ADVERTISEMENT

‘ಜಗವ ಬೆಳಗಿದ ಬಸವಣ್ಣ‘

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 16:38 IST
Last Updated 26 ಏಪ್ರಿಲ್ 2020, 16:38 IST
ಹಾವೇರಿಯ ಬಸವೇಶ್ವರ ವೃತ್ತದಲ್ಲಿರುವ ಬಸವ ಪುತ್ಥಳಿಗೆ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾಲಾರ್ಪಣೆ ಮಾಡಿದರು. ಶಾಸಕ ನೆಹರು ಓಲೇಕಾರ ಇದ್ದಾರೆ 
ಹಾವೇರಿಯ ಬಸವೇಶ್ವರ ವೃತ್ತದಲ್ಲಿರುವ ಬಸವ ಪುತ್ಥಳಿಗೆ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾಲಾರ್ಪಣೆ ಮಾಡಿದರು. ಶಾಸಕ ನೆಹರು ಓಲೇಕಾರ ಇದ್ದಾರೆ    

ಹಾವೇರಿ: ನಗರದ ಬಸವಕೇಂದ್ರ ಹೊಸಮಠದಲ್ಲಿ ಸರಳವಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು.

ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಜಗತ್ತಿನ ಸಾಮಾಜಿಕ ಕ್ರಾಂತಿಯ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಪ್ರಮುಖ ಘಟ್ಟ.ಅಂದು ಕಲ್ಯಾಣದಲ್ಲಿ ಲೋಕಕಲ್ಯಾಣ ಬಯಸಿ ಬಂದವರಿಗೆಲ್ಲಾ ಬದುಕಿನ ನೆಲೆ ಮತ್ತು ಬೆಲೆಗಳನ್ನು ಅವರವರ ಬದುಕಿನ ಮೂಲಗಳಿಂದಲೇ ಒದಗಿಸಿ, ಶುದ್ಧ ಜೀವನ ದರ್ಶನವನ್ನು ಮೆರೆದ ಪರ್ವವದು. ಕಾರ್ತೀಕ ಕತ್ತಲಲ್ಲಿ ಆಕಾಶ ದೀಪವಾಗಿ ನೀ ಬಂದೆ ಬಸವಣ್ಣ ಎಂದು ರಾಷ್ಟ್ರಕವಿ ಕುವೆಂಪು ಹೇಳಿರುವುದು ಅರ್ಥಪೂರ್ಣ ಮಾತುಗಳು ಎಂದು ಹೇಳಿದರು.

‘ಕಗ್ಗತ್ತಲೆಯ ಕಾರ್ಮೋಡ ಕವಿದಿದ್ದ ಸಮಾಜಕ್ಕೆ ದಾರಿದೀಪವಾದರು ಬಸವಣ್ಣನವರು. ಕುಲ ಗೋತ್ರ ವರ್ಣಾಶ್ರಮಗಳಿಂದಾಗಿ ಮಾನವ ಸಮಾಜ ಒಡೆದು ಹೋಳಾಗಿತ್ತು. ಸ್ತ್ರೀಯನ್ನು ಶೂದ್ರಳು ಎಂದು ಪರಿಗಣಿಸಲಾಗಿತ್ತು. ಯಾವುದೇ ಧಾರ್ಮಿಕ ವಿಧಿ- ವಿಧಾನಗಳನ್ನು ಆಚರಿಸುವಂತಿರಲಿಲ್ಲ. ಅಕ್ಕನಿಗೆ ಇಲ್ಲದ ಜನಿವಾರ ಧಾರಣೆ ನನಗೇಕೆ? ಎಂದು ಪ್ರತಿಭಟಿಸುವಲ್ಲಿ ಬಸವಣ್ಣ ಬಾಲಕನಾಗಿದ್ದಾಗಲೇ ಸ್ತ್ರೀವಿಮೋಚನೆಗೆ ಮಹತ್ವಕೊಟ್ಟಿದ್ದರು ಎಂದು ಶ್ರೀಗಳು ವರ್ಣಿಸಿದರು.

ADVERTISEMENT

ಪುರುಷನಷ್ಟೇ ಸ್ತ್ರೀಯು ಸಮರ್ಥಳು ಎಂಬುದನ್ನು ನಾಡಿಗೆ ತೋರಿಸಿಕೊಟ್ಟಿದ್ದ. ಅನುಭವ ಮಂಟಪದಲ್ಲಿ ಎಲ್ಲಾ ಶರಣ ಶರಣೆಯರು ಒಟ್ಟಾಗಿ ಸೇರಿ ಮುಕ್ತವಾಗಿ ಚರ್ಚಿಸುತ್ತಿದ್ದರು. ಬಸವಣ್ಣನವರ ಸಾಮಾಜಿಕ, ಧಾರ್ಮಿಕ, ಆರ್ಥಿಕ ವಾರ್ತೆ ಸೂಜಿಗಲ್ಲಿನಂತೆ ರಾಷ್ಟ್ರದ ನಾನಾ ಭಾಗಗಳಿಂದ ಶರಣರನ್ನು ಕಲ್ಯಾಣಕ್ಕೆ ಆಕರ್ಷಿಸಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.