ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ನೀಗಿಸುವಂತೆ ಆಗ್ರಹಿಸಿ ಸಾರ್ವಜನಿಕರು ಆಸ್ಪತ್ರೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ, ತಾಲ್ಲೂಕು ಆರೋಗ್ಯಾಧಿಕಾರಿ ಸತೀಶ ಅವರಿಗೆ ಮನವಿ ಸಲ್ಲಿಸಿದರು.
‘ಸುತ್ತಲಿನ ಗ್ರಾಮಗಳ ಜನರು ಚಿಕಿತ್ಸೆಗಾಗಿ ಇಲ್ಲಿನ ಆಸ್ಪತ್ರೆ ಅವಲಂಬಿಸಿದ್ದು, ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಸಮರ್ಪಕವಾಗಿ ಚಿಕಿತ್ಸೆ ಸಿಗುತ್ತಿಲ್ಲ. 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳೂ ಇಲ್ಲ. ಇದರಿಂದ ರೋಗಿಗಳು ಪರದಾಡುವಂತಾಗಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಇಲ್ಲಿಗೆ ಬರುವ ವೈದ್ಯರನ್ನು ಬೇರೆಡೆ ವರ್ಗಾವಣೆ ಮಾಡಲಾಗುತ್ತಿದೆ. ಮುಖ್ಯವೈದ್ಯಾಧಿಕಾರಿ ಮನೋಜ ನಾಯಕ್ ಅವರ ವರ್ಗಾವಣೆ ರದ್ದುಪಡಿಸಬೇಕು’ ಎಂದೂ ಆಗ್ರಹಿಸಿದರು.
‘ಈ ಆಸ್ಪತ್ರೆಗೆ ಬರುವ ರೋಗಿಗಳನ್ನು ಶಿಗ್ಗಾವಿ, ಹುಬ್ಬಳ್ಳಿ ಮತ್ತು ಹಾವೇರಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಇಷ್ಟೆಲ್ಲ ಅವ್ಯವಸ್ಥೆಗಳ ನಡುವೆಯೂ ಮೂರು ವರ್ಷಗಳಿಂದ ‘ಉತ್ತಮ ಆಸ್ಪತ್ರೆ’ ಪ್ರಶಸ್ತಿ ಪಡೆಯುತ್ತಿದೆ. ಇನ್ನಾದರೂ, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದರ ಜತೆಗೆ, ರೋಗಿಗಳಿಗೆ ಸಕಲ ಸೌಲಭ್ಯ ದೊರೆಯುವಂತಾಗಬೇಕು’ ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಸತೀಶ ಅವರು, ‘ಜಿಲ್ಲಾ ಆರೋಗ್ಯಾಧಿಕಾರಿ ಜತೆ ಚರ್ಚಿಸಿ ವೈದ್ಯರ ನೇಮಕಾತಿ ಸೇರಿದಂತೆ ಸಕಲ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಬಂಕಾಪುರ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.