ADVERTISEMENT

ಹಿರೇಕೆರೂರ | ಬನ್ನಿಕೋಡ ಬಡಾವಣೆಯಲ್ಲಿ ಸಮಸ್ಯೆಗಳ ಬವಣೆ

*ಶುದ್ಧ ನೀರಿನ ಘಟಕ ಬಂದ್‌ *ರಸ್ತೆ, ಚರಂಡಿ ದುರಸ್ತಿಗೆ ನಿವಾಸಿಗಳ ಆಗ್ರಹ

ಕೆ.ಎಚ್.ನಾಯಕ
Published 29 ಜೂನ್ 2021, 19:30 IST
Last Updated 29 ಜೂನ್ 2021, 19:30 IST
ಹಿರೇಕೆರೂರಿನ ಬಿ.ಎಚ್.ಬನ್ನಿಕೋಡ ಬಡಾವಣೆಯಲ್ಲಿ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ
ಹಿರೇಕೆರೂರಿನ ಬಿ.ಎಚ್.ಬನ್ನಿಕೋಡ ಬಡಾವಣೆಯಲ್ಲಿ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ   

ಹಿರೇಕೆರೂರ: ಪಟ್ಟಣದ ಹೊರವಲಯದಲ್ಲಿ 2004ರಲ್ಲಿ ಅಸ್ತಿತ್ವಕ್ಕೆ ಬಂದ ಬಿ.ಎಚ್. ಬನ್ನಿಕೋಡ ಬಡಾವಣೆಯಲ್ಲಿ ಮೂಲಸೌಲಭ್ಯಗಳ ಕೊರತೆಯಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅಧಿಕಾರದ ಅವಧಿಯಲ್ಲಿ ಪಟ್ಟಣದ ದುರ್ಬಲ ವರ್ಗದವರು, ಬಡವರು, ನಿರ್ಗತಿಕರಿಗೆ ಈ ಬಡಾವಣೆಯಲ್ಲಿ 467 ನಿವೇಶಗಳು ಹಂಚಿಕೆಯಾಗಿವೆ. ಅದರಲ್ಲಿ ಸುಮಾರು 200 ಮನೆಗಳನ್ನು ನಿರ್ಮಿತಿ ಕೇಂದ್ರದಿಂದ ನಿರ್ಮಿಸಿ ವಸತಿ ರಹಿತರಿಗೆ ಹಂಚಲಾಗಿದೆ.

ನೂರಾರು ಬಡ ಕುಟುಂಬಗಳು ವಾಸಿಸುವ ಇಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಭವನವನ್ನು ಭವ್ಯವಾಗಿ ನಿರ್ಮಿಸಲಾಗಿದೆ. ಎರಡು ಅಂತಸ್ತಿನ ಉರ್ದು ಪ್ರಾಥಮಿಕ ಶಾಲೆ ಹಾಗೂ ಕನ್ನಡ ಪ್ರಾಥಮಿಕ ಶಾಲೆಗಳ ಕಟ್ಟಡಗಳನ್ನು ನಿರ್ಮಿಸಲಾಗಿದೆ. ನೀರಾವರಿ ನಿಗಮದಿಂದ ತಲಾ ₹50 ಲಕ್ಷ ವೆಚ್ಚದಲ್ಲಿ ಸೇವಾಲಾಲ್‌ ಭವನ, ಗಂಗಾಮತ ಭವನ ಹಾಗೂ ಉಪ್ಪಾರ ಭವನ ನಿರ್ಮಾಣಕ್ಕೆ ಒಟ್ಟು ₹1.50 ಕೋಟಿ ವೆಚ್ಚದ ಕಾಮಗಾರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಅವರು ಈಚೆಗೆ ಭೂಮಿಪೂಜೆ ನೆರವೇರಿಸಿದ್ದಾರೆ.

ADVERTISEMENT

ಆದರೆ, ಇಲ್ಲಿ ಮುಖ್ಯ ರಸ್ತೆಯನ್ನು ಹೊರತುಪಡಿಸಿ ಉಳಿದ ರಸ್ತೆಗಳು ಹಾಳಾಗಿವೆ. ಉಭಯ ಬದಿಗಳಲ್ಲಿ ಚರಂಡಿಗಳನ್ನು ನಿರ್ಮಿಸಿಲ್ಲ, ಸಾರ್ವಜನಿಕ ಬಳಕೆಗೆ ಬಿಟ್ಟಿರುವ ಜಾಗದಲ್ಲಿ ಕಸ ಬೆಳೆದು ನಿಂತಿದೆ.

ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ 2018-19ನೇ ಸಾಲಿನಲ್ಲಿ ₹7 ಲಕ್ಷ ವೆಚ್ಚ ಮಾಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಸುಮಾರು 3 ತಿಂಗಳು ಕಾರ್ಯನಿರ್ವಹಿಸಿ ಸ್ಥಗಿತಗೊಂಡಿದೆ.

‘ಇಲ್ಲಿ ಬಡವರೇ ಇರುವುದರಿಂದ ಶುದ್ಧ ನೀರು ಕೊಂಡುಕೊಳ್ಳಲು ಆಗುತ್ತಿಲ್ಲ. ದಿನಕ್ಕೆ ಮೂರ್ನಾಲ್ಕು ಕ್ಯಾನ್‌ ಮಾತ್ರ ತೆಗೆದುಕೊಂಡು ಹೋಗುತ್ತಿದ್ದರು. ಹಾಗಾಗಿ ವಿದ್ಯುತ್‌ ವೆಚ್ಚವೇ ಹೆಚ್ಚಾಗುತ್ತಿದೆ ಎಂಬ ಸಬೂಬು ಹೇಳಿ ನೀರಿನ ಘಟಕವನ್ನು ಪಟ್ಟಣ ಪಂಚಾಯ್ತಿಯವರು ಸ್ಥಗಿತಗೊಳಿಸಿದ್ದಾರೆ’ ಎಂದು ನಿವಾಸಿ ಭರಮಪ್ಪ ಕೆಂಚಿಕೊಪ್ಪ ತಿಳಿಸಿದರು.

‘ಸಮರ್ಪಕ ರಸ್ತೆ, ಚರಂಡಿ ನಿರ್ಮಿಸದೇ ಇರುವುದರಿಂದ ರಾತ್ರಿ ವೇಳೆ ವಿಷ ಜಂತುಗಳು ಓಡಾಡುತ್ತವೆ. ರಸ್ತೆ ಬದಿ ಕಸ ಬೆಳೆಯುತ್ತದೆ. ಇದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಪಟ್ಟಣ ಪಂಚಾಯ್ತಿಯವರು ರಸ್ತೆ ಹಾಗೂ ಚರಂಡಿ ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಇಲ್ಲಿನ ನಿವಾಸಿಗಳಾದ ಹನುಮಂತಪ್ಪ ತಿಪ್ಪಣ್ಣನವರ ಹಾಗೂ ಸುರೇಶ ಜಾವಳ್ಳಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.