ADVERTISEMENT

ಬಸವ ಪಂಚಮಿ: ವೃದ್ಧರಿಗೆ ಹಾಲು ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 16:00 IST
Last Updated 13 ಆಗಸ್ಟ್ 2021, 16:00 IST
ಹಾವೇರಿಯ ನಾಗೇಂದ್ರನಮಟ್ಟಿಯ ಶಕ್ತಿ ವೃದ್ಧಾಶ್ರಮದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ‘ಬಸವ ಪಂಚಮಿ’ ಅಂಗವಾಗಿ ವೃದ್ಧರಿಗೆ ಹಾಲು, ಹಣ್ಣು, ಸಿಹಿ ತಿನಿಸು ವಿತರಿಸಲಾಯಿತು
ಹಾವೇರಿಯ ನಾಗೇಂದ್ರನಮಟ್ಟಿಯ ಶಕ್ತಿ ವೃದ್ಧಾಶ್ರಮದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ‘ಬಸವ ಪಂಚಮಿ’ ಅಂಗವಾಗಿ ವೃದ್ಧರಿಗೆ ಹಾಲು, ಹಣ್ಣು, ಸಿಹಿ ತಿನಿಸು ವಿತರಿಸಲಾಯಿತು   

ಹಾವೇರಿ: ‘ಹಾಲು ಪೌಷ್ಟಿಕ ಆಹಾರವಾಗಿದ್ದು, ಸಮೃದ್ಧತೆಯ ಸಂಕೇತವಾಗಿದೆ. ಹಾಲನ್ನು ಅಮೃತಕ್ಕೆ ಸಮಾನ ಎನ್ನುತ್ತಾರೆ. ಇಂತಹ ಹಾಲನ್ನು ಕಲ್ಲಿನ ನಾಗರಿಗೆ ಮತ್ತು ಪೋಸ್ಟರ್‌ಗಳಿಗೆ ಸುರಿದು ವ್ಯರ್ಥ ಮಾಡಬಾರದು.ಹಸಿದ ಮಕ್ಕಳಿಗೆ ಮತ್ತು ವೃದ್ಧಾಶ್ರಮದ ವೃದ್ಧರಿಗೆ ನೀಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದುಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿ ಹೇಳಿದರು.

ಇಲ್ಲಿನ ನಾಗೇಂದ್ರನಮಟ್ಟಿಯ ಶಕ್ತಿ ವೃದ್ಧಾಶ್ರಮದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ‘ಬಸವ ಪಂಚಮಿ’ ಅಂಗವಾಗಿ ವೃದ್ಧರಿಗೆ ಹಾಲು, ಹಣ್ಣು, ಸಿಹಿ ತಿನಿಸು ವಿತರಿಸಿ ಅವರು ಮಾತನಾಡಿದರು.

‘ಜನರು ಧಾರ್ಮಿಕತೆಯ ಹೆಸರಿನಲ್ಲಿ ಮೂಢನಂಬಿಕೆಗಳಿಗೆ ಜೋತು ಬಿದ್ದು, ಪ್ರತಿವರ್ಷ ಲಕ್ಷಾಂತರ ಲೀಟರ್ ಹಾಲನ್ನು ವ್ಯರ್ಥ ಮಾಡುತ್ತಿರುವುದು ವಿಷಾದಕರ ಸಂಗತಿ’ ಎಂದು ಹೇಳಿದರು.

ADVERTISEMENT

ವೇದಿಕೆಯ ತಾಲ್ಲೂಕು ಸಂಚಾಲಕ ಮಾಲತೇಶ ಅಂಗೂರ ಮಾತನಾಡಿ, ‘ಬಸವಾದಿ ಶರಣರು ವೈಜ್ಞಾನಿಕವಾಗಿ ಹಬ್ಬಗಳ ಆಚರಣೆಯನ್ನು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಜನರು ಪ್ರಜ್ಞಾವಂತಿಕೆ ಮೂಡಿಸಿಕೊಳ್ಳಬೇಕಿದೆ. ಕಲ್ಲು ನಾಗರಗಳಿಗೆ ಹಾಲು ಸುರಿದು ಹಾಳುಮಾಡಬಾರದು, ಹಾಲು ಹಾವಿನ ಆಹಾರವಲ್ಲ’ ಎಂದರು.

ಸಾಮಾಜಿಕ ಕಾರ್ಯಕರ್ತ ನಾಸೀರ್‌ಖಾನ್‌ ಪಠಾಣ ಮಾತನಾಡಿ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ, ವೃದ್ಧರಿಗೆ ಹಾಲು ನೀಡಬೇಕು. ಹಾಲು ವಿತರಣೆ ಕೇವಲ ಹಬ್ಬಗಳಿಗೆ ಸೀಮಿತವಾಗಬಾರದು ಎಂದರು.

ಜಯಕರ್ನಾಟಕ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಆನವಟ್ಟಿ,ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎನ್.ಎನ್.ಗಾಳೆಮ್ಮನವರ ಮಾತನಾಡಿದರು.

ನಾಗರಾಜ ಬಡಮ್ಮನವರ, ಜಗದೀಶ ಕನವಳ್ಳಿ, ಚಂದ್ರಹಾಸ ಕ್ಯಾತಣ್ಣನವರ, ಶಿವಬಸಪ್ಪ ಹಲಗಲಿ, ವಿರೂಪಾಕ್ಷಪ್ಪ ಹತ್ತಿಮತ್ತೂರ, ಭೀಮರಾವ್ ಸಂಗೂರ, ಮಂಜುನಾಥ ಇಟಗಿ, ಪುಟ್ಟಪ್ಪ ಸವಣೂರು, ಉಮೇಶ ವಾಗ, ಈರಪ್ಪ ದೊಡ್ಡತಳವಾರ, ವೃದ್ಧಾಶ್ರಮದ ವ್ಯವಸ್ಥಾಪಕ ಕಾಳಪ್ಪ ಚಲವಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.