ADVERTISEMENT

ಬ್ಯಾಡಗಿ| ಹದಗೆಟ್ಟ ರಸ್ತೆಗಳು; ಸಂಚಾರ ಸಂಕಟ: ಅಧಿಕಾರಿಗಳ ವಿರುದ್ಧ ಜನರ ಹಿಡಿಶಾಪ

ಪ್ರಮೀಳಾ ಹುನಗುಂದ
Published 7 ಡಿಸೆಂಬರ್ 2025, 4:38 IST
Last Updated 7 ಡಿಸೆಂಬರ್ 2025, 4:38 IST
ಬ್ಯಾಡಗಿ ಪಟ್ಟಣದ ರಾಣಿ ಚನ್ನಮ್ಮ (ಸುಭಾಷ ವೃತ್ತ) ವೃತ್ತದಲ್ಲಿ ಡಾಂಬರ್ ಕಿತ್ತು ಹೋದ ರಸ್ತೆ
ಬ್ಯಾಡಗಿ ಪಟ್ಟಣದ ರಾಣಿ ಚನ್ನಮ್ಮ (ಸುಭಾಷ ವೃತ್ತ) ವೃತ್ತದಲ್ಲಿ ಡಾಂಬರ್ ಕಿತ್ತು ಹೋದ ರಸ್ತೆ   

ಬ್ಯಾಡಗಿ: ಕಿತ್ತುಹೋದ ಡಾಂಬರ್‌ ರಸ್ತೆಯಲ್ಲಿ ಹೆಚ್ಚಾದ ಗುಂಡಿಗಳು. ಮಳೆ ನೀರು ನಿಂತು ಹಾಳಾದ ರಸ್ತೆಯಲ್ಲಿ ಸಂಚರಿಸಲು ಭಯಪಡುವ ಜನರು. ಭಾರಿ ವಾಹನಗಳ ಓಡಾಟದಿಂದ ಹೆಚ್ಚಾದ ದೂಳು. ಹದಗೆಟ್ಟ ರಸ್ತೆಗಳ ದುಸ್ಥಿತಿ ಕಂಡು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ಜನರು...

‘ಏಷ್ಯಾ ಖಂಡದಲ್ಲಿಯೇ ಅತೀ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆ’ ಹೊಂದಿರುವ ಖ್ಯಾತಿ ಪಡೆದ ಬ್ಯಾಡಗಿ ಪಟ್ಟಣ, ಇತ್ತೀಚಿನ ದಿನಗಳಲ್ಲಿ ಹದಗೆಟ್ಟ ರಸ್ತೆಗಳಿಂದಾಗಿ ಅಪಖ್ಯಾತಿ ಪಡೆಯುತ್ತಿದೆ. 

ವ್ಯಾಪಾರಕ್ಕೆ ಹೇಳಿ ಮಾಡಿಸಿದ ಪಟ್ಟಣವಾಗಿದ್ದ ಬ್ಯಾಡಗಿಯಲ್ಲಿ ಈ ಹಿಂದೆ ಬೆಲ್ಲ, ಶೇಂಗಾ, ಹತ್ತಿ, ಬೆಳ್ಳುಳ್ಳಿ, ಅಡಿಕೆ ಸೇರಿದಂತೆ ಎಲ್ಲ ದಿನಸಿ ವಸ್ತುಗಳ ಮಾರಾಟ ಜೋರಾಗಿತ್ತು. ಈಗ, ಸಾರಿಗೆ ಸಂಪರ್ಕ ಸಮಸ್ಯೆ ಹಾಗೂ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ದಿನಸಿ ವಸ್ತುಗಳ ಮಾರಾಟ ಕಣ್ಮರೆಯಾಗಿದೆ. ಮೆಣಸಿನಕಾಯಿ ಮಾತ್ರ ಉಳಿದುಕೊಂಡು, ಬ್ಯಾಡಗಿಗೆ ಹೆಸರು ತಂದುಕೊಟ್ಟಿದೆ.

ADVERTISEMENT

ಇಕ್ಕಟ್ಟಾದ ರಸ್ತೆಗಳು, ಪದೇ ಪದೇ ನಿರ್ಮಿಸಿದರೂ ಕಳಪೆ ಕಾಮಗಾರಿಯಿಂದ ಬಹುಬೇಗನೇ ಹಾಳಾದ ರಸ್ತೆಗಳು. ಸ್ಥಳೀಯರು ಮಾತ್ರವಲ್ಲದೇ ಮೆಣಸಿನಕಾಯಿ ವ್ಯಾಪಾರಕ್ಕಾಗಿ ಬ್ಯಾಡಗಿಗೆ ಬರುವ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದವರು, ಸ್ಥಳೀಯ ಶಾಸಕ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. 

ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿರುವ ರಾಜ್ಯ ಹೆದ್ದಾರಿಯು ಇಂದಿಗೂ ವಿಸ್ತರಣೆಯಾಗುತ್ತಿಲ್ಲ. ಪಟ್ಟಣ ಸಂಪರ್ಕಿಸುವ ಬ್ಯಾಡಗಿ–ಕುಮ್ಮೂರು ರಸ್ತೆ, ಕಾಗಿನೆಲೆ ರಸ್ತೆ, ಕದರಮಂಡಲಗಿ ರಸ್ತೆ, ಕಾಕೋಳ ರಸ್ತೆ, ಮೋಟೆಬೆನ್ನೂರು ರಸ್ತೆ, ರಟ್ಟೀಹಳ್ಳಿ ರಸ್ತೆ, ಹಂಸಬಾವಿ ರಸ್ತೆಗಳು ಭಾಗಶಃ ಹಾಳಾಗಿವೆ. ಎಲ್ಲೆಂದರಲ್ಲಿ ತಗ್ಗುಗಳು ಬಿದ್ದು, ಸಂಚಾರ ಸಂಕಟ ಎದುರಾಗಿದೆ.

ಗುಮ್ಮನಹಳ್ಳಿ, ಅಗರಗಟ್ಟಿ, ಮಾಸಣಗಿ, ಕುಮ್ಮೂರು ಗ್ರಾಮಗಳನ್ನು ಸಂಪರ್ಕಿಸುವ, ತೆರೆದಹಳ್ಳಿ, ಮಲ್ಲೂರು, ಹೆಡಿಗ್ಗೊಂಡ, ಕಾಗಿನೆಲೆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ತೀರಾ ಹದಗೆಟ್ಟಿವೆ.  ಈ ರಸ್ತೆಗಳ ಬದಿಯಲ್ಲಿ 30ಕ್ಕೂ ಹೆಚ್ಚು ಕೋಲ್ಡ್‌ ಸ್ಟೋರೇಜ್‌, ಖಾರದಪುರಿ ತಯಾರಿಸುವ ಬೃಹತ್‌ ಕೈಗಾರಿಕಾ ಘಟಕಗಳಿವೆ.

ನಿತ್ಯ ಸಾವಿರಾರು ವಾಹನಗಳ ಓಡಾಟ ನಡೆಯುತ್ತಿದ್ದರೂ ರಸ್ತೆ ದುರಸ್ತಿಗೆ ಸರ್ಕಾರ ಮಂದಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಮುಖ್ಯ ರಸ್ತೆ ಕೆಲಸವೂ ವಿಳಂಬ: ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ಹಾದು ಹೋಗಿರುವ ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಗೆ 14 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ, ಇಂದಿಗೂ ರಸ್ತೆ ವಿಸ್ತರಣೆ ವಿಳಂಬವಾಗಿದೆ.

ಜೂನ್‌ ತಿಂಗಳಲ್ಲಿ ನಡೆದಿದ್ದ ಜನರ ಹೋರಾಟದಿಂದಾಗಿ, ಸ್ಥಳೀಯ ಆಸ್ತಿ ಮಾಲೀಕರು ರಸ್ತೆ ಮಧ್ಯದಿಂದ ಎರಡೂ ಬದಿಗೂ ತಲಾ 33 ಅಡಿ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿ ನ್ಯಾಯಾಲಯದಲ್ಲಿದ್ದ ಮೊಕದ್ದಮೆ ವಾಪಸು ಪಡೆಯುವುದಾಗಿ ಹೇಳಿದ್ದರು. ಆದರೆ, ಸೆಟ್‌ ಬ್ಯಾಕ್‌ಗೆ 20 ಮೀಟರ್ ಜಾಗ ಬಿಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿರುವುದರಿಂದ, ಭೂ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿದೆ.

ಬ್ಯಾಡಗಿ ಪಟ್ಟಣದಲ್ಲಿ ಮಳೆಯಾದ ಸಂದರ್ಭದಲ್ಲಿ ಹದಗೆಟ್ಟ ರಸ್ತೆ 
ಗುಮ್ಮನಹಳ್ಳಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು
ಬ್ಯಾಡಗಿಯ ಬಹುತೇಕ ರಸ್ತೆಗಳು ಹದಗೆಟ್ಟು ಗುಂಡಿ ಬಿದ್ದಿವೆ. ಅಲ್ಲಲ್ಲಿ ಜಲ್ಲಿಕಲ್ಲು ಹಾಕಿದರೂ ಬೇಗನೇ ಕಿತ್ತು ಹೋಗುತ್ತಿವೆ. ಇಂಥ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ
ರಾಮಣ್ಣ ಬ್ಯಾಡಗಿ ನಿವಾಸಿ

‘ಸಂಧಾನ ವಿಫಲ: ಕೈ ಚೆಲ್ಲಿದ ಶಾಸಕ‘

ಬ್ಯಾಡಗಿ ಮುಖ್ಯರಸ್ತೆ ವಿಸ್ತರಣೆ ವಿಚಾರವಾಗಿ ಸ್ಥಳೀಯ ಆಸ್ತಿ ಮಾಲೀಕರ ಜೊತೆ ಶಾಸಕ ಬಸವರಾಜ ಶಿವಣ್ಣನವರ ಹಲವು ಬಾರಿ ಸಂಧಾನ ನಡೆಸಿದ್ದಾರೆ. ಆದರೆ ಸಂಧಾನ ಸಫಲವಾಗಿಲ್ಲ. ಸಫಲವಾದರೂ ಕಾಲ ಕಾಲಕ್ಕೆ ಬರುವ ಹೊಸ ನಿಯಮಗಳಿಂದಾಗಿ ವಿಫಲವಾಗುತ್ತಿವೆ’ ಎಂದು ಸ್ಥಳೀಯರು ಹೇಳಿದರು. ‘ಆಸ್ತಿ ಮಾಲೀಕರು ಹಾಗೂ ಸರ್ಕಾರದ ನಡುವಿನ ಗೊಂದಲದಿಂದಾಗಿ ರಸ್ತೆ ವಿಸ್ತರಣೆಗೆ ಗ್ರಹಣ ಹಿಡಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಅದರ ಶಾಸಕರಾಗಿರುವ ಬಸವರಾಜ ಶಿವಣ್ಣನವರ ಮುಖ್ಯರಸ್ತೆ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ. ಇವರ ಇಚ್ಛಾಶಕ್ತಿ ಕೊರತೆಯಿಂದಾಗಿ ಮುಖ್ಯರಸ್ತೆ ವಿಸ್ತರಣೆಗೆ ಇಂದಿಗೂ ಪರಿಹಾರ ಸಿಗುತ್ತಿಲ್ಲ. ಶಾಸಕರೂ ಈಗ ಕೈ ಚೆಲ್ಲಿ ಕುಳಿತಂತೆ ಕಾಣುತ್ತಿದೆ’ ಎಂದರು.

‘ಹೆಚ್ಚಾದ ದೂಳು; ರೋಗ ಭೀತಿ’

‘ಬ್ಯಾಡಗಿಯ ಹಲವು ರಸ್ತೆಗಳಲ್ಲಿ ಭಾರಿ ವಾಹನಗಳು ಓಡಾಡುತ್ತಿವೆ. ರಸ್ತೆಯೂ ಹಾಳಾಗಿದ್ದರಿಂದ ದೂಳು ಹೆಚ್ಚಾಗಿ ಏಳುತ್ತಿವೆ. ಇದರಿಂದಾಗಿ ಸ್ಥಳೀಯ ಜನರು ರೋಗ ಭೀತಿ ಎದುರಿಸುತ್ತಿದ್ದಾರೆ’ ಎಂದು ಮಾಜಿ ಸೈನಿಕ ಎಂ.ಡಿ. ಚಿಕ್ಕಣ್ಣನವರ ಹೇಳಿದರು. ‘ನಿತ್ಯವೂ ಅಪಾರ ಪ್ರಮಾಣದ ದೂಳು ಬರುತ್ತಿದೆ. ಪಾದಚಾರಿಗಳು ರಸ್ತೆ ಅಕ್ಕ–ಪಕ್ಕದ ಮಳಿಗೆ ಮಾಲೀಕರು ಗ್ರಾಹಕರಿಗೆ ದೂಳಿನ ಮಜ್ಜನವಾಗುತ್ತಿದೆ. ಅದರಿಂದ ಅಸ್ತಮಾ ಹಾಗೂ ಟಿ.ಬಿ.ಯಂಥ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಹೀಗಾಗಿ ನಿತ್ಯ ಮಾಸ್ಕ್‌ ಧರಿಸಿಯೇ ಓಡಾಡಬೇಕಾದ ಸ್ಥಿತಿಯಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.