ADVERTISEMENT

ಹಾವೇರಿ: ಕ್ಯಾಂಟೀನ್‌ಗಳಲ್ಲಿ ಗುಟ್ಕಾ, ಸಿಗರೇಟ್‌ ನಿಷೇಧಿಸಿ

ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಖಡಕ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 12:51 IST
Last Updated 20 ನವೆಂಬರ್ 2020, 12:51 IST
ಹಾವೇರಿಯಲ್ಲಿ ತಂಬಾಕು ನಿಯಂತ್ರಣ ಜಾಗೃತಿಗಾಗಿ ನಡೆಸಿದ ಲೇಖನ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಪ್ರಮಾಣಪತ್ರಗಳನ್ನು ಶುಕ್ರವಾರ ವಿತರಿಸಿದರು
ಹಾವೇರಿಯಲ್ಲಿ ತಂಬಾಕು ನಿಯಂತ್ರಣ ಜಾಗೃತಿಗಾಗಿ ನಡೆಸಿದ ಲೇಖನ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಪ್ರಮಾಣಪತ್ರಗಳನ್ನು ಶುಕ್ರವಾರ ವಿತರಿಸಿದರು   

ಹಾವೇರಿ: ಕಾಲೇಜುಗಳ ಕ್ಯಾಂಟೀನ್‌ಗಳಲ್ಲಿಗುಟ್ಕಾ ಹಾಗೂ ಸಿಗರೇಟ್ ಸೇವನೆಯನ್ನು ತಕ್ಷಣದಿಂದಲೇ ನಿಷೇಧಿಸಲು ಸುತ್ತೋಲೆ ಹೊರಡಿಸಬೇಕು. ಕ್ಯಾಂಟೀನ್‌, ಹೋಟೆಲ್, ಅಂಗಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಬೀಡಿ, ಸಿಗರೇಟ್ ಸೇವನೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಿ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎನ್‍ಫೋರ್ಸ್‍ಮೆಂಟ್ ಅಧಿಕಾರಿಗಳು, ತಂಬಾಕು ನಿಯಂತ್ರಣಕ್ಕೆ ಕ್ರಮವಹಿಸದೇ, ದಂಡ ಹಾಕದೇ ಸುಮ್ಮನಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಬೇಕು. ವಾರದೊಳಗೆ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ ತಂಬಾಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತಂತೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ADVERTISEMENT

ಪ್ಯಾಕೇಟ್ ಹೊರತುಪಡಿಸಿ ಒಂದು-ಎರಡರಂತೆ ಬಿಡಿಯಾಗಿ ಸಿಗರೇಟ್ ಮಾರಾಟಕ್ಕೆ ಅವಕಾಶವಿರುವುದಿಲ್ಲ. ತಂಬಾಕು ಹಾಗೂ ಸಿಗರೇಟ್ ಕಂಪನಿಗಳ ಜಾಹೀರಾತುಗಳಲ್ಲಿ ಕೋಟ್ಪಾ ಕಾಯ್ದೆಯಂತೆ ಕ್ರಮವಹಿಸಬೇಕು. ಗುಟ್ಕಾ ಮತ್ತು ಸಿಗರೇಟ್ ಉತ್ಪನ್ನಗಳ ಮೇಲೆ ನಿಗದಿತ ಪ್ರಮಾಣದಲ್ಲಿ ಚಿತ್ರಹಾಕಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಕ್ರಮವಹಿಸಲು ಸೂಚನೆ:

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಗಳ ಕಾಂಪ್ಲೆಕ್ಸ್‌ಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಸುತ್ತೋಲೆ ಹೊರಡಿಸಿದರೂ ಸವಣೂರು, ಹಾನಗಲ್ ಹಾಗೂ ಹಿರೇಕೆರೂರು ಬಸ್ ನಿಲ್ದಾಣಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂಬ ಅಧಿಕಾರಿಗಳ ಮಾಹಿತಿಯ ಹಿನ್ನೆಲೆಯಲ್ಲಿ ಈ ಕುರಿತಂತೆ ತಕ್ಷಣವೇ ಪರಿಶೀಲಿಸಿ ಮಾರಾಟ ಮಾಡದಂತೆ ಕ್ರಮವಹಿಸಲು ರಸ್ತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಾಗೃತಿ ಮೂಡಿಸಿ:

ತಂಬಾಕು ಮುಕ್ತ ಕಚೇರಿ, ಶಾಲಾ - ಕಾಲೇಜು ಆವರಣ ಎಂದು ಘೋಷಿಸುವ ಫಲಕಗಳನ್ನು ಕಡ್ಡಾಯವಾಗಿ ಶಿಕ್ಷಣ ಸಂಸ್ಥೆಗಳ ಮುಖ್ಯ ದ್ವಾರದಲ್ಲಿ ಪ್ರದರ್ಶನ ಮಾಡಬೇಕು. ತಂಬಾಕು ದುಷ್ಪರಿಣಾಮಗಳ ಕುರಿತ ಹಾಗೂ ಕೋಟ್ಪಾ 2003ರ ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸುವುದು, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

ಕೋಟ್ಪಾ ಕಾಯ್ದೆಯಡಿ ವಸೂಲಿಯಾದ ದಂಡದ ಹಣದಲ್ಲಿ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಪ್ರೊಜೆಕ್ಟರ್ ಖರೀದಿ ಹಾಗೂ ಜಿಲ್ಲಾ ತಂಬಾಕು ವ್ಯಸನಮುಕ್ತ ಕೇಂದ್ರಕ್ಕೆ ಸ್ಪೈರೋಮೀಟರ್ ಖರೀದಿಗೆ ಸಮ್ಮತಿ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಡಾ.ನಿಲೇಶ್, ಡಾ.ಪ್ರಭಾಕರ, ಡಾ.ಜಯಾನಂದ, ಡಾ.ದೇವರಾಜ, ಡಾ.ಜಗದೀಶ್ ಇದ್ದರು.

ತಂಬಾಕು ಪ್ರಕರಣ: ₹2.20 ಲಕ್ಷ ದಂಡ!

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಡಾ.ಸಂತೋಷ್ ಮಾಹಿತಿ ನೀಡಿ, ತಂಬಾಕು ನಿಯಂತ್ರಣದಡಿ ಹಿಂದಿನ ವರ್ಷ ₹1.60 ಲಕ್ಷ ವಸೂಲಿಯಾಗಿದೆ. ಒಟ್ಟಾರೆ ಇದುವರೆಗೂ ₹2.20 ಲಕ್ಷ ದಂಡ ವಸೂಲಿಯಾಗಿದೆ.ಈ ವರ್ಷ ₹68 ಸಾವಿರ ದಂಡ ವಸೂಲಿಯಾಗಿದೆ. 34 ದಾಳಿ ಮಾಡಲಾಗಿದ್ದು, 536 ಪ್ರಕರಣಗಳನ್ನು ದಾಖಲಿಸಲಾಗಿದೆ. 299 ವ್ಯಸನಿಗಳನ್ನು ಆಪ್ತ ಸಮಾಲೋಚನೆ ನಡೆಸಲಾಗಿದೆ. 186 ನಿಕೋಟಿನ್ ಗಮ್ಸ್‌ ನೀಡಿ ವ್ಯಸನ ಮುಕ್ತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸ್ಪರ್ಧಾ ವಿಜೇತರು:

ತಂಬಾಕು ನಿಯಂತ್ರಣ ಜಾಗೃತಿಗಾಗಿ ನಡೆಸಿದ ಲೇಖನ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವೀರೇಶ ಸಂಕಿನಮಠ, ರೇಣುಕಾ ಚಲವಾದಿ, ಡಾ.ಎಲ್.ಈಶ್ವರಪ್ಪ ಅವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.