂದ ಕುಟುಂಬಗಳು: ಜಿಲ್ಲೆಯಲ್ಲಿರುವ ಮನೆಗಳಲ್ಲಿ 3,777 ಬ್ಲಾಕ್‌ಗಳಾಗಿ ವಿಂಗಡಿಸಿ ಸಮೀಕ್ಷೆಗೆ ಚಾಲನೆ ನೀಡಲಾಗಿತ್ತು. ಸಮೀಕ್ಷೆ ಜವಾಬ್ದಾರಿ ವಹಿಸಿಕೊಂಡಿದ್ದ ಶಿಕ್ಷಕರು, ಪ್ರತಿಯೊಂದು ಮನೆಗೂ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ 500 ಕುಟುಂಬಗಳು ಮಾಹಿತಿ ನೀಡಲು ನಿರಾಕರಿಸಿದ್ದು, ಈ ಬಗ್ಗೆಯೂ ಶಿಕ್ಷಕರು ದೃಢೀಕರಣ ಪತ್ರ ಸಲ್ಲಿಸಿದ್ದಾರೆ.

‘ಶಿಕ್ಷಕರು ತಮಗೆ ವಹಿಸಿದ್ದ ಮನೆಗಳಿಗೆ ಭೇಟಿ ನೀಡಿದ್ದಾರೆ. ಆದರೆ, 500 ಕುಟುಂಬಗಳು ಸಮೀಕ್ಷೆಯಿಂದ ತಮಗೆ ಲಾಭವಿಲ್ಲವೆಂದು ಹೇಳಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಲು ಸಹ 500 ಕುಟುಂಬಗಳು ಸಹಕರಿಸಿಲ್ಲ. ತಮ್ಮ ಮಾಹಿತಿ ನೀಡುವುದಿಲ್ಲವೆಂದ ವಾದಿಸಿ, ಸಮೀಕ್ಷೆದಾರರನ್ನು ವಾಪಸು ಕಳುಹಿಸಿದ್ದಾರೆ. ಮಾಹಿತಿ ನೀಡಲು ನಿರಾಕರಿಸಿದವರಿಂದಲೂ ಸಹಿ ಸಮೇತ ದೃಢೀಕರಣ ಪತ್ರ ಪಡೆಯಲಾಗಿದೆ. ಅದನ್ನೂ ಆಯೋಗಕ್ಕೆ ಸಲ್ಲಿಸಲಾಗುವುದು’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಮೀಕ್ಷೆ ಅನುಭವ ಬಿಚ್ಚಿಟ್ಟ ಗಣತಿದಾರರೊಬ್ಬರು, ‘ಕೆಲ ವ್ಯಾಪಾರಿಗಳು, ಕೆಲ ಅಧಿಕಾರಿಗಳು ಹಾಗೂ ಇತರರು, ಸಮೀಕ್ಷೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ಪೈಕಿ ಕೆಲವರ ದಾಖಲೆಗಳಲ್ಲಿಯೂ ವ್ಯತ್ಯಾಸವಿರುವುದು ಕಂಡುಬಂದಿದೆ. ಆದರೆ, ಈ ಬಗ್ಗೆ ನಾವು ಹೆಚ್ಚು ಪ್ರಶ್ನೆ ಮಾಡಿಲ್ಲ. ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದಷ್ಟೇ ದೃಢೀಕರಣ ಪತ್ರ ಪಡೆದುಕೊಂಡಿದ್ದೇವೆ’ ಎಂದರು.

‘ತಮ್ಮ ಆಸ್ತಿ, ಆದಾಯದ ಮೂಲ ಹಾಗೂ ಇತರೆ ಮಾಹಿತಿ ಬಹಿರಂಗವಾಗುವ ಭಯದಲ್ಲಿಯೂ ಕೆಲವರು, ಸಮೀಕ್ಷೆಗೆ ಸಹಕರಿಸಿಲ್ಲ’ ಎಂದು ಹೇಳಿದರು.

ಸವಣೂರಿನಲ್ಲಿ ಶೇ 96.64ರಷ್ಟು ಗುರಿ ಸಾಧನೆ: ಜಿಲ್ಲೆಯ ತಾಲ್ಲೂಕುಗಳ ಪೈಕಿ ಸಮೀಕ್ಷೆ ಗುರಿ ಸಾಧನೆಯಲ್ಲಿ ಸವಣೂರು (ಶೇ 96.64) ಮೊದಲ ಸ್ಥಾನದಲ್ಲಿದೆ. ಹಾನಗಲ್ ತಾಲ್ಲೂಕು (ಶೇ 96.34) ಎರಡನೇ ಸ್ಥಾನದಲ್ಲಿದೆ. ಶೇ 91.85ರಷ್ಟು ಸಾಧನೆ ಮಾಡಿರುವ ರಟ್ಟೀಹಳ್ಳಿ ಕೊನೆಯ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.