ADVERTISEMENT

ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧಿಸಿ

ಮುಖ್ಯಮಂತ್ರಿಗೆ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಮೇ 2022, 13:52 IST
Last Updated 9 ಮೇ 2022, 13:52 IST
ಸಲೀಂ ಅಹಮದ್‌ 
ಸಲೀಂ ಅಹಮದ್‌    

ಹಾವೇರಿ: ‘ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಮತೀಯ ಶಕ್ತಿಗಳು ಸಮಾಜವನ್ನು ಒಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಹಳಿ ತಪ್ಪಿದೆ. ಸಂತ ಶಿಶುನಾಳ ಷರೀಫ ಮತ್ತು ಗುರುಗೋವಿಂದ ಭಟ್ಟರ ಸಾಮರಸ್ಯದ ನೆಲದಿಂದ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಮಾಜದ ಸಾಮರಸ್ಯ ಹಾಳು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಮತೀಯ ಗಲಭೆಗಳಿಗೆ ಆಸ್ಪದ ನೀಡಬಾರದು’ ಎಂದು ಆಗ್ರಹಿಸಿದರು.

‘ಆಪರೇಷನ್‌ ಕಮಲ’ ಎಂಬ ಭ್ರಷ್ಟಾಚಾರದಿಂದ ಉದಯವಾದ ಬಿಜೆಪಿ, ಅಕ್ರಮ–ಅವ್ಯವಹಾರಗಳಲ್ಲಿ ಮುಳುಗಿದೆ. ರಾಜ್ಯದಲ್ಲಿ ಜನರ ಅಭಿವೃದ್ಧಿ ಬದಲು ಭ್ರಷ್ಟಾಚಾರದ ಅಭಿವೃದ್ಧಿಯಾಗುತ್ತಿದೆ. ಸಚಿವ ಸ್ಥಾನದಿಂದ ಸರ್ಕಾರಿ ಹುದ್ದೆಗಳವರೆಗೆ ಎಲ್ಲದಕ್ಕೂ ಹಣ ಕೊಟ್ಟೇ ಸ್ಥಾನ ಗಿಟ್ಟಿಸಿಕೊಳ್ಳಬೇಕಿದೆ. ದೇಶದಲ್ಲಿ ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಬಿಜೆಪಿ ಸರ್ಕಾರ ಲೂಟಿಕೋರರ ಸರ್ಕಾರವಾಗಿದೆ’ ಎಂದು ಕಿಡಿಕಾರಿದರು.

ADVERTISEMENT

ತನಿಖೆಗೆ ಸಿದ್ಧ:

ಅರ್ಕಾವತಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ತನಿಖೆಯಾದರೆ ಸಿದ್ದರಾಮಯ್ಯ ಶಾಶ್ವತವಾಗಿ ಜೈಲಿಗೆ ಹೋಗಬೇಕಾಗುತ್ತದೆ ಎಂಬ ನಳೀನ್‌ಕುಮಾರ್‌ ಕಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕಟೀಲ್‌ ಅವರೇ ಗಾಳಿಯಲ್ಲಿ ಗುಂಡು ಹಾರಿಸಬೇಡಿ, ಎಲ್ಲ ರೀತಿಯ ತನಿಖೆಗೂ ನಾವು ಸಿದ್ಧವಿದ್ದೇವೆ. ಅಧಿಕಾರಕ್ಕೆ ಬಂದ 4 ವರ್ಷಗಳ ನಂತರ ನಿಮಗೆ ಅರ್ಕಾವತಿ ಪ್ರಕರಣ ನೆನಪಾಯ್ತಾ? ನಿಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಇಂಥ ಆಧಾರರಹಿತ ಹೇಳಿಕೆ ನೀಡುತ್ತಿದ್ದೀರಿ’ ಎಂದು ಸಲೀಂ ಅಹಮದ್‌ ತಿರುಗೇಟು ನೀಡಿದರು.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ:

ನಮ್ಮಲ್ಲಿ ಸಿಎಂ ಯಾರಾಗಬೇಕು ಎಂಬ ಬಗ್ಗೆ ಯಾವುದೇ ಗೊಂದಲವಿಲ್ಲ, ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಸಿಎಂ ಯಾರು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕರ್ನಾಟಕ ರಾಜ್ಯ ಮುಂಚೂಣಿ:

‘ಕಾಂಗ್ರೆಸ್‌ ನಡೆಸಿದ ಡಿಜಿಟಲ್‌ ಸದಸ್ಯತ್ವದಲ್ಲಿ ರಾಜ್ಯದಲ್ಲಿ 76 ಲಕ್ಷ ಜನರು ಸದಸ್ಯತ್ವ ಪಡೆಯುವ ಮೂಲಕ ದೇಶದಲ್ಲೇ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ 1.60 ಲಕ್ಷ ಜನರು ಸದಸ್ಯತ್ವ ಪಡೆದಿದ್ದಾರೆ. ಮೊದಲ ಸುತ್ತಿನ ಡಿಜಿಟಲ್‌ ಸದಸ್ಯತ್ವ ಅಭಿಯಾನ ಏಪ್ರಿಲ್‌ 30ಕ್ಕೆ ಮುಕ್ತಾಯವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌ ಹೇಳಿದರು.

‘ಎರಡನೇ ಹಂತದ ಸದಸ್ಯತ್ವ ಅಭಿಯಾನ ಆರಂಭಗೊಂಡಿದೆ. ಮೇ 28ರೊಳಗೆ ಜಿಲ್ಲೆಯ 1400ಕ್ಕೂ ಅಧಿಕ ಬೂತ್‌ ಸಮಿತಿ ರಚಿಸಲು ವರಿಷ್ಠರಿಂದ ನಿರ್ದೇಶನ ಬಂದಿದೆ. ಬೂತ್‌ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿಯ ಆಯ್ಕೆ ಪ್ರಕ್ರಿಯೆ ನಡೆಯಲಿದೆ’ ಎಂದರು.

ಚುನಾವಣಾ ಪ್ರಕ್ರಿಯೆ ಶುರುವಾಗಿದೆ. ಬೂತ್‌ ಸಮಿತಿ ನಂತರ ಬ್ಲಾಕ್‌ ಸಮಿತಿ, ಕೆಪಿಸಿಸಿ ಮತ್ತು ಎಐಸಿಸಿ ಚುನಾವಣೆಗಳು ನಡೆಯಲಿವೆ. ಪಕ್ಷದ ಸಿದ್ಧಾಂತ ಮತ್ತು ಬಿಜೆಪಿ ಸರ್ಕಾರಗಳ ಆಡಳಿತ ವೈಫಲ್ಯವನ್ನು ಜನರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸುತ್ತೇವೆ. ಮುಂದಿನ ಒಂದು ವರ್ಷ ಪಕ್ಷ ಸಂಘಟನೆ ಮತ್ತು ಹೋರಾಟಕ್ಕೆ ಒತ್ತು ನೀಡುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ, ಎಸ್‌.ಆರ್‌.ಪಾಟೀಲ, ಎಸ್‌.ಎಫ್‌.ಎನ್‌.ಗಾಜಿಗೌಡ್ರ, ಎಂ.ಎಂ.ಮೈದೂರ, ಶ್ರೀನಿವಾಸ ಹಳ್ಳಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.