
ಶಿಗ್ಗಾವಿ: ಬದುಕು ಮತ್ತು ಬರವಣಿಗೆ ಒಂದಾಗಿರಬೇಕು. ಬದುಕಿಗೆ ಅರ್ಥ ಬರಬೇಕಿದ್ದರೆ, ಬದ್ಧತೆಯ ಬದುಕು ನಮ್ಮದಾಗಬೇಕು. ಈ ನಿಟ್ಟಿನಲ್ಲಿ ನುಡಿದಂತೆ ನಡೆದವರು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ತಾಲ್ಲೂಕಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪ ಅವರು, 100ಕ್ಕೂ ಹೆಚ್ಚು ತಳ ಸಮುದಾಯಗಳ ಕುರಿತು ಅಧ್ಯಯನ ಮಾಡಿಸಿದ್ದರು. ಈ ಮೂಲಕ ಅಸ್ತಿತ್ವವೇ ಅರಿಯದ ತಳ ಸಮುದಾಯಗಳ ಬದುಕಿನ ಅನಾವರಣ ಮಾಡಿದ್ದರು ಎಂದರು.
ವಹಿಸಿಕೊಂಡ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸಮಾನತೆ, ಸಹಬಾಳ್ವೆ, ಸಾಮರಸ್ಯದ ಬದುಕಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಕೀರ್ತಿ ಬರಗೂರು ರಾಮಚಂದ್ರಪ್ಪ ಅವರದ್ದು ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತದ ಕೃತಿಯ ಆಶಯ ಈಡೇರಬೇಕಿದ್ದರೆ, ನಮ್ಮ ಮನೆಯಿಂದಲೆ ಮೊದಲು ಸೌಹಾರ್ದ, ಸಮಾನತೆಯ ಬದುಕು ಆರಂಭವಾಗಬೇಕು ಎಂದರು.
ಸಂವಿಧಾನವೇ ನಮ್ಮ ಧರ್ಮ ಎಂದು ಪ್ರತಿಪಾದಿಸಿದ ಅವರು, ಇಂದಿನ ಕಲುಷಿತ ಸಾಮಾಜಿಕ ವ್ಯವಸ್ಥೆ ಸರಿದಾರಿಗೆ ಬರಲು ಸಂವಿಧಾನ ಸಹಕಾರಿಯಾಗಿದೆ ಎಂದರು.
ಕೃತಿಯ ಕುರಿತು ಮಾತನಾಡಿದ ಸಹಾಯಕ ಸಂಶೋಧನಾಧಿಕಾರಿ ಮಲ್ಲಿಕಾರ್ಜುನ ಮಾನ್ಪಡೆ, ಮಾನವೀಯ ಮೌಲ್ಯ, ಭಾತೃತ್ವ ಮತ್ತು ಸೌಹಾರ್ದ ಮಾಯವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿದೆ ಎಂದರು.
ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಕೆ. ಶಿವಶಂಕರ, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಡಾ.ರುದ್ರಪ್ಪ ಕರಿಶೆಟ್ಟಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಗಿರೇಗೌಡ ಅರಳಿಹಳ್ಳಿ, ಸ್ವಾಗತಿಸಿದರೆ, ವೆಂಕನಗೌಡ ಪಾಟೀಲ, ಡಾ.ಚಂದ್ರಪ್ಪ ಸೊಬಟಿ ಮಾತನಾಡಿದರು. ಪ್ರೊ.ರಾಜಶೇಖರ ಕುಂಬಾರ, ಎನ್.ಎಲ್ ನಾರಾಯಣಸ್ವಾಮಿ, ರೇಖಾ ಕಲ್ಮಠ, ಉಮೇಶ ಮಾಳಗಿ, ಜುಬೇದಾ ನಾಯಕ, ಪ್ರಥ್ವಿರಾಜ ಬೆಟಗೇರಿ, ರೇಣುಕಾ ಗುಡಿಮನಿ, ನೇತ್ರಾವತಿ, ಅನೀತಾ, ಶಿವಯೋಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.