ಗುತ್ತಲ: ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ಡ್ರಾ ಮಾಡಿದ್ದ ₹2 ಲಕ್ಷ ಹಣವನ್ನು ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸೋಮವಾರ (ಜುಲೈ 21) ನಡೆದಿರುವ ಕಳ್ಳತನ ಸಂಬಂಧ ನಿವೃತ್ತ ಶಿಕ್ಷಕ ಫಾಲಾಕ್ಷಸ್ವಾಮಿ ನಿಜಗುಣಯ್ಯ ನೆಗಳೂರುಮಠ (61) ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಫಾಲಾಕ್ಷಸ್ವಾಮಿ ಅವರು ಬ್ಯಾಂಕ್ ಶಾಖೆಯಲ್ಲಿ ₹2 ಲಕ್ಷ ಡ್ರಾ ಮಾಡಿಕೊಂಡು, ಹೊರಗೆ ಬಂದಿದ್ದರು. ಬ್ಯಾಂಕ್ ಮುಂಭಾಗದಲ್ಲಿ ನಿಲ್ಲಿಸಿದ್ದ ತಮ್ಮ ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ಹಣದ ಚೀಲ ಇರಿಸಿದ್ದರು. ನಂತರ, ಬೈಕ್ ಹತ್ತಿ ಸ್ಟಾರ್ಟ್ ಮಾಡುವ ಸಂದರ್ಭದಲ್ಲಿ ಪುನಃ ಸೈಡ್ ಬ್ಯಾಗ್ ನೋಡಿದ್ದರು. ಚೀಲ ಬಿಚ್ಚಿರುವಂತೆ ಕಾಣಿಸಿತ್ತು.’
‘ಗಾಬರಿಗೊಂಡ ದೂರುದಾರ, ಬೈಕ್‌ನಿಂದ ಇಳಿದು ಪುನಃ ಬ್ಯಾಗ್ ಪರಿಶೀಲಿಸಿದ್ದರು. ಅವಾಗಲೇ, ಹಣ ಕಳ್ಳತನವಾಗಿರುವುದು ಗೊತ್ತಾಗಿದೆ’ ಎಂದು ತಿಳಿಸಿದರು.
‘ದೂರುದಾರ ಹಣ ಡ್ರಾ ಮಾಡಿಕೊಂಡಿರುವ ವಿಷಯ ತಿಳಿದುಕೊಂಡೇ ಆರೋಪಿಗಳು ಕಳ್ಳತನ ಮಾಡಿರುವ ಅನುಮಾನವಿದೆ’ ಎಂದರು.
ಅಪಘಾತ: ಬೈಕ್ ಸವಾರ ಸಾವು
ಮುಂಡರಗಿ: ಅತಿ ವೇಗದಿಂದ ಚಲಿಸುತ್ತಿದ್ದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತ ವ್ಯಕ್ತಿ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ದ್ಯಾಮನಕೊಪ್ಪ ಗ್ರಾಮದ ಗಣೇಶ ಸೋಮಪ್ಪ ನ್ಯಾರಲಘಂಟಿ ಎಂದು ತಿಳಿದುಬಂದಿದೆ. ಎಲ್ಲರೂ ಬೈಕ್‌ನಲ್ಲಿ ಹಾವೇರಿಯಿಂದ ಕೊಪ್ಪಳಕ್ಕೆ ಹೊರಟಿದ್ದರು.
ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಅತಿಯಾದ ವೇಗದಿಂದ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ನಾಲ್ಕು ವರ್ಷದ ಮಗು ಸೇರಿದಂತೆ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಮೂವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.